ವೀರ ಮದಕರಿ ನಾಯಕ ಧೈರ್ಯ, ಸ್ವಾಭಿಮಾನ, ನಾಡ ಪ್ರೇಮದ ಪ್ರತೀಕವಾಗಿದ್ದು, ನಾಡಿನ ಇತಿಹಾಸದಲ್ಲಿ ಶೌರ್ಯ, ಸಾಹಸ, ಸ್ವಾಭಿಮಾನ ಮತ್ತು ನಾಡಪ್ರೇಮಕ್ಕೆ ಹೆಸರಾದ ಅನೇಕ ವೀರರಲ್ಲಿ ಚಿತ್ರದುರ್ಗದ ಪಾಳೆಗಾರರಿಗೆ ಅತ್ಯಂತ ವಿಶಿಷ್ಟ ಸ್ಥಾನವಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ವೀರ ಮದಕರಿ ನಾಯಕ ಧೈರ್ಯ, ಸ್ವಾಭಿಮಾನ, ನಾಡ ಪ್ರೇಮದ ಪ್ರತೀಕವಾಗಿದ್ದು, ನಾಡಿನ ಇತಿಹಾಸದಲ್ಲಿ ಶೌರ್ಯ, ಸಾಹಸ, ಸ್ವಾಭಿಮಾನ ಮತ್ತು ನಾಡಪ್ರೇಮಕ್ಕೆ ಹೆಸರಾದ ಅನೇಕ ವೀರರಲ್ಲಿ ಚಿತ್ರದುರ್ಗದ ಪಾಳೆಗಾರರಿಗೆ ಅತ್ಯಂತ ವಿಶಿಷ್ಟ ಸ್ಥಾನವಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.ಮಂಗಳವಾರ ಪಟ್ಟಣದ ವಾಲ್ಮೀಕಿ ಭವನದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಮಾಜ, ಶ್ರೀ ಮಹರ್ಷಿ ವಾಲ್ಮೀಕಿ ಯುವ ವೇದಿಕೆ, ಶ್ರೀ ಮಹರ್ಷಿ ವಾಲ್ಮೀಕಿ ವಿದ್ಯಾವರ್ಧಕ ಸಂಘ, ಶ್ರೀ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘ ನಿ.,ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ ತಾ.ಘಟಕದ ವತಿಯಿಂದ ನಡೆದ ರಾಜವೀರ ಮದಕರಿ ನಾಯಕರ 284ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವೀರ ಮದಕರಿ ನಾಯಕರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು
ವೀರ ಮದಕರಿ ನಾಯಕನ ಬದುಕು, ಹೋರಾಟ ಮತ್ತು ಪರಂಪರೆ ಚಿತ್ರದುರ್ಗದ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದೆ ಎಂದ ಅವರು, ಕರ್ನಾಟಕದ ಇತಿಹಾಸದಲ್ಲಿ ಶೌರ್ಯ,ಸಾಹಸ, ಸ್ವಾಭಿಮಾನ ಮತ್ತು ನಾಡಪ್ರೇಮಕ್ಕೆ ಹೆಸರಾದ ಅನೇಕ ವೀರರಲ್ಲಿ ಚಿತ್ರದುರ್ಗದ ಪಾಳೆಗಾರರ ಇತಿಹಾಸಕ್ಕೆ ವಿಶಿಷ್ಟ ಸ್ಥಾನವಿದೆ ಎಂದರು. ಇತಿಹಾಸದಲ್ಲಿ ವೀರ ಮದಕರಿ ನಾಯಕನ ಹೆಸರು ಇಂದಿಗೂ ಜನಮಾನಸದಲ್ಲಿ ಗೌರವದಿಂದ ನೆನಪಿಸಿಕೊಳ್ಳಲ್ಪಡುತ್ತದೆ. ಚಿತ್ರದುರ್ಗದ ಕೋಟೆ, ಅದರ ಭದ್ರತೆ, ಯುದ್ಧತಂತ್ರ ಮತ್ತು ಸ್ವತಂತ್ರ ಆಡಳಿತದ ಹೋರಾಟಗಳೊಂದಿಗೆ ಮದಕರಿ ನಾಯಕನ ಹೆಸರು ಬೆಸೆದುಕೊಂಡಿದೆ ಎಂದು ತಿಳಿಸಿದರು.ವೀರ ಮದಕರಿ ನಾಯಕ ಚಿತ್ರದುರ್ಗದ ಮಣ್ಣಿನಲ್ಲಿ ಅರಳಿದ ಮಹಾನ್ ನಾಯಕ ಎಂದು ಬಣ್ಣಿಸಿದ ಅವರು, ನಾಯಕ ವಂಶದ ಪಾಳೇಗಾರರು ಕೋಟೆಯ ರಕ್ಷಣೆ, ಆಡಳಿತ ಮತ್ತು ಸೈನಿಕ ಸಾಮರ್ಥ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಈ ಪರಂಪರೆಯಲ್ಲಿ ಮದಕರಿ ನಾಯಕನು ಪ್ರಮುಖ ಐತಿಹಾಸಿಕ ವ್ಯಕ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ. ನಾಡಿನ ಮಹಾನ್ ವೀರರ ಪರಂಪರೆಗೆ ಬಹು ದೊಡ್ಡ ಕೊಡುಗೆಯನ್ನು ಸಲ್ಲಿಸಿದ ವೀರ ಮದಕರಿ ನಾಯಕರ ಸಹಿತ ಎಲ್ಲ ಮಹಾನ್ ವೀರರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಕರೆ ನೀಡಿದರು.
ಆರಂಭದಲ್ಲಿ ಕ್ಷೇತ್ರ ದೇವತೆ ಹುಚ್ಚುರಾಯಸ್ವಾಮಿ ದೇವಸ್ಥಾನದಿಂದ ಪಟ್ಟಣದ ವಿವಿಧ ಬೀದಿಗಳಲ್ಲಿ ಬೃಹತ್ ಬೈಕ್ ರಾಲಿ ನಡೆಸಿ ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಾಲ್ಮೀಕಿ ಯುವ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಂತೋಷ್ ಫಕೀರಪ್ಪ, ಸಂಚಾಲಕರಾದ ನಟರಾಜ್ ಬಗನಗಟ್ಟೆ, ಬಸವರಾಜಪ್ಪ ನೆಲವಾಗಿಲು, ರಾಜು ಹೊಸನಗರ, ಕಾಗಿನೆಲೆ ರಂಗಪ್ಪ, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಂಡಾರಿ ಮಾಲತೇಶ್, ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ, ಸುಧೀರ್ ಮಾರವಳ್ಳಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.