26 ರಂದು ವೀರಶೈವ ಲಿಂಗಾಯಿತ ವಧು ವರರ ಸಮಾವೇಶ

| Published : May 16 2024, 12:46 AM IST

26 ರಂದು ವೀರಶೈವ ಲಿಂಗಾಯಿತ ವಧು ವರರ ಸಮಾವೇಶ
Share this Article
  • FB
  • TW
  • Linkdin
  • Email

ಸಾರಾಂಶ

ವೀರಶೈವ ಲಿಂಗಾಯಿತ ವಧು ವರರ ಸಮಾವೇಶದ ಕರಪತ್ರವನ್ನು ಈರೇಶ್ ಮತ್ತಿತರರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕದಿಂದ ಇದೇ ಪ್ರಥಮ ಬಾರಿಗೆ ವೀರಶೈವ ಲಿಂಗಾಯಿತ ವಧು ವರರ ಸಮಾವೇಶ ಮೇ 26ರ ಭಾನುವಾರ ಪಟ್ಟಣದ ಹೊಸ ಸಂತೆ ಮೈದಾನ ಸಮೀಪದಲ್ಲಿನ ಶ್ರೀ ದತ್ತ ಮಠದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಘಟಕದ ತಾಲೂಕು ಅಧ್ಯಕ್ಷ ಎನ್.ವಿ ಈರೇಶ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 5 ವರ್ಷದಿಂದ ಘಟಕ ಅತ್ಯಂತ ಕ್ರಿಯಾಶೀಲವಾಗಿ ಹಲವು ಸಮಾಜಮುಖಿ ಕಾರ್ಯ ಹಮ್ಮಿಕೊಂಡಿದ್ದು ಇದೇ ಪ್ರಥಮ ಬಾರಿಗೆ ವಧು ವರರ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.

ತಾಲೂಕಿನಾದ್ಯಂತ ಸಂಘಟನೆ ಸದೃಢಗೊಳಿಸುವ ದಿಸೆಯಲ್ಲಿ ಗ್ರಾಮೀಣ ಭಾಗಕ್ಕೆ ತೆರಳಿದಾಗ ವಿವಾಹಕ್ಕೆ ಯೋಗ್ಯರಾದ ಹಲವು ವಧು ವರರು ಸಮನ್ವಯತೆ ಕೊರತೆಯಿಂದ ವಿವಾಹ ಭಾಗ್ಯವಿಲ್ಲದೆ ಸಾಮಾಜಿಕ ಬಿಕ್ಕಟ್ಟು ಹೆಚ್ಚಾಗುತ್ತಿದೆ. ಈ ದಿಸೆಯಲ್ಲಿ ವಧು ವರರನ್ನು ಪೋಷಕರ ಸಮ್ಮುಖದಲ್ಲಿ ಪರಸ್ಪರ ಮುಖಾಮುಖಿಯಾಗಿಸಿ ಅಪೇಕ್ಷೆಗೆ ಪೂರಕವಾಗಿ ಸುಲಭದಲ್ಲಿ ವಿವಾಹ ಕಾರ್ಯ ನೆರವೇರಿಸುವ ಪ್ರಯತ್ನದ ಅಂಗವಾಗಿ ಘಟಕದಿಂದ 26ರ ಭಾನುವಾರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಾಂಚನಾ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ವರರನ್ನು ವಿವಾಹವಾಗಲು ಯುವತಿಯರು ಹಿಂದೇಟು ಹಾಕುತ್ತಿದ್ದು ಈ ದಿಸೆಯಲ್ಲಿ ಚಾಮರಾಜನಗರದಲ್ಲಿ ನಡೆದ 40ಕ್ಕೂ ಅಧಿಕ ವಿವಾಹ ವಂಚಿತ ಪುರುಷರ ಉರುಳು ಸೇವೆ ಸಮಾಜದ ದೌರ್ಬಾಗ್ಯ ಎಂದು ವಿಷಾಧಿಸಿದರು. ಸಮಾಜದಲ್ಲಿ ಹೆಚ್ಚಾಗುತ್ತಿರುವ ಲವ್ ಜಿಹಾದ್ ಮತ್ತಿತರ ರೀತಿಯ ವಂಚನೆಯಿಂದ ಯುವತಿಯರನ್ನು ರಕ್ಷಿಸಿ ಸೂಕ್ತ ನೆಲೆಗಟ್ಟು ಕಲ್ಪಿಸಿಕೊಡಲು ಗುರುಹಿರಿಯರ ಸಮಕ್ಷಮದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟಕದ ನಿರ್ದೇಶಕ ಕುಮಾರಸ್ವಾಮಿ ಹಿರೇಮಠ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೃಷಿಕರು, ಸ್ವ ಉದ್ಯೋಗಸ್ಥ ಆರ್ಥಿಕವಾಗಿ ಸದೃಢರಾದ ಹಲವು ವರರು ವಧುವಿನ ಕೊರತೆಯಿಂದ ವಿವಾಹ ಭಾಗ್ಯದಿಂದ ವಂಚಿತರಾಗಿದ್ದು ಕೇವಲ ಇಂಜಿನಿಯರ್, ವೈದ್ಯ ಮತ್ತಿತರ ವೃತ್ತಿಯ ನಗರ ಪ್ರದೇಶದ ವರನ ಬಗ್ಗೆ ಮಾತ್ರ ಹೆಚ್ಚು ಆಸಕ್ತಿ ವಹಿಸುವ ವಧುವಿನ ಪೋಷಕರ ಮನಸ್ಥಿತಿ ಬದಲಾಗಬೇಕಾಗಿದೆ. ಈ ದಿಸೆಯಲ್ಲಿ ಸಂಘಟನೆ ಮೂಲಕ ಸಮಾವೇಶ ಹಮ್ಮಿಕೊಂಡು ಮಧ್ಯವರ್ತಿಗಳಿಂದ ವಂಚನೆಗೊಳಗಾಗದಂತೆ ಆಸಕ್ತ ವಧು ವರರು ಕಡ್ಡಾಯವಾಗಿ ಪೋಷಕರ ಜತೆ ಸಮಾವೇಶದಲ್ಲಿ ಪಾಲ್ಗೊಂಡು ನೇರ ಸಂದರ್ಶನದ ಮೂಲಕ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಮ.ನಿ.ಪ್ರ ಅಭಿನವ ಚನ್ನಬಸವ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು ವೀರಶೈವ ಲಿಂಗಾಯಿತ ಸಮಾಜದ ಎಲ್ಲ ಒಳಪಂಗಡಗಳ ವಧು ವರರು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ನೋಂದಣಿಗೆ 20ರ ಸೋಮವಾರ ಕಡೆ ದಿನವಾಗಿದ್ದು ಸಮಾವೇಶದ ಮಧ್ಯಾಹ್ನ ಬೋಜನ ವ್ಯವಸ್ಥೆ ಇದ್ದು ಹೆಚ್ಚಿನ ಮಾಹಿತಿಗಾಗಿ 9986400293,9740545459,6362041738 ಕ್ಕೆ ಸಂಪರ್ಕಿಸುವಂತೆ ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಘಟಕದ ಕಾರ್ಯದರ್ಶಿ ಸಿ.ಕೊಟ್ರೇಶ್ವರಪ್ಪ, ಶ್ರೀಧರಮೂರ್ತಿ ಮತ್ತಿತರರಿದ್ದರು.