ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಖೆಯಾದ ಕಾರ್ಜುವಳ್ಳಿಯ ಹಿರೇಮಠದಲ್ಲಿ ಡಿ.16ರಿಂದ 20ರವರೆಗೆ ಲಿಂಗೈಕ್ಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅವರ 46ನೇ ವರ್ಷದ ಪುಣ್ಯ ಸ್ಮರಣೋತ್ಸವ, ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಅವರ ಪಟ್ಟಾಧಿಕಾರದ 4ನೇ ವಾರ್ಷಿಕೋತ್ಸವ ವರ್ಧಂತಿ ಮಹೋತ್ಸವ ಹಾಗೂ ವೀರಭದ್ರಸ್ವಾಮಿ ಕಲ್ಯಾಣ ಮಹೋತ್ಸವ ಹಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.ಶ್ರೀಮಠದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಶ್ರೀ ಸಂಸ್ಥಾನ ಹಿರೇಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ದಾರ್ಮಿಕ ಸಮಾರಂಭದ ಅಂಗವಾಗಿ ವಿಶೇಷ ಪೂಜೆ, ಮಹಾಭಿಷೇಕ, ವಿವಿಧ ಹೋಮ-ಹವನ, ಸಾಂಸ್ಕೃತಿಕ ಕಾರ್ಯಕ್ರಮ, ಧರ್ಮ ಸಂವರ್ಧಕ ಹಾಗೂ ಧರ್ಮ ಹಿತಚಿಂತಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಡಿ. 20ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಮಠದ ವತಿಯಿಂದ ಸಕಲೇಶಪುರದ ಸಮಾಜ ಸೇವಕ ಪುನೀತ್ ಬನ್ನಹಳ್ಳಿ ಅವರಿಗೆ ಧರ್ಮ ಸಂವರ್ಧಕ ಹಾಗು ಆಲೂರಿನ ವಕೀಲ ಎಂ.ಎಸ್.ಮಹೇಶ್ ಅವರಿಗೆ ಧರ್ಮ ಹಿತಚಿಂತಕ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಡಿ. 16ರ ಬೆಳಿಗ್ಗೆ 7ರಿಂದ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ ಸೇರಿ ವಿವಿಧ ಸೇವೆಗಳು ಜರುಗಲಿವೆ. ಅದೇ ದಿನ ಭದ್ರಕಾಳಿ ಸಮೇತ ಶ್ರೀ ವೀರಭದ್ರ ಸ್ವಾಮಿ ಕಲ್ಯಾಣ ಮಹೋತ್ಸವ ನಡೆಯಲಿದೆ. ಸಂಜೆ 5 ಗಂಟೆಗೆ ಧರ್ಮ-ಸದ್ಭಾವನಾ ಸಮಾರಂಭ ನಡೆಯಲಿದ್ದು, ಬಂಕಾಪುರ ಅರಳೆಲೆ ಹೀರೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು. ಯಸಳೂರು ತೆಂಕಲಗೂಡು ಬ್ರಹನಠದ ಚನ್ನಸಿದ್ದೇಶ್ವರ ಸ್ವಾಮೀಜಿ ಉಪದೇಶಾಮೃತ ನೀಡುವರು. ಪೊಲೀಸ್ ವೃತ್ತ ನಿರೀಕ್ಷಕ ಎಸ್.ಗಂಗಾಧರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗದೀಶ್ ಕಬ್ಬಿನಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಗ್ರ ಕೃಷಿಯ-ಉಪಯೋಗ ವಿಚಾರವಾಗಿ ವಿಚಾರಗೋಷ್ಠಿಯು ನಡೆಯಲಿದೆ. ಡಿ. 17ರ ಸಂಜೆ 5 ಗಂಟೆಗೆ ನಡೆಯುವ ಧರ್ಮ-ಸದ್ಭಾವನಾ ಸಮಾರಂಭದಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಕಡೆನಂದಿಹಳ್ಳಿಯ ಶ್ರೀ ರೇವಣ ಸಿದ್ದೇಶ್ವರ ಸ್ವಾಮೀಜಿ ಪಾಲ್ಗೊಳ್ಳಲಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಜೆ.ಗೌಡ ಅಧ್ಯಕ್ಷತೆ ವಹಿಸುವರು. ಮಕ್ಕಳ ಸಾಂಸ್ಕೃತಿಕ ಕಲೆಗಳ ಅನಾವರಣದಲ್ಲಿ ಪೋಷಕರ ಪಾತ್ರ ವಿಚಾರವಾಗಿ ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್ ವಿಷಯ ಮಂಡಿಸಲಿದ್ದಾರೆ. ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ವಿಶೇಷ ಸಂಚಿಕೆ ಬಿಡುಗಡೆ ಮಾಡುವರು.
ಡಿ. 18ರಂದು ನಡೆಯುವ ಸಮಾರಂಭದಲ್ಲಿ ಜಾನಪದದಲ್ಲಿ ಭಕ್ತಿ ವಿಚಾರವಾಗಿ ಖ್ಯಾತ ವಾಗಿ ಹಿರೇಮಗಳೂರು ಕಣ್ಣನ್ ಮಾತನಾಡುವರು. ಸಮಾರಂಭದ ಅಧ್ಯಕ್ಷತೆಯನ್ನು ಉಪವಿಭಾಗಾಧಿಕಾರಿ ಡಾ.ಕೆ.ಎಂ.ಶೃತಿ ವಹಿಸಲಿದ್ದು, ತಹಸೀಲ್ದಾರ್ ಸಿ.ಪಿ.ನಂದಕುಮಾರ್ ಉದ್ಘಾಟಿಸುವರು. ಡಿ. 19ರಂದು ನಡೆಯಲಿರುವ ಧರ್ಮ-ಸದ್ಭಾವನಾ ಸಮಾರಂಭದಲ್ಲಿ ತಂಡೇಕೆರೆ ರಂಭಾಪುರಿ ಶಾಖಾ ಮಠದ ಶ್ರೀ ಗಂಗಾಧರ ಸ್ವಾಮೀಜಿ, ತೇಜೂರು ಸಿದ್ದರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಶಿವಯೋಗಿ ಶಿವಾನಂದ ಸ್ವಾಮೀಜಿ ಭಾಗವಹಿಸುವರು. ವೀರಶೈವ ನೆಲೆ-ಬೆಲೆ ವಿಚಾರವಾಗಿ ಚಿಕ್ಕಮಗಳೂರಿನ ಮಾಧ್ಯಮ ಸಂಸ್ಕೃತಿ ಪ್ರತಿಷ್ಟಾನದ ಅಧ್ಯಕ್ಷ ಚಿ.ಸ.ಪ್ರಭುಲಿಂಗ ಶಾಸ್ತ್ರೀ ಮಾತನಾಡಲಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್ ಅವರು ಉದ್ಘಾಟನೆ ನೆರವೇರಿಸಲಿದ್ದು, ಬಿ.ಕೆ.ಚಂದ್ರಕಲಾ ಅವರು ಅಧ್ಯಕ್ಷತೆ ವಹಿಸುವರು.ಡಿ. 20ರ ಶುಕ್ರವಾರ ಸಂಜೆಯ ಕಾರ್ಯಕ್ರಮದ ಸಾನ್ನಿಧ್ಯವನ್ನು ಬಾಳೆಹೊನ್ನೂರು ರಂಭಾಪುರಿ ಮಠದ ಶ್ರೀ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ವಹಿಸುವರು. ಕಾರ್ಜುವಳ್ಳಿ ಮಠದ ಶ್ರೀ ಸದಾಶಿವ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಸಂಸದ ಶ್ರೇಯಸ್ ಪಟೇಲ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಕಾರ್ಜುವಳ್ಳಿ ಮಠದ ಆಡಳಿತಾಧಿಕಾರಿ ಎಸ್.ಎಸ್.ಶಿವಮೂರ್ತಿ ಸಿದ್ಧಾಪುರ ಪಾಲ್ಗೊಳ್ಳುವರು.
ಬೇಲೂರು ಶಾಸಕ ಎಚ್.ಕೆ.ಸುರೇಶ್ ಅವರು ಶ್ರೀ ವಿಜಯ ವೀರಭದ್ರ ಸ್ವಾಮಿ ದೇವಸ್ಥಾನ ನಿರ್ಮಾಣದ ಪೂರ್ವ ಪ್ರಕಟಣೆ ಬಿಡುಗಡೆ ಮಾಡುವರು. ಅರಕಲಗೂಡು ಮಲ್ಲೇಶ್ ಸ್ಟೋನ್ ಕ್ರಷರ್ ಮಾಲೀಕ ಎಂ.ಎಂ.ಸುರೇಶ್ ಅವರು 2025ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದಾರೆ. ಲಿಂ.ಉಜ್ಜಯಿನಿ ಶ್ರೀ ಸಿದ್ದಲಿಂಗ ಜಗದ್ಗುರುಗಳ ನಾಮಾವಳಿ ಕೃತಿಯನ್ನು ಶಿವಗಂಗಾ ಗ್ರಾನೈಟ್ಸ್ ಮಾಲೀಕ ಎಸ್.ಎಚ್. ರಾಜಶೇಖರ್ ಲೋಕಾರ್ಪಣೆ ಮಾಡುವರು. ಬಾಳ್ಳುಪೇಟೆಯ ಕಾಫಿ ಬೆಳೆಗಾರ ಬಿ.ಎಸ್.ಮಲ್ಲಿಕಾರ್ಜುನ ಅವರು ಲಕ್ಷ ರುದ್ರಾಕ್ಷಿ ಧಾರಣಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಮಠದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.