ಅಬ್ಬಕ್ಕಳ ಸ್ಮರಣೆಗಾಗಿ ಕರಾವಳಿಯಲ್ಲಿ ಸೈನಿಕ ಶಾಲೆ ತೆರೆಯುವಂತಾಗಲಿ: ನಿರ್ಮಲಾ ಸೀತಾಮನ್‌

| Published : Dec 16 2023, 02:00 AM IST

ಅಬ್ಬಕ್ಕಳ ಸ್ಮರಣೆಗಾಗಿ ಕರಾವಳಿಯಲ್ಲಿ ಸೈನಿಕ ಶಾಲೆ ತೆರೆಯುವಂತಾಗಲಿ: ನಿರ್ಮಲಾ ಸೀತಾಮನ್‌
Share this Article
  • FB
  • TW
  • Linkdin
  • Email

ಸಾರಾಂಶ

ವೀರ ರಾಣಿ ಅಬ್ಬಕ್ಕ ಸ್ಮರಣಾರ್ಥ ಕರಾವಳಿಯಲ್ಲಿ ಸೈನಿಕ ಶಾಲೆ ತೆರೆಯಲು ಜನ ಸಂಕಲ್ಪ ಮಾಡಬೇಕು- ಮೂಡುಬಿದಿರೆ ಎಕ್ಸಲೆಂಟ್‌ ಕಾಲೇಜಿನಲ್ಲಿ ರಾಣಿ ಅಬ್ಬಕ್ಕ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆಗೊಳಿಸಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆಶಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಪೋರ್ಚುಗೀಸರ ಅಮಾನವೀಯತೆ, ಕ್ರೂರತೆಗೆ ಏಳು ಬಾರಿ ಸಡ್ಡು ಹೊಡೆದು ತುಳುನಾಡಿನ ನೆಲ ಮತ್ತು ಜನತೆಯ ಹಿತರಕ್ಷಣೆಗೆ ಜೀವನವನ್ನೇ ಮುಡಿಪಾಗಿಟ್ಟ ಅಭಯರಾಣಿ ಅಬ್ಬಕ್ಕಳ ಸಾಹಸ, ಸಾಧನೆ ಅನುಕರಿಸಲಾಗದ ಮಾದರಿ. ತನ್ನ ಪತಿಯೇ ವೈರಿಯೆನ್ನುವ ಅರಿವಿದ್ದರೂ ಸತಿಯ ಧರ್ಮ ತಪ್ಪದೆ ಧೈರ್ಯದಿಂದ ಹೋರಾಡಿದ ವೀರ ರಾಣಿ ಅಬ್ಬಕ್ಕ. ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಜನತೆ ಅಬ್ಬಕ್ಕಳ ಸಂಸ್ಮರಣೆಗಾಗಿ ಕರಾವಳಿಯಲ್ಲಿ ಸೈನಿಕ ಶಾಲೆಯೊಂದನ್ನು ತೆರೆಯುವ ಸಂಕಲ್ಪಕ್ಕೆ ಮುಂದಾಗಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದರು.

ಅವರು ಶುಕ್ರವಾರ ಮಧ್ಯಾಹ್ನ ಕಲ್ಲಬೆಟ್ಟು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ರಾಜ ಸಭಾಂಗಣದಲ್ಲಿ ಭಾರತ ಸರ್ಕಾರದ ಸಂವಹನ ಸಚಿವಾಲಯ, ಅಂಚೆ ಇಲಾಖೆ, ಎಕ್ಸಲೆಂಟ್ ಶಿಕ್ಷಣ ಪ್ರತಿಷ್ಠಾನ, ರಾಣಿ ಅಬ್ಬಕ್ಕ ದೇವಿ ಸಂಸ್ಮರಣ ಅಂಚೆ ಚೀಟಿ ಅನಾವರಣ ಸಮಿತಿಯ ಜಂಟಿ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಮೂಡುಬಿದಿರೆಯ ತುಳುನಾಡಿನ ರಾಣಿ ಅಬ್ಬಕ್ಕ ದೇವಿಯ ಸಂಸ್ಮರಣಾರ್ಥ ಅಂಚೆ ಚೀಟಿಯನ್ನು ಅನಾವರಣಗೊಳಿಸಿ ಮಾತನಾಡಿದರು.

ಎಕ್ಸಲೆಂಟ್ ಸಂಸ್ಥೆಯ ಮಾಸಿಕ ಪತ್ರಿಕೆ ಮನೋರಮಾದ ರಾಣಿ ಅಬ್ಬಕ್ಕ ದೇವಿಯ ಕುರಿತಾದ ವಿಶೇಷ ಸಂಚಿಕೆಯನ್ನೂ ಅವರು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು.

ಅಜಾದಿ ಕಾ ಅಮೃತ ಮಹೋತ್ಸವದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ವಾತಂತ್ರ್ಯ ಹೋರಾಟಕ್ಕಾಗಿ ದೇಶದ ಮೂಲೆ ಮೂಲೆಯಲ್ಲಿ ನಡೆದ ಹೋರಾಟ, ಹೋರಾಡಿದ ಯಾವ ಸಾಧಕರನ್ನೂ ಮರೆತಿಲ್ಲ. ವ್ಯವಸ್ಥಿತವಾಗಿ ಎಲ್ಲರನ್ನೂ, ಎಲ್ಲವನ್ನೂ ದಾಖಲಿಸುವ ಕೆಲಸ ಮಾಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಹದಿನಾಲ್ಕೂವರೆ ಸಾವಿರದಷ್ಟು ಇಂತಹ ಯಶೋಗಾಥೆಗಳು ಡಿಜಿಟಲ್ ಕೋಶದಲ್ಲಿ ದಾಖಲಾಗಿದ್ದು ಅವುಗಳನ್ನು ಜನತೆಗೆ ಪರಿಚಯಿಸುವ ಕೆಲಸ ಜಿಲ್ಲಾಧಿಕಾರಿಗಳ ಮೂಲಕ ನಡೆಯಬೇಕಾಗಿದೆ. 2003ರಲ್ಲೇ ಅಬ್ಬಕ್ಕನ ವಿಶೇಷ ಅಂಚೆ ಲಕೋಟೆ, ನಂತರದ ದಿನಗಳಲ್ಲಿ ದೂರದರ್ಶನಲ್ಲಿ ಅಬ್ಬಕ್ಕಳ ಸಾಕ್ಷ್ಯಚಿತ್ರ , ಅಮರಚಿತ್ರ ಕಥೆ ಸರಣಿಯಲ್ಲೂ ಅಬ್ಬಕ್ಕನನ್ನು ದಾಖಲಿಸುವ ಕೆಲಸದ ಮೂಲಕ ಕೇಂದ್ರ ಸರಕಾರವೂ ಅಬ್ಬಕ್ಕನ್ನು ಮರೆತಿಲ್ಲ ಎಂದು ನಿರ್ಮಲಾ ವಿವರಿಸಿದರು.

ನಾರೀಶಕ್ತಿಯ ಸ್ಫೂರ್ತಿ: ರಾಷ್ಟ್ರೀಯ ಏಕತೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಪ್ರಧಾನಿ ಅವರ ಆಶಯದಂತೆ ಇಂದು ಭಾರತೀಯ ಮಹಿಳೆ ರಫೇಲ್, ತೇಜಸ್, ಸೇನೆ, ಯುದ್ಧ ನೌಕೆಯಲ್ಲೂ ಮುಂಚೂಣಿಯಲ್ಲಿದ್ದಾಳೆ. ಮಹಿಳಾ ಮಸೂದೆ ಆಕೆಗೆ ಇನ್ನಷ್ಟು ಶಕ್ತಿ ತುಂಬಲಿದೆ. ಧರ್ಮದ ಪಾಲನೆಯ ಜತೆ ರಕ್ಷಣೆಗೂ ಮಹಿಳೆ ಅಬ್ಬಕ್ಕನೇ ಮೊದಲಾದ ಮಹಿಳಾ ಸಾಧಕಿಯರಿಂದ ಸ್ಫೂರ್ತಿ ಪಡೆಯುವಂತಾಗಬೇಕು ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

ಸಾರ್ಥಕ ಸಂಸ್ಮರಣೆ- ಡಾ. ಹೆಗ್ಗಡೆ: ಎಲ್ಲ ಮಹಿಳೆಯರಂತೆ ಅಬ್ಬಕ್ಕನೂ ಕೌಟುಂಬಿಕ ಮತ್ತು ಸಾಮಾಜಿಕ ಹೀಗೆ ಎರಡು ಮುಖಗಳ ಕರ್ತವ್ಯವನ್ನೂ ಪಾಲಿಸಿ ಮೆರೆದವರು. ಅಂಚೆ ಚೀಟಿಯ ಅನಾವರಣ ಆಕೆಯ ಸಾರ್ಥಕ ಸಂಸ್ಮರಣೆಗೆ ಸಾಕ್ಷಿಯಾಗಿದೆ. ಮಹಿಳಾ ಮೀಸಲಾತಿ ಮಸೂದೆಯಿಂದ ಮಹಿಳೆಯರನ್ನೂ ರಾಷ್ಟ್ರದ ಮುಖ್ಯವಾಹಿನಿಗೆ ಸೇರಲು ನೀಡಲಾಗಿರುವ ಅವಕಾಶದಿಂದ ಮಹಿಳೆಯರ ಅವಕಾಶ ಮತ್ತು ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ ಎಂದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ಅಬ್ಬಕ್ಕನಿಗೆ ಪೂರಕವಾಗಿ ಹೊನ್ನಾವರದಲ್ಲಿ ರಾಣಿ ಚೆನ್ನಬೈರಾದೇವಿ ನಡೆಸಿದ ಹೋರಾಟದ ನೆನಪನ್ನು ಶಾಶ್ವತವಾಗಿಡಲು ಅರಣ್ಯ ಇಲಾಖೆ ಅಲ್ಲಿ ಎರಡು ಎಕರೆ ಸ್ಥಳ ನೀಡಿದರೆ ಸ್ಮಾರಕ ನಿರ್ಮಿಸುವುದಾಗಿ ಅವರು ಹೇಳಿದರು.

ಭಾರತೀಯ ಅಂಚೆ ಇಲಾಖೆಯ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಮಾತನಾಡಿ ಅಬ್ಬಕ್ಕನ ಅಂಚೆ ಚೀಟಿ ಬಿಡುಗಡೆ ತುಳು ನಾಡಿಗೆ ಇದೊಂದು ಚಾರಿತ್ರಿಕ ದಿನವಾಗಲಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಶಾಸಕ ಉಮಾನಾಥ ಕೋಟ್ಯಾನ್, ಶ್ರೀಕ್ಷೇತ್ರ ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ, ಫಿಲಾಟಲಿ ನಿರ್ದೇಶಕ ಮಹೇಂದ್ರ ಸಿಂಘಿ ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಂಚೆ ಚೀಟಿ ಸಮಿತಿಯ ಸಂಚಾಲಕ ಡಾ.ಬಿ.ಪಿ. ಸಂಪತ್ ಕುಮಾರ್ ವಂದಿಸಿದರು. ವಿಶ್ರಾಂತ ಪ್ರಾಧ್ಯಾಪಕಿ ಡಾ. ಮಾಲಿನಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.