ಸಾರಾಂಶ
ಎರಡು ದಿನಗಳ ಕಾಲ ವಿವಿಧ ಗೋಷ್ಠಿ-ಎಂ.ಎಸ್. ಕೋರಿಶೆಟ್ಟರ್
ಕನ್ನಡಪ್ರಭ ವಾರ್ತೆ ಹಾವೇರಿವೀರಶೈವ ಲಿಂಗಾಯತರನ್ನು ಒಗ್ಗೂಡಿಸುವ ಸಲುವಾಗಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದಿಂದ ಡಿ. ೨೩ ಮತ್ತು ೨೪ರಂದು ದಾವಣಗೆರೆಯಲ್ಲಿ ೨೪ನೇ ಮಹಾ ಅಧಿವೇಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್. ಕೋರಿಶೆಟ್ಟರ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನದಿಂದಲೂ ವೀರಶೈವ-ಲಿಂಗಾಯತ ಮಹಾಸಭಾವು ಸಮಾಜದ ಸಂಘಟನೆ ಮತ್ತು ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಪ್ರಸ್ತುತದಲ್ಲಿ ಸಮಾಜದ ಸಂಘಟನೆ ಅತ್ಯಂತ ಮಹತ್ವ ಪಡೆದಿದ್ದು, ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಮಾಜವನ್ನು ಸಂಘಟಿಸುವ ಉದ್ದೇಶದಿಂದ ಈ ಮಹಾ ಅಧಿವೇಶನ ಆಯೋಜಿಸಲಾಗಿದೆ. ಜತೆಗೆ, ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ರಚನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು ಈ ಬಾರಿಯ ಅಧಿವೇಶನದ ಪ್ರಮುಖ ಅಂಶವಾಗಿದೆ. ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ಹಕ್ಕೊತ್ತಾಯ ಮಂಡಿಸಲು ತೀರ್ಮಾನಿಸಲಾಗಿದೆ. ಸ್ವತಂತ್ರ ಧರ್ಮದ ಮಾನ್ಯತೆ ಜತೆಗೆ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ವೀರಶೈವ-ಲಿಂಗಾಯತ ಸಮುದಾಯಗಳನ್ನು ಸೇರ್ಪಡೆ ಮಾಡಬೇಕೆಂದು ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದರು.ದಾವಣಗೆರೆಯ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಡಿ. ೨೩ ಮತ್ತು ೨೪ರಂದು ನಡೆಯುವ ಮಹಾ ಅಧಿವೇಶನದಲ್ಲಿ ಮಹಾಸಭಾದ ಗೌರವಾಧ್ಯಕ್ಷ ಭೀಮಣ್ಣ ಖಂಡ್ರೆ, ಮಹಾಸಭಾ ಅಧ್ಯಕ್ಷ ಶ್ಯಾಮನೂರ ಶಿವಶಂಕ್ರಪ್ಪ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ ಸೇರಿದಂತೆ ನಾಡಿನ ಹಿರಿಯ ಮಠಾಧೀಶರು, ರಾಜಕೀಯ ಮುಖಂಡರು, ಸಮಾಜದ ಗಣ್ಯರು, ಸಾಹಿತಿಗಳು, ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದರು.
ಎರಡು ದಿನಗಳ ಕಾಲ ನಡೆಯುವ ಈ ಮಹಾ ಅಧಿವೇಶನದಲ್ಲಿ ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ, ಕೈಗಾರಿಕೆ, ಕೃಷಿ, ಯುವ, ಮಹಿಳಾ ಅಧಿವೇಶನಗಳು ಹಾಗೂ ಸಾಂಸ್ಕೃತಿಕ ಪರಂಪರೆ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ. ಜತೆಗೆ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಇತಿಹಾಸ, ಕಾರ್ಯಚಟುವಟಿಕೆಯನ್ನು ಪರಿಚಯಿಸುವ ವಸ್ತುಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ಮಾರಾಟ, ಕೈಗಾರಿಕೆ, ವಾಣಿಜ್ಯ ಹಾಗೂ ಕೃಷಿ ಕ್ಷೇತ್ರಕ್ಕೆ ಸಂಬಂಧಿತ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.ಈ ಮಹಾ ಅಧಿವೇಶಕ್ಕೆ ಆಗಮಿಸುವ ಸಮಾಜದ ಬಂಧುಗಳು ₹೫೦೦ ಶುಲ್ಕ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಎರಡು ದಿನಗಳ ಕಾಲ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು. ಆಸಕ್ತರು ಡಿ. ೧೦ರೊಳಗಾಗಿ ಜಿಲ್ಲಾ, ತಾಲೂಕು ಘಟಕಗಳನ್ನು ಸಂಪರ್ಕಿಸಿ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ವಿಶ್ವನಾಥ ಅಂಕಲಕೋಟಿ, ಶಂಭು ಚಕ್ಕಡಿ, ಶಿವಬಸಪ್ಪ ಟೊಂಕದ, ಮೃತ್ಯುಂಜಯ ಬುಕ್ಕಶೆಟ್ಟಿ, ಅಜ್ಜನಗೌಡ ಗೌಡಪ್ಪನವರ, ವೀರಣ್ಣ ಹರಣಗಿರಿ, ವೀರಣ್ಣ ನೀರಲಗಿ ಇತರರು ಇದ್ದರು.