ವೀರ ಸೇನಾನಿ ತಿಮ್ಮಯ್ಯ ಸಾಹಸಗಾಥೆ ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು: ಮೇಜರ್ ಬಿ.ಎ.ನಂಜಪ್ಪ

| Published : Mar 29 2024, 12:47 AM IST

ವೀರ ಸೇನಾನಿ ತಿಮ್ಮಯ್ಯ ಸಾಹಸಗಾಥೆ ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು: ಮೇಜರ್ ಬಿ.ಎ.ನಂಜಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ನಡೆಯಿತು. ಮೇಜರ್ ಬಿದ್ದಂಡ ಎ. ನಂಜಪ್ಪ ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವೀರ ಅಮರ ಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಸಾಹಸಗಾಥೆಯನ್ನು ವಿದ್ಯಾರ್ಥಿಗಳಿಗೆ ನಿರಂತರ ಪರಿಚಯಿಸುವ ಕಾರ್ಯವಾಗಬೇಕು ಎಂದು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಮೇಜರ್ ಬಿದ್ದಂಡ ಎ. ನಂಜಪ್ಪ ತಿಳಿಸಿದ್ದಾರೆ.

ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶ ವಿದೇಶಿಗರು ಜನರಲ್ ತಿಮ್ಮಯ್ಯ ಅವರ ಬಗ್ಗೆ ಅಪಾರ ಅಭಿಮಾನ ಮತ್ತು ಗೌರವ ಹೊಂದಿದ್ದಾರೆ. ಕೊಡಗಿನ ವಿದ್ಯಾರ್ಥಿಗಳಲ್ಲಿ ಕೂಡ ತಿಮ್ಮಯ್ಯ ಅವರ ಬಗ್ಗೆ ಅಭಿಮಾನ ಮೂಡಿಸಬೇಕು, ಅವರ ಆದರ್ಶಗಳನ್ನು ತಿಳಿಹೇಳಬೇಕು ಎಂದರು.

ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆ ಸನ್ನಿಸೈಡ್ ಸ್ಮಾರಕ ಈಗ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಭವನವಾಗಿದೆ. ಅಲ್ಲಿ ಅವರ ಇತಿಹಾಸ ಮಾತ್ರವಲ್ಲ, ಭಾರತೀಯ ಸೇನೆಯ ಇತಿಹಾಸವನ್ನು ತಿಮ್ಮಯ್ಯ ಅವರ ಮೂಲಕ ತೆರೆದಿಡಲಾಗಿದೆ. ಅಲ್ಲಿನ ಪ್ರತಿ ಕೋಣೆಯು ಸೈನಿಕನ ಕಥೆಯನ್ನು ಹೇಳುತ್ತಿದೆ. ಬೆಂಗಳೂರಿನ ಬ್ರಿಟಿಷ್ ಕಾಟನ್ ಶಾಲೆಯಲ್ಲಿ ಶಿಕ್ಷಣ ಪಡೆದ ತಿಮ್ಮಯ್ಯ ಅವರು ಕ್ರೀಡಾಕೂಟದಲ್ಲಿ ಕ್ರಿಯಾಶೀಲರಾಗಿದ್ದರು. ಸೈನಿಕರ ನಾಡು ಎಂಬ ಕೀರ್ತಿ ಹೊಂದಿರುವ ಕೊಡಗಿನಲ್ಲಿ ತಿಮ್ಮಯ್ಯ ಮ್ಯೂಸಿಯಂ ರೂಪುಗೊಂಡಿರುವುದು ಭಾರತಕ್ಕೆ ಹೆಮ್ಮೆ. ವಿದ್ಯಾರ್ಥಿಗಳಿಗೆ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಪರಿಚಯ ಮಾಡಿಕೊಟ್ಟು ಸೇನಾ ಸಾಹಸದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಜನರಲ್ ತಿಮ್ಮಯ್ಯ ಅವರ ಎರಡು ಪುಸ್ತಕಗಳನ್ನು ನಾನು ಓದಿದ್ದೇನೆ, ಅವರು ಅತ್ಯುತ್ತಮ ನಾಯಕರಾಗಿದ್ದರು. ಸ್ವಾಂತತ್ರ್ಯ ಭಾರತದ ಸೇನಾ ದಂಡನಾಯಕನಾಗಿ ಸೈನಿಕರ ನೆಚ್ಚಿನ ಸೇನಾನಿಯಾಗಿದ್ದ ಜನರಲ್ ತಿಮ್ಮಯ್ಯ ಅವರ ಬದುಕೇ ದೇಶ ಸೇವೆಗಾಗಿ ಮುಡಿಪಾಗಿಟ್ಟರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಬಿ.ಎ. ನಂಜಪ್ಪ ಅವರು, ವಿದ್ಯಾರ್ಥಿಗಳಿಗೆ ಜನರಲ್ ತಿಮ್ಮಯ್ಯ ಅವರ ಜೀವನ ಚರಿತ್ರೆಯನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜದ ಉಪಾಧ್ಯಕ್ಷ ಹಾಗೂ ತಿಮ್ಮಯ್ಯ ಶಾಲೆಯ ಕಾರ್ಯಾಧ್ಯಕ್ಷ ನಂದಿನೆರವಂಡ ಚೀಯಣ್ಣ, ಜನರಲ್ ಕೆ.ಎಸ್. ತಿಮ್ಮಯ್ಯ ಅವರು ಭಾರತೀಯ ಸೇನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಸೇನೆಯನ್ನು ಬಲಿಷ್ಠಗೊಳಿಸುವಲ್ಲಿ ಶ್ರಮಿಸಿದ್ದರು. ಕಾಫಿ ಬೆಳೆಗಾರರು ಹಾಗೂ ಉತ್ತಮ ಕ್ರೀಡಾಪಟುವಾಗಿಯೂ ಯಶಸ್ಸು ಸಾಧಿಸಿದ್ದರು ಎಂದರು.

1906 ರ ಮಾರ್ಚ್ 31ರಂದು ಕೊಡಂದೇರ ಕುಟುಂಬದ ತಿಮ್ಮಯ್ಯ ಹಾಗೂ ಸೀತಮ್ಮ ದಂಪತಿಯ ಪುತ್ರನಾಗಿ ಜನಿಸಿದ ತಿಮ್ಮಯ್ಯ ಅವರು ಸೇನಾ ಕ್ಷೇತ್ರದ ಮೂಲಕ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರ ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು ಎಂದು ಕರೆ ನೀಡಿದರು. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ, ತಿಮ್ಮಯ್ಯ ಶಾಲೆಯ ಪ್ರಾಂಶುಪಾಲರಾದ ಬಿ.ಎಂ. ಸರಸ್ವತಿ, ಕಾರ್ಯನಿರ್ವಾಹಕಿ ಮಕ್ಕಾಟಿರ ಪೊನ್ನಮ್ಮ, ಕರೆಸ್ಪಾಂಡೆಂಟ್ ಕನ್ನಂಡ ಕವಿತಾ ಬೊಳ್ಳಪ್ಪ, ನಿರ್ದೇಶಕ ಮಂಡೀರ ಸದಾ ಮುದ್ದಪ್ಪ, ಹಿರಿಯ ಸಲಹೆಗಾರರಾದ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಶಿಕ್ಷಕರು, ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕರಾದ ಬಬೀನ ಜೀವನ್ ಸ್ವಾಗತಿಸಿದರು. ಎ.ಪಿ. ಪ್ರಮೀಳಾ, ನಮಿತಾ ಆರ್. ರಾವ್‌, ಕೆ.ಎನ್. ಭರತ್ ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್. ಪೊನ್ನಮ್ಮ ಅತಿಥಿಗಳ ಪರಿಚಯ ಮಾಡಿದರು. ಕ್ರೀಡಾ ನಾಯಕಿ ದಿಯಾ ದೇಚಮ್ಮ ವಂದಿಸಿದರು.

ಕಾರ್ಯಕ್ರಮದಲ್ಲಿ ಮೇಜರ್ ಬಿದ್ದಂಡ ಎ. ನಂಜಪ್ಪ ಅವರನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ನಡೆದ 1ನೇ ತರಗತಿ ಮತ್ತು 2ನೇ ತರಗತಿ ವಿದ್ಯಾರ್ಥಿಗಳ ಹೂಪ್ ಟ್ರೀ, 3 ರಿಂದ 5ನೇ ತರಗತಿ ವಿದ್ಯಾರ್ಥಿಗಳ ಅಮ್ರೆಲ ಡ್ರಿಲ್ ಮತ್ತು 6 ರಿಂದ 9ನೇ ತರಗತಿ ವಿದ್ಯಾರ್ಥಿಗಳ ಕೋಲ್ ಡ್ರಿಲ್ ಮತ್ತು ಕರಾಟೆ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಬೆಳ್ಳಿ ಮಹೋತ್ಸವದ ಪ್ರಯುಕ್ತ ವಿವಿಧ ವಿಭಾಗದಲ್ಲಿ ನಡೆದ ಕ್ರೀಡಾಕೂಟದ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು. ನಾಳೆ ಸಾಂಸ್ಕೃತಿಕ ಕಾರ್ಯಕ್ರಮ: ಮಾ.30ರಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮೈಸೂರಿನ ಎಸ್‌ಬಿಆರ್‌ಆರ್ ಮಹಾಜನ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥರಾದ ಹರೀಶ್ ಕೊಡಂದೇರ ಭಾಗವಹಿಸಲಿದ್ದು, ತಿಮ್ಮಯ್ಯ ಶಾಲೆಯ ಕರೆಸ್ಪಾಂಡೆಂಟ್ ಕನ್ನಂಡ ಕವಿತಾ ಬೊಳ್ಳಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮಾ.31ರಂದು ಕೊಡವ ಸಮಾಜ ಮತ್ತು ತಿಮ್ಮಯ್ಯ ಶಾಲೆಯ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಮೇರಿಯಂಡ ನಾಣಯ್ಯ, ಕಾಫಿ ಬೆಳೆಗಾರ ಹಾಗೂ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ ಪಾಲ್ಗೊಳ್ಳಲಿದ್ದಾರೆ.