ಸಾರಾಂಶ
ವೀರಶೈವ ಲಿಂಗಾಯಿತ ಸಮಾಜಕ್ಕೆ ಪದಾದಿಕಾರಿಗಳ ನೇಮಕಕ್ಕೆ ಆಕ್ಷೇಪ । ಮಹಾಪೋಷಕರ ಹುದ್ದೆ ದುರುಪಯೋಗ ಆರೋಪ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಚಿತ್ರದುರ್ಗದ ವೀರಶೈವ ಲಿಂಗಾಯಿತ ಸಮಾಜಕ್ಕೆ ನೂತನ ಪದಾದಿಕಾರಿಗಳ ನೇಮಕವು ವಿವಾದ ಸೃಷ್ಟಿಸಿದ್ದು, ಶಿವಮೂರ್ತಿ ಮುರುಘಾ ಶರಣರ ಮೇಲೆ ಕೆಲ ವೀರಶೈವ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಹಕಾರ ಸಂಘಗಳ ನೋಂದಣಿ ಇಲಾಖೆಯ ಉಪನೋಂದಣಾಧಿಕಾರಿಗಳಿಗೆ ದೂರು ನೀಡಿ, ಯಾವುದೇ ಕಾರಣದಿಂದ ಪಟ್ಟಿಗೆ ಅನುಮೋದನೆ ನೀಡಬಾರದೆಂದು ಮನವಿ ಮಾಡಿದ್ದಾರೆ.
ಚಿತ್ರದುರ್ಗ ವೀರಶೈವ ಲಿಂಗಾಯಿತ ಸಮಾಜಕ್ಕೆ ಬಸವಕೇಂದ್ರ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾಶರಣರು ಮಹಾ ಪೋಷಕರದಾಗಿದ್ದಾರೆ. ಪದಾಧಿಕಾರಿಗಳ ನೇಮಕ ಮಾಡುವ ಅಧಿಕಾರವ ಮೊದಲಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ಹಾಗಾಗಿ ಜನವರಿ ಒಂದರಂದು ವೀರಶೈವ ಲಿಂಗಾಯಿತ ಸಮಾಜಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಿದ್ದು, ಮುರುಘಾಮಠದಿಂದ ಅಧಿಕೃತವಾಗಿ ಹೇಳಿಕೆ ಕೂಡಾ ಬಿಡುಗಡೆಯಾಯಿತು.ಅಧ್ಯಕ್ಷರಾಗಿ ಎಚ್.ಎನ್ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ಕೆ.ಸಿ ನಾಗರಾಜ್, ಕಾರ್ಯದರ್ಶಿಯಾಗಿ ಪಿ.ವೀರೇಂದ್ರಕುಮಾರ್, ಜಂಟಿ ಕಾರ್ಯದರ್ಶಿಯಾಗಿ ಜಿತೇಂದ್ರ ಹುಲಿಕುಂಟೆ, ಖಜಾಂಚಿಯಾಗಿ ತಿಪ್ಪೇಸ್ವಾಮಿ ಚಳ್ಳಕೆರೆ, ಗೌರವ ಸದಸ್ಯರಾಗಿ ಪಟೇಲ್ ಶಿವಕುಮಾರ್, ನಿರ್ದೇಶಕರುಗಳಾಗಿ ಕೆ.ಎನ್ ವಿಶ್ವನಾಥಯ್ಯ, ಎಸ್.ವಿ ನಾಗರಾಜ್, ಸಿದ್ದಾಪುರ, ಎಸ್.ಷಡಾಕ್ಷರಯ್ಯ, ಡಿ.ಎಸ್ ಮಲ್ಲಿಕಾರ್ಜುನ್, ಪ್ರಕಾಶ್ ಗುತ್ತಿನಾಡು, ಎಸ್.ಪರಮೇಶ್, ಮುರುಘೇಶ್ ಎಚ್.ಪಿ ಹೊಳಲ್ಕೆರೆ, ಸಿದ್ದೇಶ್ ಎಸ್.ವಿ, ವೀಣಾ ಸುರೇಶ್‍ಬಾಬು, ಬಸವರಾಜಯ್ಯ ಕೆ.ಬಿ., ಮಂಜುನಾಥ (ದಾಳಿಂಬೆ), ಡಿ.ವಿ.ಎಸ್ ಪ್ರದೀಪ್, ತ್ರಿವೇಣಿ ಕುಮಾರ್, ನಿರಂಜನ ದೇವರಮನೆ, ಕೊಟ್ರೇಶ್ ಎಸ್.ವಿ, ಜಯಪ್ಪ ಟಿ., ಸಿದ್ದಪ್ಪ ಮಲ್ಲಾಪುರ, ಟಿ.ಕೆ ಲತಾ ಉಮೇಶ್, ಸಿ.ಟಿ ಜಯಣ್ಣ, ಯಶವಂತ ಎಂ. ಇವರುಗಳು ನೇಮಕ ಮಾಡಿ ಮುರುಘಾಶ್ರೀ ಆದೇಶ ಹೊರಡಿಸಿದರು.
ಮುರುಘಾ ಶ್ರೀಗಳ ಈ ನೇಮಕದ ಆದೇಶ ಹೊರ ಬೀಳುತ್ತಿದ್ದಂತೆ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಡಾ.ಮಧುಕುಮಾರ್, ತೀವ್ರ ಆಕ್ಷೇಪ ವ್ಯಕ್ತಪಡಿಸಿ ಯಾವುದೇ ಕಾರಣದಿಂದ ಈ ಪಟ್ಟಿಗೆ ಒಪ್ಪಿಗೆ ಸೂಚಿಸಬಾರದೆಂದು ಸಹಕಾರ ಸಂಘಗಳ ನೋಂದಣಿ ಇಲಾಖೆಯ ಉಪನೋಂದಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.ವೀರಶೈವ ಸಮಾಜದ ನೋದಣಿ 11 ವರ್ಷಗಳಿಂದ ನವೀಕರಣಗೊಂಡಿಲ್ಲ, ಸಾಮಾನ್ಯ ಸಭೆ ನಡೆದಿಲ್ಲ. ಸಂಸ್ಥೆಯನ್ನು ಇಂದಿನವರೆಗೆ ನವೀಕರಣಗೊಳಿಸಿರುವಂತೆ ಸುಳ್ಳು ಸೃಷ್ಟಿಸಿ ದಸ್ತಾವೇಜುಗಳ ತಯಾರು ಮಾಡಿದ್ದಾರೆ. ಪೋಕ್ಸೋದಂತಹ ಕ್ರಿಮಿನಲ್ ಸ್ವರೂಪದ ಆರೋಪ ಎದುರಿಸುತ್ತಿರುವ ಮಹಾ ಪೋಷಕರು ಪದಾಧಿಕಾರಿಗಳ ನೇಮಕದ ಆದೇಶ ಹೊರಡಿಸುವುದು ಸೂಕ್ತವಲ್ಲ. ಸಮಾಜದ ಸದಸ್ಯ ರಲ್ಲದಂತಹ ಮತ್ತು ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಇರದಂತಹವರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದ್ದು, ಇದು ಬೈಲಾ ವಿರುದ್ಧದ ನಡೆಯಾಗಿದೆ ಎಂದು ಮಧುಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
11 ವರ್ಷಗಳ ಹಿಂದೆ ಸರ್ವ ಸದಸ್ಯರು ಸಭೆ ನಡೆಸಿ ನಿರ್ಣಯಿಸಿದ ಯಾವುದೇ ನಿರ್ಣಯಗಳು ಇದವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಮಹಾ ಪೋಷಕರು ಫೋಕ್ಸೋ ಪ್ರಕರಣದ ಆರೋಪಕ್ಕೆ ಗುರಿಯಾಗಿ 14 ತಿಂಗಳು ಜೈಲಿನಲ್ಲಿ ಇದ್ದರು. ಅವರ ಮೇಲೆ ಇರುವ ಆರೋಪಗಳಿಂದ ಘನ ನ್ಯಾಯಾಲಯ ಮುಕ್ತರನ್ನಾಗಿ ಮಾಡಿಲ್ಲ. ಸಮಾಜದ ಮಹಾ ಪೋಷಕರು ಸರ್ವ ಸದಸ್ಯರ ಸಭೆ ನಡೆಸದೆ , ನವೀಕರಣ ಮಾಡದೆ ಪದಾಧಿಕಾರಿಗಳ ಆಯ್ಕೆ ಮಾಡಿ, ಪ್ರಜಾತತ್ವ ಮೌಲ್ಯಗಳಿಗೆ ತಿಲಾಂಜಲಿ ಇಟ್ಟಿದ್ದಾರೆ. ಇದು ಕಾನೂನು ಬಾಹಿರ ನಡೆಯಾಗಿದೆ. ಸಹಕಾರ ತತ್ವಗಳ ಗಾಳಿಗೆ ತೂರಿ ಸಮಾಜದ ಸದಸ್ಯರಲ್ಲದವರನ್ನು, ಸರ್ವ ಸದಸ್ಯರ ಸಭೆ ಕರೆಯದೆ ಪದಾಧಿಕಾರಿಗ ಳನ್ನಾಗಿ ನೇಮಿಸಲಾಗಿದೆ ಎಂದಿದ್ದಾರೆ.ನ್ಯಾಯಲಯದ ನಿಬಂಧನೆಗಳಿಗೆ ಒಳಪಟ್ಟು ದಾವಣಗೆರೆಯಲ್ಲಿ ವಾಸ ಮಾಡುತ್ತಿರುವ ಶಿವಮೂರ್ತಿ ಮುರುಘಾ ಶರಣರು ಮಹಾ ಪೋಷಕರಾಗಿ ಸಮಾಜದ ಕಾರ್ಯಕಾರಿ ಸಮಿತಿಯ ನೇಮಕ ಮಾಡಿರುವುದಕ್ಕೆ ಅನುಮೋದನೆ ನೀಡಬಾರದು. ಮತ್ತು ಸಮಾಜದ ನವೀಕರಣಗೊಳಿಸಬಾರದಾಗಿ ಕೋರುತ್ತೇನೆ. ಒಂದು ವೇಳೆ ಕಾನೂನು ಬಾಹಿರವಾಗಿ ಏನಾದರೂ ಸಮಾಜದ ನೋಂದಣಿಯನ್ನು ನವೀಕರಣಗೊಳಿಸುವುದಾದಲ್ಲಿ, ಕಾರ್ಯಕಾರಿ ಸಮಿತಿ ಪಟ್ಟಿಗೆ ಅನುಮೋದನೆ ನೀಡಿದ್ದಲ್ಲಿ ಮುಂದಿನ ಕಾನೂನು ಕ್ರಮಕ್ಕೆ ಬಾಧ್ಯಸ್ಥರಾಗಿರುತ್ತೀರೆಂದು ಮಧುಕುಮಾರ್ ಉಪನೋಂದಣಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ ಉಲ್ಲೇಖಸಿದ್ದಾರೆ.