ಸಾರಾಂಶ
ಮಲ್ಲಿಕಾರ್ಜುನ ಸಿದ್ದಣ್ಣವರ
ಹುಬ್ಬಳ್ಳಿ:ಇಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಳೆದ ಒಂದು ವರ್ಷದಿಂದ ಶುರುವಾಗಿರುವ ಕುಲಪತಿ ಪ್ರೊ.ಸಿ ಬಸವರಾಜು ಮತ್ತು ಕುಲಸಚಿವೆ ಅನುರಾಧಾ ವಸ್ತ್ರದ ಮಧ್ಯದ ಶೀತಲ ಸಮರ ಇನ್ನೂ ಮುಂದುವರೆದಿದ್ದು, ದಿನವೂ ಒಂದೊಂದು ಸಮಸ್ಯೆಗಳು ಹುಟ್ಟಿಕೊಳ್ಳುತ್ತ ಇಡೀ ವಿವಿ ಗೊಂದಲದ ಗೂಡಾಗಿದೆ.
ಕುಲಪತಿ ಅವರ ಅಧೀನದಲ್ಲಿ ಕೆಲಸ ಮಾಡಬೇಕಿದ್ದ ಕುಲಸಚಿವೆ ಪ್ರತಿಯೊಂದಕ್ಕೂ ಅಸಹಕಾರ ತೋರುತ್ತಿದ್ದು, ಅವರ ವಿರುದ್ಧ ಶಿಸ್ತುಕ್ರಮ ಕೈಕೊಳ್ಳಬೇಕೆಂದು ವಿವಿಯ ಸಿಂಡಿಕೇಟ್ ಸಭೆ ಒಮ್ಮತದ ತೀರ್ಮಾನ ಕೈಕೊಂಡ ಬಳಿಕವಂತೂ ವಿವಿಯ ಆಡಳಿತ ತಾಳತಪ್ಪಿದೆ.ನೇಮಕಾತಿ ಗೊಂದಲ:
ಸುಪ್ರೀಂ ಕೋರ್ಟ ತೀರ್ಪಿನ (ಉಮಾದೇವಿ ಕೇಸ್) ಅನ್ವಯ ವಿವಿಯಲ್ಲಿನ ಈರನಗೌಡ ಬಿರಾದಾರ ಸೇರಿದಂತೆ ಮೂವರು ಅರೆಕಾಲಿಕ ಸಹಾಯಕ ಪ್ರಾಧ್ಯಾಪಕರನ್ನು ಕಾಯಂಗೊಳಿಸುವ ಪ್ರಸ್ತಾವದ ಕಡತಕ್ಕೆ ಸಹಿ ಹಾಕುವಂತೆ ಕುಲಪತಿಗಳು ಕುಲಸಚಿವರಿಗೆ ಸೂಚಿಸಿದ್ದಾರೆ. ಅದಕ್ಕೆ ಅವರು ಆ ತೀರ್ಪಿನ ಅನ್ವಯ 2006 ಕ್ಕಿಂತ ಮುಂಚೆ ಕನಿಷ್ಠ 10 ವರ್ಷ ಬೋಧನಾ ಅನುಭವ ಹೊಂದಿದವರನ್ನು ಮಾತ್ರ ಕಾಯಂ ಮಾಡಲು ಸಾಧ್ಯವಿದೆ. ಈ ಮೂವರಿಗೆ ಆ ಅರ್ಹತೆ ಇಲ್ಲ. ಹಾಗಾಗಿ ನಾನು ಸಹಿ ಮಾಡುವುದಿಲ್ಲ ಎಂದು ಕುಲಪತಿಗಳ ನಿರ್ದೇಶನವನ್ನು ತಿರಸ್ಕರಿಸಿದ್ದಾರೆ.ಕುಲಸಚಿವರ ಈ ನಿಲುವು ಕುಲಪತಿಗಳನ್ನು ಅಷ್ಟೇ ಅಲ್ಲ ಎಲ್ಲ ಸಿಂಡಿಕೇಟ್ ಸದಸ್ಯರನ್ನೂ ಕೆರಳಿಸಿದೆ. ಸಿಡಿದೆದ್ದ ಅವರೆಲ್ಲ 21.09.2023 ರಂದು ವಿಶೇಷ ಸಿಂಡಿಕೇಟ್ ಸಭೆ ಕರೆದು ಆ ಕಡತಕ್ಕೆ ಸಹಿ ಮಾಡುವ ಅಧಿಕಾರವನ್ನು ವಿವಿ ಸಹಾಯಕ ಕುಲಸಚಿವರಿಗೆ ನೀಡುವ ಮತ್ತು ಕುಲಪತಿಗಳೊಂದಿಗೆ ಸದಾ ಅಸಹಕಾರ ತೋರುತ್ತಿರುವ ಕುಲಸಚಿವರ ವಿರುದ್ಧ ಶಿಸ್ತುಕ್ರಮ ಕೈಕೊಳ್ಳುಂತೆ ಸರ್ಕಾರವನ್ನು ಕೋರುವ ನಿರ್ಣಯ ಕೈಕೊಂಡರು.
ಸಿಂಡಿಕೇಟ್ ವಿಶೇಷ ಸಭೆಯ ನಿರ್ಣಯ ಆಧರಿಸಿ ಕುಲಪತಿಗಳು 26.09.2023 ರಂದು ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರಬರೆದು ವಿವಿಯ ಸುರಳಿತ ಆಡಳಿತಕ್ಕೆ ಕುಲಸಚಿವೆ ಅಡ್ಡಿಯಾಗಿದ್ದು, ಅವರ ಅಸಹಕಾರದಿಂದಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಕೊಳ್ಳಲು ಆಗುತ್ತಿಲ್ಲ. ತಕ್ಷಣ ಅವರ ವಿರುದ್ಧ ಶಿಸ್ತುಕ್ರಮ ಕೈಕೊಳ್ಳಬೇಕೆಂದು ಕೋರಿದ್ದರು.ಈ ಕೋರಿಕೆ ಹೋಗಿ ವರ್ಷವೇ ಕಳೆದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ, ಇತ್ತೀಚೆಗೆ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರ ಎದುರು ದೂರಿನ ಸುರಿಮಳೆಯಾಗಿದೆ. ವಿವಿಯ ಭವಿಷ್ಯದ ದೃಷ್ಟಿಯಿಂದ ಸಚಿವರು ಯಾವುದಾದರೊಂದು ನಿರ್ಧಾರಕ್ಕೆ ಬರುವುದು ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಡವಾದ ಗ್ರಂಥಾಲಯ:2009-22ರ ಅವಧಿಯಲ್ಲಿ ಸುಮಾರು ₹5 ಕೋಟಿಗೂ ಹೆಚ್ಚು ಬೆಲೆಯ ಕೃತಿಗಳನ್ನು ವಿವಿ ತನ್ನ ಗ್ರಂಥಾಲಯಕ್ಕೆ ಖರೀದಿಸಿದೆ. ಆದರೆ, 2022-23ರ ಅವಧಿಯಲ್ಲಿ ಈ ಖರೀದಿ ಗುದ್ದಾಟದಿಂದಾಗಿ ಪುಸ್ತಕ ಖರೀದಿಗಾಗಿ ನಿಗದಿಯಾಗಿದ್ದ ₹1 ಕೋಟಿ ಮೊತ್ತ ಖರ್ಚಾಗದೇ ಹಾಗೆಯೇ ಉಳಿದಿದೆ. ಇದರಿಂದ ಕಾನೂನು ಶಿಕ್ಷಣ ವ್ಯಾಸಂಗಕ್ಕೆ ಅಗತ್ಯವಿರುವ ಹೊಸ ಆವೃತ್ತಿಗಳಿಲ್ಲದೇ ವಿದ್ಯಾರ್ಥಿಗಳು ಪರದಾಡಿದರು.
2019-20ರ ಅವಧಿಯಲ್ಲಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ಇಲ್ಲಿ ಕುಲಸಚಿವರಾಗಿದ್ದಾಗ ಕೋಟಿ ಕೋಟಿ ವ್ಯಯಿಸಿ ಪುಸ್ತಕ ಖರೀದಿಸಲಾಗಿದೆ. ಅವರ ಪತ್ನಿಯಾಗಿರುವ ಅನುರಾಧಾ ವಸ್ತ್ರದ ಅವರು ಪುಸ್ತಕ ಖರೀದಿಗೆ ಹಿಂದೇಟು ಹಾಕುತ್ತಿದ್ದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.ಈ ಆರೋಪಕ್ಕೆ ಸ್ಪಷ್ಟಣೆ ನೀಡಿರುವ ಅನುರಾಧಾ ವಸ್ತ್ರದ ಅವರು "ಕೆಟಿಟಿಪಿ-2000 ಕಾನೂನು ಅನ್ವಯ 5 ಲಕ್ಷಕ್ಕಿಂತ ಹೆಚ್ಚಿನ ಯಾವುದೇ ಖರೀದಿ ವ್ಯವಹಾರವನ್ನು ಟೆಂಡರ್ ಮೂಲಕ ನಡೆಸುವುದು ಕಡ್ಡಾಯ. ಹಿಂದೆ ಟೆಂಡರ್ ಇಲ್ಲದೇ ಖರೀದಿ ಮಾಡಿದ ಪುಸ್ತಕಗಳ ಬಿಲ್ ನೀಡುವಂತೆ ಈಗ ಕೆಲವರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ನಾನು ಅದಕ್ಕೆ ಒಪ್ಪದೇ ಇದ್ದಾಗ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಪತಿ ರಜಿಸ್ಟರ್ ಇದ್ದಾಗ ಕಾನೂನು ಉಲ್ಲಂಘಿಸಿ ಪುಸ್ತಕ ಖರೀದಿಸಿದ್ದರೆ ಬೇಕಿದ್ದರೆ ತನಿಖೆ ಮಾಡಿಸಲಿ, ನನ್ನದೇನೂ ಅಭ್ಯಂತರವಿಲ್ಲ. ಏನೇ ಆದರೂ ನಾನು ಕಾನೂನು ಮೀರಿ ನಡೆದುಕೊಳ್ಳುವುದಿಲ್ಲ " ಎಂದರು.ವಿವಿಯ ಮುಖ್ಯಸ್ಥನಾದ ನನಗೆ ಕುಲಸಚಿವರಿಂದ ಅಗತ್ಯ ಸಹಕಾರ ಸಿಗುತ್ತಿಲ್ಲ. ನಾನಷ್ಟೇ ಅಲ್ಲ ಸಿಂಡಿಕೇಟ್ ನಿರ್ದೇಶನವನ್ನೂ ಅವರು ಪಾಲಿಸುತ್ತಿಲ್ಲ. ಇದು ವಿವಿ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಕಾನೂನು ವಿವಿ ಕುಲಪತಿ ಪ್ರೊ. ಸಿ. ಬಸವರಾಜು ಹೇಳಿದ್ದಾರೆ.
ಓರ್ವ ಸರ್ಕಾರಿ ಅಧಿಕಾರಿಯಾಗಿ ನನಗೆ ಕಾನೂನು ಬಿಟ್ಟು ನಡೆದುಕೊಳ್ಳಲು ಆಗುವುದಿಲ್ಲ. ಆಡಳಿತದ ಎಲ್ಲ ವ್ಯವಹಾರವೂ ಕಾನೂನಿನ ಚೌಕಟ್ಟಿನಲ್ಲೇ ನಡೆಯಬೇಕು ಎಂದು ಕುಲಸಚಿವೆ ಅನುರಾಧಾ ವಸ್ತ್ರದ ತಿಳಿಸಿದ್ದಾರೆ.