ವೀರಭದ್ರಸ್ವಾಮಿ ವಿಜೃಂಭಣೆಯ ದೊಡ್ಡ ರಥೋತ್ಸವ ಸಂಪನ್ನ

| Published : May 23 2024, 01:06 AM IST

ವೀರಭದ್ರಸ್ವಾಮಿ ವಿಜೃಂಭಣೆಯ ದೊಡ್ಡ ರಥೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಗ್ರಾಮದೇವರಾದ ಶ್ರೀ ವೀರಭದ್ರಸ್ವಾಮಿ ದೇವರ ರಥೋತ್ಸವವು ಭಕ್ತಿ, ಶ್ರದ್ಧೆಯಿಂದ ಬುಧವಾರ ಜರುಗಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಪ್ರತಿ ವರ್ಷದಂತೆ ಈ ವರ್ಷವೂ ನಗರದ ಗ್ರಾಮದೇವರಾದ ಶ್ರೀ ವೀರಭದ್ರಸ್ವಾಮಿ ದೇವರ ರಥೋತ್ಸವ ಭಕ್ತಿ, ಶ್ರದ್ಧೆ, ವಿಜೃಂಭಣೆಯಿಂದ ನಡೆಯಿತು.

ಚಳ್ಳಕೆರೆ ತಾಲ್ಲೂಕು ಸೇರಿದಂತೆ ರಾಜ್ಯದ ಹಲವಾರು ಭಾಗಗಳಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಗೆ ನಮಿಸಿದರು. ಈ ಬಾರಿಯ ವಿಶೇಷವೆಂದರೆ ಶ್ರೀ ವೀರಭದ್ರಸ್ವಾಮಿ ಜಾತ್ರೆಗೆ ವರುಣ ರಾಯನ ಕರುಣೆಯಾಗಿದ್ದು, ತಾಲ್ಲೂಕಿನಾ ದ್ಯಂತ ಉತ್ತಮ ಮಳೆಯಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಮೇ ೨೨ರ ಬುಧವಾರ ಬೆಳಗಿನ ಜಾವ ಶ್ರೀ ಸ್ವಾಮಿಯ ದೇವಸ್ಥಾನದ ಮುಂದೆ ಅಗ್ನಿಕುಂಡ ಕಾರ್ಯಕ್ರಮ ನಡೆಯಿತು. ಬೆಳಗಿನ ನಸುಕಿನಲ್ಲೂ ಸಹ ಈ ಬಾರಿ ಅತಿ ಹೆಚ್ಚಿನ ಭಕ್ತರು ಅಗ್ನಿಕುಂಡ ಕಾರ್ಯಕ್ರಮವನ್ನು ವೀಕ್ಷಿಸಿದರು. ದೇವಸ್ಥಾನದ ಸುತ್ತಮುತ್ತಲಿನ ಗಲ್ಲಿಗಲ್ಲಿಗಳಲ್ಲಿ ಬೆಳಗಿನ ಜಾವ ೩ರ ಸಮಯಕ್ಕೆ ಭಕ್ತರು ಜಮಾಯಿಸಿದ್ದರು. ಪೂಜಾ ಕಾರ್ಯ ಗಳು, ಪುರಂತರ ವೀರನಾಟ್ಯದ ನಂತರ ಸುಮಾರು ೪.೩೦ಕ್ಕೆ ಅಗ್ನಿಕುಂಡ ಕಾರ್ಯಕ್ರಮ ಆರಂಭವಾಯಿತು. ಹರಿಕೆ ಹೊತ್ತ ಭಕ್ತರು ಸ್ವಾಮಿಯ ನಾಮಸ್ಮರಣೆ ಮಾಡುತ್ತಾ ಅಗ್ನಿಕುಂಡ ಹಾಯ್ದರು.

ಸಂಜೆ ೪.೫೦ಕ್ಕೆ ಶ್ರೀ ಸ್ವಾಮಿಯ ದೊಡ್ಡ ರಥೋತ್ಸವವನ್ನು ನೆರೆದಿದ್ದ ಸಾವಿರಾರು ಭಕ್ತರು ಜಯಕಾರಗಳೊಂದಿಗೆ ರಥವನ್ನು ಎಳೆದರು. ರಥದ ಎರಡೂ ಬದಿಯಲ್ಲೂ ನಿಂತ ಭಕ್ತರು ರಥದ ಮೇಲೆ ಪದ್ಧತಿಯಂತೆ ಬಾಳೆ, ಸೂರಬೆಲ್ಲ ಮುಂತಾದವುಗಳನ್ನು ತೂರಿ ಇಷ್ಟಾರ್ಥ ಈಡೇರಿಸುವಂತೆ ಬೇಡಿದರು.

ಸುಮಾರು ೧೦ ಸಾವಿರಕ್ಕೂ ಹೆಚ್ಚು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ರಸ್ತೆಯ ಎರಡೂ ಬದಿಯ ಮನೆಗಳ ಮೇಲೆ ಸಹ ಹತ್ತಿ ನಿಂತು ಭಕ್ತರು ರಥೋತ್ಸವವನ್ನು ವೀಕ್ಷಿಸಿದರು. ಹರಕೆ ಹೊತ್ತ ನೂರಾರು ಭಕ್ತರು ಶ್ರೀ ಸ್ವಾಮಿಗೆ ಭಾರಿ ಗಾತ್ರದ ಹೂವಿನ ಹಾರಗಳನ್ನು ಮೆರವಣಿಗೆ ಮೂಲಕ ತಂದು ರಥಕ್ಕೆ ವಿಶೇಷವಾಗಿ ಸಮರ್ಪಿಸಿದರು.

ಧರ್ಮದರ್ಶಿ ಗೌಡ್ರ ರಾಜಣ್ಣ, ಗ್ರಾಮದ ಶಾನಭೋಗರಾದ ಪಿ.ವಿ.ಸುಬ್ಬಣ್ಣ, ಕುಮಾರಸ್ವಾಮಿ, ಪಣೀಂದ್ರ ಅನಂತ ಪ್ರಸಾದ್, ಸಿ.ಎಸ್.ಗೋಪಿನಾಥ, ದೇವಸ್ಥಾನದ ಆಯಗಾರರಾದ ಗೌಡ್ರನಾಗಣ್ಣ, ಗೌಡ್ರಚಿಕ್ಕಣ್ಣ, ಪಿ.ತಿಪ್ಪೇಸ್ವಾಮಿ, ದಳವಾಯಿಮೂರ್ತಿ, ಸೂರಯ್ಯ, ಮಂಜು, ಟೈಲರ್‌ ವೀರೇಶ್, ದೇವಿಪ್ರಸಾದ್, ನಾಗರಾಜು, ಪೂಜಾರಾದ ಶಾಂತಕುಮಾರ್, ಸುರೇಶ್‌ಕುಮಾರ್, ಕುಮಾರಸ್ವಾಮಿ, ಕಾಂಗ್ರೆಸ್ ಹಿರಿಯ ಮುಖಂಡ ಟಿ.ಪ್ರಭುದೇವ್, ಶಂಕರ, ಹೊಸಮನೆಸ್ವಾಮಿ, ನಗರಸಭೆಯ ಸದಸ್ಯರು ಪಾಲ್ಗೊಂಡಿದ್ದರು.

ನಗರದಲ್ಲಿ ಇಂದು ಯಶಸ್ವಿಯಾಗಿ ನಡೆದ ಶ್ರೀವೀರಭದ್ರಸ್ವಾಮಿ ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಹಾಗೂ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಜಾತ್ರಾ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ರಕ್ಷಣಾಧಿಕಾರಿ ಧಮೇಂದ್ರಕುಮಾರ್‌ಮೀನಾ, ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ ಮಾರ್ಗ ದರ್ಶನದಲ್ಲಿ ಡಿವೈಎಸ್ಪಿ ಟಿ.ಬಿ.ರಾಜಣ್ಣ, ಇನ್ಸ್‌ಪೆಕ್ಟರ್‌ ಕೆ.ಕುಮಾರ್ ಮತ್ತು ಸಿಬ್ಬಂದಿ ವರ್ಗ ವಿಶೇಷ ಬಂದೋಬಸ್ತನ್ನು ನಿಯೋಜಿಸಿದ್ದರು.

೩೦ ಲಕ್ಷಕ್ಕೆ ಮುಕ್ತಿಬಾವುಟ ಹರಾಜು: ಮುಕ್ತಿ ಬಾವುಟ ಹರಾಜು ಕಾರ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌, ಚಿತ್ರದುರ್ಗ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ), ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಮಗದ ಅಧ್ಯಕ್ಷ ಟಿ.ರಘುಮೂರ್ತಿ ಸೇರಿದಂತೆ ಹಲವಾರು ಗಣ್ಯರು ಹರಾಜಿನ ಸಮಯದಲ್ಲಿ ಉಪಸ್ಥಿತರಿದ್ದು, ಸಚಿವ ಡಿ.ಸುಧಾಕರ ೨೭ ಲಕ್ಷಕ್ಕೆ ಕೂಗಿದರೆ, ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ೩೦ ಲಕ್ಷಕ್ಕೆ ಅಂತಿಮವಾಗಿ ಮುಕ್ತಿಬಾವುಟವನ್ನು ಹರಾಜಿನಲ್ಲಿ ಪಡೆದರು.ಸಿಂತಾಲಪಾಪಮ್ಮಗೆ ವಿಶೇಷ ಪೂಜೆ

ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಸಮುದಾಯಗಳ ಹಲವಾರು ಆಚರಣೆಗಳು ಇಂದಿಗೂ ಜೀವಂತಿಕೆಯಾಗಿ ಹಬ್ಬಹರಿದಿನ ಜಾತ್ರೆ ಸಂದರ್ಭದಲ್ಲಿ ಅನಾವರಣಗೊಳ್ಳುತ್ತವೆ. ಚಳ್ಳಕೆರೆ ತಾಲ್ಲೂಕು ಹಲವಾರು ರಾಜಮನೆತನಗಳ ಆಳ್ವಿಕೆ ಸಂದರ್ಭದಲ್ಲಿ ಬಿಟ್ಟು ಹೋದ ಎಷ್ಟೋ ಆಚರಣೆಗಳು ಇಂದಿಗೂ ನಡೆದು ಬಂದಿವೆ.

ನಗರದ ಹೊರವಲಯದಲ್ಲಿ ನಿಗಡಲು ಸಂಸ್ಥಾನದ ಧೀರ ಮಹಿಳೆ ಎಂದೇ ಕರೆಸಿಕೊಳ್ಳುವ ಸಿಂತಾಲಪಾಪಮ್ಮನ ಸಮಾಧಿಗೆ ತಾಲ್ಲೂಕಿನ ಸುತ್ತಮುತ್ತಲ ಜನರು, ನನ್ನಿವಾಳ ಭಾಗದ ಕೆಲ ಕಟ್ಟಮನೆಯವರೂ ಸೇರಿದಂತೆ ಹಲವಾರು ಸಮುದಾಯದವರು ಪೂಜೆ ಸಲ್ಲಿಸಿ ವೀರಭದ್ರಸ್ವಾಮಿ ಜಾತ್ರೆಯ ರಥೋತ್ಸವದಲ್ಲಿ ಭಾಗವಹಿಸುವ ಪ್ರತೀತಿ ಇಂದಿಗೂ ನಡೆದು ಬಂದಿದೆ. ಗ್ರಾಮ ದೇವರಾದ ವೀರಭದ್ರಸ್ವಾಮಿಯ ಅಗ್ನಿಕುಂಡ ಮುಂಜಾನೆ ನಡೆದರೆ ಅಂದೇ ರಥೋತ್ಸವ ನಡೆಯಲಿದೆ. ಸಿಂತಾಲ ಪಾಪಮ್ಮನವರಿಗೆ ನಡೆದುಕೊಳ್ಳುವ ಭಕ್ತರು ತೇರಿದ ದಿನದಂದು ಕಾಲ್ನಡಿಗೆಯಲ್ಲೇ ಸುಮಾರು ಕಿ.ಮೀ. ನಡೆದುಕೊಂಡು ಸಮಾಧಿಗೆ ಪೂಜೆ ಸಲ್ಲಿಸಿ ನಂತರ ರಥೋತ್ಸವದಲ್ಲಿ ಭಾಗವಹಿಸಿ ಗ್ರಾಮಗಳತ್ತ ಕಾಲ್ನಡಿಗೆಯಲ್ಲೇ ತೆರಳುವುದು ವಾಡಿಕೆ.ಈ ಬಗ್ಗೆ ಮಾತನಾಡಿದ ಭಕ್ತ ಮಹೇಶ್, ಅನಾದಿ ಕಾಲದಿಂದಲ್ಲೂ ನಮ್ಮ ಪೂರ್ವಿಕರು ಸಿಂತಾಲಪಾಪಮ್ಮನವರನ್ನು ಪೂಜಿಸುತ್ತಾ ಬಂದಿದ್ದಾರೆ. ನಿಡಗಲು ಸಂಸ್ಥಾನದ ಧೀರ ಮಹಿಳೆ ಎಂದೇ ಕರೆಸಿಕೊಂಡಿದ್ದ ಪಾಪಮ್ಮ ಯುದ್ಧ ನಡೆದ ಸಂದರ್ಭ ದಲ್ಲಿ ಇಲ್ಲಿ ಮರಣಹೊಂದಿದ್ದಾರೆಂದು ನಮ್ಮ ಹಿರಿಯರು ಹೇಳುವ ಕಥೆ. ಸಿಂತಾಲಪಾಪಮ್ಮನನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿದರೆ ಸಂತಾನ, ಮಕ್ಕಳ ಭಾಗ್ಯ, ಇಷ್ಟಾರ್ಥಗಳ ಸಿದ್ಧಿಯಾಗಲಿದೆ ಎಂಬ ನಂಬಿಕೆ ಭಕ್ತರದ್ದು.ಜಾತ್ರೆಯ ವೇಳೆ ಭಕ್ತರ ಮೇಲೆ ಬೀಡಾಡಿ ದನ ದಾಳಿ:೬ ಜನಕ್ಕೆ ಗಾಯ

ಚಳ್ಳಕೆರೆ: ನಗರದ ಹಳೇಟೌನ್‌ನಲ್ಲಿರುವ ಶ್ರೀವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಶ್ರೀಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಈ ಬಾರಿ ಅತಿಹೆಚ್ಚಿನ ಭಕ್ತರು ಸೇರಿ ಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಶ್ರೀಸ್ವಾಮಿಯ ರಥೋತ್ಸವ ಸಾಗುವ ಹಾದಿ ಇಕ್ಕಟ್ಟಾಗಿದ್ದು, ಭಕ್ತರು ಓಡಾಡಲು ಹೆಚ್ಚು ಶ್ರಮವಹಿಸಬೇಕಿದೆ. ಜಾತ್ರಾ ಸಂದರ್ಭದಲ್ಲೂ ಸಹ ಭಕ್ತರಿಗೆ ಎರಡೂ ರಸ್ತೆಗಳಲ್ಲಿ ಹಣ್ಣು, ಕಾಯಿ ವ್ಯಾಪಾರ ಮಾಡುವವರ ಸಂಖ್ಯೆ ಹೆಚ್ಚಿದ್ದು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುತ್ತಾರೆ. .

ಈ ಸಂದರ್ಭದಲ್ಲಿ ಎಲ್ಲಿಂದಲೋ ಬಂದ ಬೀಡಾಡಿ ದನವೊಂದು ಜನರನ್ನು ನೋಡಿ ಗಾಬರಿಗೊಂಡು ಜನರ ಮೇಲೆ ಎಗರಿ ಹೋಗಿದೆ. ಈ ಪರಿಣಾಮ ದೊಡ್ಡೇರಿಯ ಮಹದೇವಪ್ಪ(೬೦), ರಾಮಜೋಗಿಹಳ್ಳಿ ವಿದ್ಯಾ(೨೦), ಅಂಬೇಡ್ಕರ್ ನಗರದ ಪ್ರಣತಿ (೧೦), ಜನತಾ ಕಾಲೋನಿಯ ಸಿದ್ದೇಶ(೧೯) ಹಾಗೂ ಇಬ್ಬರು ಯುವಕರು ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆ.