ಕನ್ನಡಪ್ರಭ ವಾರ್ತೆ ಗೋಕಾಕ ವೀರಶೈವ ಮತ್ತು ಲಿಂಗಾಯತ ಎರಡೂ ಒಂದೆಯಾಗಿದ್ದು, ತಾರತಮ್ಯವೂ ಬೇಡ ತಪ್ಪಾಗಿ ಅರ್ಥೈಸಿಕೊಳ್ಳುವುದೂ ಬೇಡ ಎಂದು ಶ್ರೀಶೈಲ ಹಾಗೂ ಸುಕ್ಷೇತ್ರ ಯಡೂರ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ವೀರಶೈವ ಮತ್ತು ಲಿಂಗಾಯತ ಎರಡೂ ಒಂದೆಯಾಗಿದ್ದು, ತಾರತಮ್ಯವೂ ಬೇಡ ತಪ್ಪಾಗಿ ಅರ್ಥೈಸಿಕೊಳ್ಳುವುದೂ ಬೇಡ ಎಂದು ಶ್ರೀಶೈಲ ಹಾಗೂ ಸುಕ್ಷೇತ್ರ ಯಡೂರ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. ಪಟ್ಟಣದ ವಿಠ್ಠಲ-ರುಕ್ಮಿಣಿ ಸಭಾಭವನದಲ್ಲಿ ವೀರಶೈವ -ಲಿಂಗಾಯತ ಸಮಾಜ ಹಾಗೂ ಸರ್ವ ಸಮಾಜ ಬಾಂಧವರು, ನಾಗರಿಕರು ಹಾಗೂ ಗೋಕಾಕ ತಾಲೂಕಿನ ಯಡೂರ ಪಾದಯಾತ್ರಿಗಳ ಬಳಗ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರ ಯಡೂರ ವೀರಭದ್ರೇಶ್ವರ ದೇವಸ್ಥಾನದ ರಾಜಗೋಪುರ ಲೋಕಾರ್ಪಣೆ, ಲಕ್ಷ್ಯದೀಪೋತ್ಸವ, ಕೃಷ್ಣಾರತಿ ಮತ್ತು ಮಹಾಕುಂಭಾಭಿಷೇಕ ಹಾಗೂ ಶ್ರೀಶೈಲ ಜಗದ್ಗುರುಗಳ ಧರ್ಮ ಜಾಗೃತಿ ಸಮಾರಂಭ ನಾಲ್ಕು ದಿನಗಳ ಪ್ರವಚನ ಮಾಲಿಕೆಯ ಸಮಾರೋಪದ ಬಳಿಕ ನಡೆದ ಧರ್ಮ ಜಾಗೃತಿ ಸಮಾರಂಭದಲ್ಲಿ ಮಾತನಾಡಿದರು. ಸಮಾಜದ ಉಪ-ಪಂಗಡಗಳ ನಡುವೆ ಹೆಣ್ಣು-ಗಂಡು ಕೊಟ್ಟು-ತೊಗೊಳ್ಳುವ ಕಾರ್ಯಸೂಚಿ ಇಲ್ಲವೇ ಪ್ರವೃತ್ತಿಯನ್ನು ಮುಂದುವರೆಸುವ ಮೂಲಕವೇ ಆಂತರಿಕವಾಗಿರುವ ಅಸಮಾನತೆಯನ್ನು ತೊಡೆದು ನಾವೆಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲೂ ಮೂಡಿದಾಗ ಮಾತ್ರ ಒಗ್ಗಟ್ಟು ಮೂಡಲು ಸಾಧ್ಯ ಎಂದು ಉಪದೇಶಿಸಿದರು.ನಮ್ಮ-ನಮ್ಮಲ್ಲಿಯ ಆಂತರಿಕ ಕಚ್ಚಾಟ ಬಿಡಬೇಕು. ಈ ದಿಶೆಯಲ್ಲಿ ವೀರಶೈವ ಮಹಾ ಸಂಘಟನೆಗಳು ಒಗ್ಗೂಡಿ ಸಮಾನತೆಯ ಮಂತ್ರವನ್ನು ಪಠಿಸಬೇಕು. ಎಲ್ಲ ಉಪ ಜಾತಿಗಳೂ ಪರಸ್ಪರ ಸರಿ ಸಮಾನವೇ ಆಗಿದ್ದು, ಒಂದು ದೊಡ್ಡದು ಮತ್ತೊಂದು ಸಣ್ಣದು ಎಂಬ ಕೀಳರಿಮೆಯನ್ನು ನಾವೆಲ್ಲರೂ ತೊರೆದಾಗ ಮಾತ್ರ ಸಮಾನತೆ ಗೋಚರಿಸಲು ಸಾಧ್ಯ. ಸರ್ಕಾರಿ ಸೇವೆ ಪಡೆಯಲು 2ಎ ಮತ್ತು 3ಬಿ ಮೀಸಲಾತಿ ವ್ಯವಸ್ಥೆಯಿಂದ ಉದ್ಭವಿಸಿರುವ ಭಿನ್ನಾಭಿಪ್ರಾಯ ತೊಡೆದುಹಾಕಲು ವೀರಶೈವ/ ಲಿಂಗಾಯತ ಸಮಾಜವನ್ನು ಒಬಿಸಿ ಮೀಸಲು ವರ್ಗಕ್ಕೆ ಸೇರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದನ್ನು ವಿವರಿಸಿದರು.ಹಿರಿಯ ಮುಖಂಡ ಅಶೋಕ ಪೂಜಾರಿ, ಕೆ.ಎಲ್.ಇ ಸಂಸ್ಥೆ ನಿರ್ದೇಶಕ ಜಯಾನಂದ ಮುನವಳ್ಳಿ ಮಾತನಾಡಿ, ನಾವೆಲ್ಲರೂ ಧಾರ್ಮಿಕ ಸಂಪ್ರದಾಯಗಳನ್ನು ಯಥಾವತ್ತಾಗಿ ಆಚರಣೆಗೆ ತಂದು ಯುವ ಪೀಳಿಗೆಯೂ ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಜಾಗೃತಿ ವಹಿಸುವುದು ಇಂದಿನ ಅಗತ್ಯವಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಯಡೂರ ಪಾದಯಾತ್ರೆ ಬಳಗದ ರಮೇಶ ಮುರ್ತೆಲಿ, ಮಲ್ಲಯ್ಯ ಹಿರೇಮಠ, ಚಂದ್ರಕಾಂತ ಕುರಬೇಟ ಮೊದಲಾದವರು ಪಾಲ್ಗೊಂಡಿದ್ದರು.