ನುಡಿಸಿರಿಯ ಸರ್ವಾಧ್ಯಕ್ಷರನ್ನಾಗಿ ಜೆ.ಎಂ. ವೀರಸಂಗಯ್ಯ

| Published : Feb 14 2024, 02:15 AM IST

ನುಡಿಸಿರಿಯ ಸರ್ವಾಧ್ಯಕ್ಷರನ್ನಾಗಿ ಜೆ.ಎಂ. ವೀರಸಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಹದೇವತಾತನ ಜಾತ್ರೆಯು ಫೆ. ೧೬ರಂದು ನಡೆಯಲಿದ್ದು, ಅದರ ಅಂಗವಾಗಿ ಫೆ. ೧೫ರಂದು ನುಡಿಸಿರಿ ಕಾರ್ಯಕ್ರಮ ನಡೆಯಲಿದೆ.

ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಸಾಗರ ಮಹದೇವತಾತನ ಮಠದಲ್ಲಿ ಪ್ರಥಮ ಬಾರಿಗೆ ನುಡಿಸಿರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಅಭಿನವ ಶಿವಲಿಂಗರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ರೈತರ ಮಹಾನ್ ಹೋರಾಟಗಾರ ಜೆ.ಎಂ. ವೀರಸಂಗಯ್ಯ ಅವರನ್ನು ನುಡಿಸಿರಿಯ ಸರ್ವಾಧ್ಯಕ್ಷರನ್ನಾಗಿ ಆಹ್ವಾನಿಸಿದ ಸಂದರ್ಭದಲ್ಲಿ ಮಾತನಾಡಿ, ಮಹದೇವತಾತನ ಜಾತ್ರೆಯು ಫೆ. ೧೬ರಂದು ನಡೆಯಲಿದ್ದು, ಅದರ ಅಂಗವಾಗಿ ಫೆ. ೧೫ರಂದು ನುಡಿಸಿರಿ ಕಾರ್ಯಕ್ರಮ ನಡೆಯಲಿದೆ. ಅದರ ಸರ್ವಾಧ್ಯಕ್ಷರನ್ನಾಗಿ ರಾಜ್ಯರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಅವರನ್ನು ಆಯ್ಕೆ ಮಾಡಿ ಆಹ್ವಾನಿಸಲಾಗಿದೆ. ಭಾಷೆ, ಸಾಹಿತ್ಯ, ನೆಲ, ಜಲ ಇವುಗಳ ಸಂರಕ್ಷಣೆಯ ನಿಟ್ಟಿನಲ್ಲಿ ಅತ್ಯಂತ ಮಹತ್ವಪೂರ್ಣ ನುಡಿಸಿರಿಯನ್ನು ನಡೆಸಲಾಗುವುದು. ಮಳೆ ಅಭಾವದಿಂದಾಗಿ ರೈತರ ಬದುಕು ಕಷ್ಟಕರವಾಗಿದ್ದು, ರೈತರಿಗೆ ವ್ಯವಸಾಯದ ಸಲಹೆ, ಸರ್ಕಾರದ ಸೌಲಭ್ಯ, ರೈತರ ಬದುಕು ರೂಪಿಸಲು ಸರಕಾರ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ರೈತ ಹೋರಾಟಗಾರ ವೀರಸಂಗಯ್ಯನವರು ತಿಳಿಸುವರು. ನುಡಿಸಿರಿಯನ್ನು ಅನ್ನಸಿರಿಯಂತೆ ರೈತರ ಏಳಿಗೆಯ ಸದುದ್ದೇಶದಿಂದ ಹಮ್ಮಿಕೊಳ್ಳಲಾಗಿದೆ ಎಂದರು.

ರೈತ ಹೋರಾಟಗಾರ ಹಂಪಸಾಗರ ನುಡಿಸಿರಿಯ ಸರ್ವಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಆಹ್ವಾನ ಸ್ವೀಕರಿಸಿ ಮಾತನಾಡಿ, ನುಡಿಸಿರಿಗೆ ಸರ್ವಾಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದು ಖುಷಿ ತಂದಿದೆ. ನಾಡಿನ ರೈತರ ಬದುಕು ಹಸನಗೊಳಿಸಲು ಇದು ಪೂರಕವಾದ ಕಾರ್ಯಕ್ರಮವಾಗಿದೆ. ಮಹದೇವತಾತ ಮಠದ ಶ್ರೀಗಳ ರೈತಪರ ಕಾಳಜಿ ನಿಜಕ್ಕೂ ಮೆಚ್ಚುವಂತಹದ್ದು. ರೈತಗೋಷ್ಠಿ, ನೂತನ ಯಂತ್ರೋಪಕರಣಗಳು, ಸರಳ ಬೇಸಾಯ ಪದ್ಧತಿ ಇವುಗಳ ಬಗ್ಗೆ ರೈತರಿಗೆ ಅಗತ್ಯ ಮಾಹಿತಿ ತಿಳಿಸಬೇಕು.

ಕೇಂದ್ರ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಮಾಡುವ ಕ್ರಮ ವಿರೋಧಿಸಿ ಸರ್ಕಾರದ ವಿರುದ್ಧ ಹೋರಾಟಗಳನ್ನು ಮಾಡಿ ಎಚ್ಚರಿಸಲಾಗಿದೆ. ನುಡಿಸಿರಿ ಕಾರ್ಯಕ್ರಮವನ್ನು ಕನ್ನಡ ಮನಸ್ಸುಗಳು, ರೈತಾಪಿ ವರ್ಗದವರು ಸದುಪಯೋಗಪಡಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂಪಿಎಂ ಮಂಜುನಾಥ್, ಖಜಾಂಚಿ ಎನ್. ಗುರುಬಸವರಾಜ, ಕೋಣಿ ಮಾರುತೆಪ್ಪ, ನಾರಾಯಣಪ್ಪ ತೊಂಡಿಹಾಳ್, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಲಿಂಗದಳ್ಳಿ ಬಸವರಾಜಪ್ಪ ಇತರರಿದ್ದರು.