ವಿ.ಸಿ.ನಾಲಾ ಕಾಮಗಾರಿ ಅವೈಜ್ಞಾನಿಕ, ತಂತ್ರಜ್ಞಾನ ಬಳಕೆ ಮಾಡುತ್ತಿಲ್ಲ: ಬಿಜೆಪಿ ಆರೋಪ

| Published : May 22 2024, 12:53 AM IST

ವಿ.ಸಿ.ನಾಲಾ ಕಾಮಗಾರಿ ಅವೈಜ್ಞಾನಿಕ, ತಂತ್ರಜ್ಞಾನ ಬಳಕೆ ಮಾಡುತ್ತಿಲ್ಲ: ಬಿಜೆಪಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ವಿಸಿ ನಾಲೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಯಾವುದೇ ತಂತ್ರಜ್ಞಾನ ಬಳಕೆ ಮಾಡದೆ ಕಾಮಗಾರಿ ನಡೆಸುತ್ತಿದ್ದಾರೆ. ನಾಲಾ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ನಾಲೆ ಒಂದು ಕಡೆ ತಡೆಗೋಡೆಗೆ ಕಾಂಕ್ರೀಟ್ ನಿರ್ಮಿಸಿದ್ದರೆ ಮತ್ತೊಂದಡೆ ಹಾಗೆ ಬಿಟ್ಟಿದ್ದಾರೆ. ಜತೆಗೆ ಕೆಲವಡೆ ನಾಲೆಯ ತಡೆಗೋಡೆಗೆ ಕಾಂಕ್ರೀಟ್ ಹಾಕದೆಯೇ ಮಣ್ಣಿಗೆ ಕಬ್ಬಿಣ ಹಾಕಿ ಗಾರೆ ಹಾಕುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕೆಆರ್‌ಎಸ್ ಅಣೆಕಟ್ಟೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿಶ್ವೇಶ್ವರಯ್ಯ ನಾಲೆ(ವಿಸಿ) ಕಾಮಗಾರಿಯನ್ನು ಮಂಗಳವಾರ ಬಿಜೆಪಿ ರೈತಮೋರ್ಚಾ ಘಟಕದ ನಿಯೋಗ ಪರಿಶೀಲಿಸಿತು.

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್, ಜಿಲ್ಲಾಧ್ಯಕ್ಷ ಅಶೋಕ್ ಎಸ್.ಡಿ. ಜಯರಾಂ ನೇತೃತ್ವದಲ್ಲಿ ಬಿಜೆಪಿ ನಿಯೋಗ ತಾಲೂಕಿನ ನಾರ್ಥ್ ಬ್ಯಾಂಕ್ ಬಳಿಯಿಂದ ಪಾಂಡವಪುರದ ವರೆಗೆ ವಿಸಿ ನಾಲೆ ಕಾಮಗಾರಿ ಪರಿಶೀಲನೆ ನಡೆಸಿತು.

ಈ ವೇಳೆ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್, ವಿಸಿ ನಾಲೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಯಾವುದೇ ತಂತ್ರಜ್ಞಾನ ಬಳಕೆ ಮಾಡದೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ನಾಲಾ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ನಾಲೆ ಒಂದು ಕಡೆ ತಡೆಗೋಡೆಗೆ ಕಾಂಕ್ರೀಟ್ ನಿರ್ಮಿಸಿದ್ದರೆ ಮತ್ತೊಂದಡೆ ಹಾಗೆ ಬಿಟ್ಟಿದ್ದಾರೆ. ಜತೆಗೆ ಕೆಲವಡೆ ನಾಲೆಯ ತಡೆಗೋಡೆಗೆ ಕಾಂಕ್ರೀಟ್ ಹಾಕದೆಯೇ ಮಣ್ಣಿಗೆ ಕಬ್ಬಿಣ ಹಾಕಿ ಗಾರೆ ಹಾಕುತ್ತಿದ್ದಾರೆ ಎಂದು ದೂರಿದರು.

ಕಾಮಗಾರಿ ಗುತ್ತಿಗೆದಾರ ಸ್ಟಾರ್ ಚಂದ್ರು ಕಾಮಗಾರಿ ಆರಂಭಿಸುವುದನ್ನೇ ನಿಧಾನ ಮಾಡಿದ್ದಾರೆ. ಜತೆಗೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಶೇ.40ರಷ್ಟು ಮಾತ್ರ ಕಾಮಗಾರಿ ಪೂರ್ವಗೊಳಿಸಿದ್ದಾರೆ. ಗುತ್ತಿಗೆದಾರರು ಇನ್ನೂ 10 ದಿನದಲ್ಲಿ ಕಾಮಗಾರಿಯನ್ನು ಪೂರ್ವಗೊಳಿಸುವುದಾಗಿ ಸಬೂಬು ಹೇಳುತ್ತಿದ್ದಾರೆ. ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಅಣೆಕಟ್ಟೆ ನೀರು ಬಂದರೆ ನಾಲೆಗೆ ನೀರು ಹರಿಸದ ಸ್ಥಿತಿ ನಿರ್ಮಿಸಿದ್ದಾರೆ ಎಂದು ಕಿಡಿಕಾರಿದರು.

ಕಾಮಗಾರಿ ಅವೈಜ್ಞಾನಿಕವಾಗಿದ್ದರೂ ಸಹ ರೈತಸಂಘ ಕಾಮಗಾರಿ ವಿರುದ್ಧ ತುಟಿಬಿಚ್ಚಿಲ್ಲ. ಕಾಂಗ್ರೆಸ್ ಹಾಗೂ ರೈತ ಸಂಘದವರು ಇಬ್ಬರು ಸಾಮೀಲಾಗಿದ್ದಾರೆ. ನಾಲೆ ಅವೈಜ್ಞಾನಿಕವಾಗಿ ನಡೆಯುತ್ತಿದ್ದರು ಮೌನ ವಹಿಸಿದ್ದಾರೆ. ಎಲ್ಲಾ ಗೊತ್ತಿದ್ದರು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸುಮ್ಮನಿದ್ದಾರೆ ಎಂದು ಹರಿಹಾಯ್ದರು.

ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶೀಘ್ರವೇ ನಾಲೆಯ ಕಾಮಗಾರಿಯನ್ನು ಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಹರಿಸಿದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಅಶೋಕ್ ಎಸ್.ಡಿ.ಜಯರಾಂ ಮಾತನಾಡಿ, ಜಿಲ್ಲೆಯ ರೈತರ ಅನುಕೂಲಕ್ಕಾಗಿ ಗುತ್ತಿಗೆದಾರರು ನಾಲೆ ಕಾಮಗಾರಿ ಪೂರ್ಣಗೊಳಿಸಿ ಅನುಕೂಲ ಮಾಡಿಕೊಡಬೇಕು, ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು, ನಾಲೆ ಅವೈಜ್ಞಾನಿಕ ಕಾಮಗಾರಿ ವಿರುದ್ಧ ನೀರಾವರಿ ನಿಗಮದ ಅಧಿಕಾರಿಗಳಿಗೆ ದೂರು ನೀಡಲಾಗಿವುದು ಎಚ್ಚರಿಕೆ ನೀಡಿದರು.

ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ್ಯ, ರೈತ ಮೋರ್ಚಾ ಮಂಡಲ ಅಧ್ಯಕ್ಷ ವಿಶ್ವನಾಥ್, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಆಶೊಕ್, ರೈತ ಮೋರ್ಚಾ ಮಾಜಿ ಜಿಲ್ಲಾ ಅಧ್ಯಕ್ಷ ಜೋಗಿಗೌಡ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಮಳವಳ್ಳಿ ಆಶೋಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜವರೇಗೌಡ, ಲಿಂಗರಾಜು, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಸುರೇಶ್‌ ಕನ್ನಂಬಾಡಿ, ಪುರಸಭೆ ಮಾಜಿ ಸದಸ್ಯ ಆರ್.ಆರ್.ರಾಮಲಿಂಗಮಂ(ಡೈರಿ ರಾಮು), ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ನಿರಂಜನ್‌ಬಾಬು ಸೇರಿದಂತೆ ಹಲವರು ಹಜರಿದ್ದರು.