ಸಾರಾಂಶ
ರಾಣಿಬೆನ್ನೂರು: ವೀರಶೈವ ಲಿಂಗಾಯತ ಧರ್ಮದ ನೆಲೆಗಟ್ಟು ಆದಿ ಜಗದ್ಗುರು ಶ್ರೀ ರೇಣುಕಾದಿ ಪಂಚಾಚಾರ್ಯರಿಂದ ಸ್ಥಾಪಿತಗೊಂಡು ಬಸವಾದಿ ಶಿವಶರಣರಿಂದ ಬೆಳಕನ್ನು ಕಂಡಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಗೌರವಾಧ್ಯಕ್ಷ, ಆವರಗೊಳ್ಳದ ಓಂಕಾರ ಶಿವಾಚಾರ್ಯರು ನುಡಿದರು.
ನಗರದ ಮೆಡ್ಲೇರಿ ರಸ್ತೆ ಆದಿಶಕ್ತಿ ದೇವಸ್ಥಾನದ ಬಿ.ಕೆ. ಗುಪ್ತಾ ಸಮುದಾಯ ಭವನದಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಆಯೋಜಿಸಿದ್ದ ಹಾನಗಲ್ಲ ಗುರು ಕುಮಾರ ಶಿವಯೋಗಿಗಳವರ 157ನೇ ಜಯಂತ್ಯುತ್ಸವ, ನೂತನ ಪದಾಧಿಕಾರಿಗಳ ಸೇವಾ ದೀಕ್ಷಾ, ಸಾಧಕ ಗಣ್ಯರ, ಅಭಿನಂದನಾ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಲಿಂಗಾಯತ ಧರ್ಮವು ಜಾತಿಯ ಮತ ಭೇದಗಳನ್ನು ಮರೆತು ಒಟ್ಟಾರೆ ಮಾನವ ಸಂಕುಲಕ್ಕೆ ಮಠ-ಪೀಠಗಳ ಅಡಿಯಲ್ಲಿ ಆದಿಯಿಂದಲೂ ಧಾರ್ಮಿಕ ನೆಲಗಟ್ಟಿನ ಮೇಲೆ ಸಾಮಾಜಿಕ ಸ್ವಾಸ್ಥ ಬದುಕನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ವೀರಶೈವ ಧರ್ಮ ಅಕ್ಷರ, ಅನ್ನ, ಆಶ್ರಯ ಮತ್ತು ಜ್ಞಾನ ನೀಡುವುದರ ಮುಖಾಂತರ ಇಡೀ ಮನುಕುಲಕ್ಕೆ ಕಲ್ಯಾಣವನ್ನು ಬಯಸಿರುವ ಅತ್ಯಂತ ಶ್ರೇಷ್ಠ ಧರ್ಮವಾಗಿದೆ. ಇಡೀ ಮನುಕುಲಕ್ಕೆ ಒಳಿತನ್ನು ಬಯಸುತ್ತಾ ಬಂದಿರುವಂತಹ ವೀರಶೈವ ಲಿಂಗಾಯತರಿಗೆ ಓಬಿಸಿ ಅಡಿಯಲ್ಲಿ ಅವಕಾಶವನ್ನು ಕಲ್ಪಿಸದೆ ಇರುವುದು ಖೇದಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ಧರ್ಮದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಸಮಾಜದ ಬಂಧುಗಳು ತಿರಸ್ಕರಿಸದೇ, ಪರಂಪರೆಯನ್ನು ಉಳಿಸಿ ಬೆಳೆಸಬೇಕು. ವೀರಶೈವ ಲಿಂಗಾಯತ ಧರ್ಮ ಜಾತಿ ಸೂಚಕವಲ್ಲ ಅದು ತತ್ವ ಸಿದ್ಧಾಂತ ಸೂಚಕವಾಗಿದೆ. ಸಂಸ್ಕಾರ ಮತ್ತು ಶಿಷ್ಟಾಚಾರವನ್ನು ಬಯಸಿ ಬಂದಿರುವಂತಹ, ಎಲ್ಲ ಮನುಕುಲಕ್ಕೆ ಆಸರೆಯನ್ನು ಕೊಟ್ಟಿದೆ. ಇಂತಹ ಪವಿತ್ರ ಶ್ರೇಷ್ಠ ಧರ್ಮದ ಸಂಸ್ಕಾರ ಸಂಸ್ಕೃತಿಯನ್ನು ತಿರಸ್ಕರಿಸುವುದು ಸರಿಯಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ವೀರಶೈವ ಲಿಂಗಾಯತ ಸಮುದಾಯಕ್ಕೆ ಅವಕಾಶ ಕಲ್ಪಿಸಿಕೊಡಲು ಮುಂದಾಗಬೇಕು ಎಂದರು.
ಲಿಂಗನಾಯಕನಹಳ್ಳಿಯ ಚನ್ನವೀರ ಮಹಾಸ್ವಾಮಿಗಳು ಮಾತನಾಡಿ, ಸಮಾಜವನ್ನು ನಮ್ಮ ರಾಜಕಾರಣಿಗಳು, ಬುದ್ಧಿಜೀವಿಗಳು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಸಾಗಿದ್ದಾರೆಯೇ ಹೊರತು, ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗೆ ಯಾರು ಗಮನ ನೀಡುತ್ತಿಲ್ಲ ಇದು ಅತ್ಯಂತ ವಿಷಾದಕರ ಸಂಗತಿಯಾಗಿದೆ. ಸಮಾಜ ಸಂಘಟನೆಗಾಗಿ ಹಾನಗಲ್ಲ ಕುಮಾರ ಶ್ರೀಗಳವರು ಚಿಂತನೆ ನಡೆಸಿ, ಗ್ರಾಮೀಣ ಪ್ರದೇಶದ ಬಡ ಮಕ್ಕಳ, ಶಿಕ್ಷಣ, ಆಚಾರ, ವಿಚಾರ, ಸಂಸ್ಕೃತಿಯ ರಕ್ಷಣೆಗಾಗಿ ತಮ್ಮನ್ನೇ ತಾವು ತೊಡಗಿಸಿಕೊಂಡು ಸಮರ್ಪಣಾ ಮನೋಭಾವದಲ್ಲಿ ಸೇವೆ ಸಲ್ಲಿಸಿದರು.
ಅವರ ಕನಸು ನನಸಾಗಬೇಕಾಗಿದೆ, ಅದಕ್ಕಾಗಿ ಭವಿಷ್ಯದ ಯುವ ಜನಾಂಗ ಮನೆ ಮನೆಗೆ ತೆರಳಿ ಸದಸ್ಯತ್ವ ಅಭಿಯಾನದ ಮೂಲಕ ಸಂಘಟನೆ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.ದೊಡ್ಡಪೇಟೆ ವಿರಕ್ತ ಮಠದ ಗುರುಬಸವ ಸ್ವಾಮಿಗಳು ಮಾತನಾಡಿದರು. ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್. ಕೋರಿಶೆಟ್ಟರ ಪ್ರತಿಜ್ಞಾವಿಧಿ ಬೋಧಿಸಿದರು. ತಾಲೂಕು ಘಟಕದ ಅಧ್ಯಕ್ಷ ಕೆ.ಎನ್.ಕೋರಧಾನ್ಯಮಠ ಅಧ್ಯಕ್ಷತೆ ವಹಿಸಿದ್ದರು.
ಹಾನಗಲ್ಲ ಕುಮಾರ ಶ್ರೀಗಳ ಜೀವನ ಕುರಿತು ನಿವೃತ್ತ ಉಪನ್ಯಾಸಕ ಪ್ರೊ. ಎಚ್.ಎ.ಭಿಕ್ಷಾವರ್ತಿಮಠ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಕೆ.ಎಂ. ಬಂದಮ್ಮನವರ, ವ್ಹಿ.ವಿ. ಹರಪನಹಳ್ಳಿ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.ಮಲ್ಲೇಶಪ್ಪ ಅರಕೇರಿ, ಚನ್ನಬಸಪ್ಪ ಕಲ್ಯಾಣಿ, ಗಾಯಿತ್ರಮ್ಮ ಕುರುವತ್ತಿ, ಪರಮೇಶ ಯಡಿಯಾಪುರ, ವಿನಯ ಪಾಟೀಲ, ಸರೋಜಾ ಹುಲಿಹಳ್ಳಿ, ಪುಷ್ಪಾ ಬದಾಮಿ, ಕವಿತಾ ಕೂರಗುಂದಮಠ, ಶಂಕರಗೌಡ ಪಾಟೀಲ, ಹಾನಗಲ್ ದೇಶಮುಖ, ಬ್ಯಾಡಗಿ ಅಂಕಲಕೋಟಿ, ಕೊಟ್ರೇಶಪ್ಪ ಎಮ್ಮಿ, ಪ್ರಕಾಶ ಗಚ್ಚಿನಮಠ, ಪ್ರಭುಲಿಂಗಪ್ಪ ಹಲಗೇರಿ, ಚಂದ್ರಣ್ಣ ಸೊಪ್ಪಿನ, ಇಂದಿರಾ ಕೊಪ್ಪದ, ಕಸ್ತೂರಮ್ಮ ಪಾಟೀಲ, ವಿನೋದ ಜಂಬಿಗಿ ಉಪಸ್ಥಿತರಿದ್ದರು.