ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸ್ಥಾಪಿತವಾಗಿ 107ನೇ ವರ್ಷಕ್ಕೆ ಕಾಲಿಟ್ಟಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದ 2024-25ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಆ.30 ರಂದು ಬೆಳಗ್ಗೆ 9 ಗಂಟೆಗೆ ನಗರದ ವಿಡಿಸಿಸಿ ಬ್ಯಾಂಕಿನ ಪ್ರಧಾನ ಕಚೇರಿ ಆವರಣದಲ್ಲಿ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಹಾಗೂ ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಇಲಾಖೆ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದ ವಿಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 106 ವರ್ಷಗಳಲ್ಲಿ ವಿಡಿಸಿಸಿ ಬ್ಯಾಂಕ್ ಸಾಕಷ್ಟು ಜನಸೇವೆಯನ್ನು ಒದಗಿಸಿದ್ದು, ಅಭಿವೃದ್ಧಿಪಥದತ್ತ ಸಾಗಿದೆ. ಬ್ಯಾಂಕಿನ ಸಾಂಪತ್ತಿಕ ಸ್ಥಿತಿಯು ಎಲ್ಲ ಆರ್ಥಿಕ ಅಂಶಗಳಲ್ಲಿ ಹೆಚ್ಚಿನ ಸಾಧನೆಯಾಗಿದೆ ಎಂದರು.
ಸ್ವಂತ ಬಂಡವಾಳ ₹540 ಕೋಟಿ ಇದ್ದಿದ್ದು, ಈ ಬಾರಿ ₹598 ಕೋಟಿಗಳಷ್ಟಾಗಿದ್ದು, ₹58 ಕೋಟಿ ಹೆಚ್ಚಳವಾಗಿದೆ. ಠೇವಣಿ ₹3495 ಕೋಟಿಗಳಿಂದ ₹3814 ಕೋಟಿಗಳಷ್ಟಾಗಿದ್ದು, ಈ ಬಾರಿ ಠೇವಣಿಯಲ್ಲಿ ₹319 ಕೋಟಿ ಹೆಚ್ಚಳವಾಗಿದೆ. ದುಡಿಯುವ ಬಂಡವಾಳ ₹4701ರಿಂದ ₹4902 ಕೋಟಿಗಳಷ್ಟಾಗಿದ್ದು, ₹201 ಕೋಟಿ ಏರಿಕೆಯಾಗಿದೆ. ಸಾಲ ವಿತರಣೆ ಕೃಷಿಗೆ ₹1864 ಹಾಗೂ ಕೃಷಿಯೇತರ ಸಾಲ ₹1106 ಕೋಟಿ ಸೇರಿ ಒಟ್ಟು ₹2970 ಕೋಟಿ ಸಾಲ ವಿತರಿಸಲಾಗಿದೆ ಎಂದು ವಿವರಿಸಿದರು.ರೈತರಿಗೆ ತೋಟದ ಮನೆ ಕಟ್ಟಲು ಗರಿಷ್ಠ ₹20 ಲಕ್ಷದವರೆಗೆ ಶೇ.10ರ ಬಡ್ಡಿದರದಲ್ಲಿ ಸಾಲ ವಿತರಿಸುವ ಯೋಜನೆಯನ್ನು ರಾಜ್ಯದಲ್ಲೇ ಮೊದಲು ಜಾರಿಗೆ ತರಲಾಗಿದೆ. ಸಾಲ ಮುಂಗಡಗಳ ಬಾಕಿ ಬರತಕ್ಕದ್ದು ₹3281 ಕೋಟಿ ಇದ್ದು, ಕಳೆದ ವರ್ಷದ ₹3112 ಕೋಟಿಗೆ ಹೋಲಿಸಿದಾಗ ₹169 ಕೋಟಿ ಹೆಚ್ಚಾಗಿದೆ. ಹೂಡಿಕೆಗಳು ₹1233 ಕೋಟಿ ಹೆಚ್ಚುವರಿ ಹೂಡಿಕೆ ಮಾಡಲಾಗಿದೆ. ಲಾಭದಲ್ಲಿ ₹8.53 ಕೋಟಿ ಆದಾಯ ತೆರಿಗೆ ಕಟ್ಟಿದ ಬಳಿಕ ₹25.18 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಲಾಭವು ಬ್ಯಾಂಕಿನ ಇತಿಹಾಸದಲ್ಲೇ ಅತಿ ಹೆಚ್ಚಿನ ಲಾಭವಾಗಿದೆ. ಒಟ್ಟು ವ್ಯವಹಾರವು ₹6607 ಕೋಟಿಗಳಷ್ಟಿದ್ದು, ಈ ವರ್ಷಾಂತ್ಯಕ್ಕೆ ₹7095 ಕೋಟಿಯಾಗಿದ್ದು, ₹488 ಕೋಟಿ ಹೆಚ್ಚಳವಾಗಿದೆ. ಅನುತ್ಪಾದಕ ಆಸ್ತಿ ₹3281 ಕೋಟಿಗಳಲ್ಲಿ ನಿಷ್ಕ್ರಿಯ ಆಸ್ತಿ ₹179.59 ಕೋಟಿಗಳಷ್ಟಿದೆ. ಎನ್‌ಪಿಎ ಪ್ರಮಾಣ ಶೇ.5.20ರಷ್ಟಿದ್ದು, ನೆಟ್ ಎನ್‌ಪಿಎ ಪ್ರಮಾಣ ಶೂನ್ಯವಾಗಿದೆ. ಬಂಡವಾಳ ಅನುಪಾತ ಸಿಆರ್‌ಎಆರ್ ಶೇ.9ರಷ್ಟು ಇರಬೇಕಿದ್ದು, ಶೇ.13.22ರಷ್ಟಿದೆ ಎಂದರು.
ಈ ವರ್ಷ ₹85 ಕೋಟಿ ರುಪಾಯಿ ವೆಚ್ಚದಲ್ಲಿ ರಾಜ್ಯದ ಎಲ್ಲ ಸಹಕಾರಿಗಳಿಗೆ ಅನುಕೂಲವಾಗುವಂತೆ ತರಬೇತಿ ಕ್ಯಾಂಪಸ್ ಕಟ್ಟಡವನ್ನು ಆರಂಭ ಮಾಡಲಾಗುತ್ತಿದೆ. ಇಲ್ಲಿ ಸುಮಾರು 2300 ರಿಂದ 2500 ಜನರಿಗೆ ಏಕಕಾಲಕ್ಕೆ ತರಬೇತಿ ಕೊಡುವ ವ್ಯವಸ್ಥೆ ಆಗಲಿದೆ ಎಂದರು. ರಾಜ್ಯದಲ್ಲಿ ರೈತರಿಗೆ ಕೃಷಿ ಸಾಲ ಕೊಡುವುದರಲ್ಲಿ ನಾವು 3ನೇ ಸ್ಥಾನದಲ್ಲಿದ್ದೇವೆ. 24 ಸಕ್ಕರೆ ಕಾರ್ಖಾನೆಗಳಿಗೆ ಸಹಾಯ ಮಾಡಿದ್ದೇವೆ ಎಂದರು. ನಬಾರ್ಡ್‌ನವರು ಕೊಡುತ್ತಿದ್ದ ಪುನರ್ಧನ ಕಡಿಮೆಯಾಗಿದೆ, ರೈತರಿಗಾಗಿ ಇರುವ ನಬಾರ್ಡ್ ನವರು ಕೇವಲ 13 ಪರ್ಸೆಂಟ್ ಕೊಡುತ್ತಿದ್ದಾರೆ, ಇದು ರೈತರಿಗೆ ಕಷ್ಟವಾಗುತ್ತಿದೆ. ಇದನ್ನು ರಾಜ್ಯದ ಹಾಗೂ ದೇಶದ ಎಂಪಿಗಳು ಗಮನಹರಿಸಬೇಕು ಎಂದರು.ನಿರ್ದೇಶಕರಾದ ಚಂದ್ರಶೇಖರಗೌಡ ಪಾಟೀಲ ಮನಗೂಳಿ, ಸುರೇಶ ಬಿರಾದಾರ, ಶೇಖರ ದಳವಾಯಿ, ಕಲ್ಲನಗೌಡ ಪಾಟೀಲ, ಸಿಇಒ ಎಸ್.ಎ.ಢವಳಗಿ, ಸಹಕಾರಿ ಸಂಘಗಳ ಉಪನಿಭಂದಕಿ ಎಸ್.ಕೆ.ಭಾಗ್ಯಶ್ರೀ, ಆಡಳಿತ ಮಂಡಳಿ ಸಲಹೆಗಾರ ಕೆ.ಕೊಟ್ರೇಶ ಉಪಸ್ಥಿತರಿದ್ದರು.
ಬಾಕ್ಸ್...ಸಚಿವ ಶಿವಾನಂದ ಪಾಟೀಲರು 1997ರಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಮೇಲೆ ಇಲ್ಲಿಯವರೆಗೆ ಸಾಕಷ್ಟು ಲಾಭ ಗಳಿಸಿದೆ. 2002 ರವರೆಗೆ ಕೇವಲ ₹33.26 ಕೋಟಿಯಿದ್ದ ಲಾಭ ಇದೀಗ ₹233.68 ಕೋಟಿಗೆ ತಲುಪಿದ್ದು, ಶೇ.97.44 ರಷ್ಟು ಲಾಭವಾಗಿದೆ. ಕೇವಲ ₹63 ಸಾವಿರ ಬಂಡವಾಳದಲ್ಲಿ ಆರಂಭವಾದ ಬ್ಯಾಂಕ್ ಇದೀಗ 51 ಶಾಖೆಗಳನ್ನು ಹೊಂದಿದ್ದು, ₹4904 ಕೋಟಿ ದುಡಿಯುವ ಬಂಡವಾಳ ಹೊಂದಿದೆ. 1999 ರಿಂದ 2000 ರವರೆಗೆ ನಬಾರ್ಡ್‌ನಿಂದ 10 ಬಾರಿ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ಬ್ಯಾಂಕೋದಿಂದ ವಿಶಿಷ್ಟ ಸಾಧನೆಗಾಗಿ 5 ಪ್ರಶಸ್ತಿಗಳು ಲಭಿಸಿವೆ.