ಇಂದು ಉಳ್ಳಾಲದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ-2024

| Published : Feb 24 2024, 02:31 AM IST

ಸಾರಾಂಶ

ಪ್ರಸಿದ್ಧ ಲೇಖಕಿ ಡಾ. ಪ್ರಮೀಳಾ ಮಾಧವ್‌ ಮತ್ತು ಖ್ಯಾತ ಕ್ರೀಡಾಪಟು ಡಾ. ಕೆ. ಮಾಲತಿ ಹೊಳ್ಳ ಅವರಿಗೆ ಪ್ರತಿಷ್ಠಿತ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ 2023-2024ನೇ ಸಾಲಿನ ಅಬ್ಬಕ್ಕ ಉತ್ಸವ ಫೆ.24ರಂದು ಉಳ್ಳಾಲ ನಗರಸಭೆಯ ಆವರಣದಲ್ಲಿರುವ ಮಹಾತ್ಮಗಾಂಧಿ ರಂಗಮಂದಿರದಲ್ಲಿ ನಡೆಯಲಿದೆ ಎಂದು ಮಾಜಿ ಶಾಸಕ, ಅಬ್ಬಕ್ಕ ಉತ್ಸವ ಸಮಿತಿ ಸ್ವಾಗತಾಧ್ಯಕ್ಷ ಕೆ.ಜಯರಾಮ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಬೆಳಗ್ಗೆ 8.30ಕ್ಕೆ ಆಕರ್ಷಕ ತುಳುನಾಡ ಜಾನಪದ ದಿಬ್ಬಣದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಉಳ್ಳಾಲ ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಬಾಲಕೃಷ್ಣ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಅಧ್ಯಕ್ಷತೆಯಲ್ಲಿ ಉದ್ಘಾಟನೆ ನೆರವೇರಲಿದೆ. ಮಂಗಳೂರು ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ಕಾರ್ಯದರ್ಶಿ ಡಾ. ಅಕ್ಷತಾ ಆದರ್ಶ್‌ ಜೈನ್‌ ಉತ್ಸವ ಉದ್ಘಾಟಿಸುವರು. ಚಿತ್ರನಟಿ ಸರೋಜಿನಿ ಎಸ್‌. ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮವನ್ನು, ಉಳ್ಳಾಲ ನಗರಸಭೆಯ ಪೌರಾಯುಕ್ತೆ ವಾಣಿ ಆಳ್ವ ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌ ಆಶಯ ಭಾಷಣ ಮಾಡಲಿದ್ದಾರೆ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಶುಭಾಶಂಸನೆ ಮಾಡಲಿದ್ದಾರೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಹಾಗೂ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಗುವುದು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 1.30 ರಿಂದ ಪ್ರೊ. ಅಮೃತ ಸೋಮೇಶ್ವರ ಅವರ ಸಂಸ್ಮರಣೆಗಾಗಿ ಡಾ. ಕೆ ಚಿನ್ನಪ್ಪ ಗೌಡರ ಅಧ್ಯಕ್ಷತೆಯಲ್ಲಿ ಅಮೃತರ ಬದುಕು ಬರಹದ ಬಗ್ಗೆ ವಿಚಾರಗೋಷ್ಠಿ ಏರ್ಪಡಿಸಲಾಗಿದೆ. ಪಾದೇಕಲ್ಲು ವಿಷ್ಣು ಭಟ್‌ ಮತ್ತು ಅರುಣ್‌ ಉಳ್ಳಾಲ ವಿಷಯ ಮಂಡನೆ ಮಾಡುವರು. ಅಮೃತ ಸೋಮೇಶ್ವರರ ನೆನಪಿನಲ್ಲಿ ಅಮೃತ ಬಹುಭಾಷಾ ಕಾವ್ಯ ಗಾಯನ ಎಂಬ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸುಲೋಚನಾ ಪಚ್ಚಿನಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಸಂಜೆ 5.30ಕ್ಕೆ ಸಮಾರೋಪ ನಡೆಯಲಿದ್ದು, ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭ ಪ್ರಸಿದ್ಧ ಲೇಖಕಿ ಡಾ. ಪ್ರಮೀಳಾ ಮಾಧವ್‌ ಮತ್ತು ಖ್ಯಾತ ಕ್ರೀಡಾಪಟು ಡಾ. ಕೆ. ಮಾಲತಿ ಹೊಳ್ಳ ಅವರಿಗೆ ಪ್ರತಿಷ್ಠಿತ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದರು.

ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್‌, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಉಪಾಧ್ಯಕ್ಷರಾದ ದೇವಕಿ ಆರ್‌. ಉಳ್ಳಾಲ್‌, ಯು.ಪಿ. ಆಲಿಯಬ್ಬ, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ರತ್ನಾವತಿ ಜೆ. ಬೈಕಾಡಿ ಇದ್ದರು.