ಶಿವರಾಮು ವಿರುದ್ಧ ಕ್ರಮಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಚಾಮರಾಜನಗರ ಎಸ್‌ಪಿಗೆ ಒತ್ತಾಯ

| Published : Dec 17 2024, 12:47 AM IST

ಶಿವರಾಮು ವಿರುದ್ಧ ಕ್ರಮಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಚಾಮರಾಜನಗರ ಎಸ್‌ಪಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಜೊತೆಗೆ ಬಹಿರಂಗವಾಗಿ ಕೈ ಕತ್ತರಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವ ಕೆ.ಎಸ್.ಶಿವರಾಮು ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದಿಂದ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ಅವರಿಗೆ ದೂರು ಸಲ್ಲಿಸಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಸಲ್ಲಿಕೆ । ಶಿವರಾಮು ಮನೆಗೆ ಮುತ್ತಿಗೆ: ಮೂಡ್ಲುಪುರ ನಂದೀಶ್ ಎಚ್ಚರಿಕೆ । ಬಹಿರಂಗ ಕ್ಷಮೆಗೆ ಆಗ್ರಹ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವೀರಶೈವ ಲಿಂಗಾಯತ ಸಮಾಜ ಹಾಗೂ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಜೊತೆಗೆ ಬಹಿರಂಗವಾಗಿ ಕೈ ಕತ್ತರಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವ ಕೆ.ಎಸ್.ಶಿವರಾಮು ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ಅವರಿಗೆ ದೂರು ಸಲ್ಲಿಸಲಾಯಿತು.

ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಶಿವರಾಮು ಎಂಬ ವ್ಯಕ್ತಿ ಪಂಚಮಸಾಲಿ ಸಮಾಜದ ಮೀಸಲಾತಿಗೆ ಹೋರಾಟ ಮಾಡುತ್ತಿರುವ ಬಸವಜಯ ಮೃತ್ಯುಂಜಯ ಶ್ರೀಗೆ ಅಪಮಾನ ಮಾಡಿದ್ದಾರೆ. ೨ಎ ಮೀಸಲಾತಿ ಕೇಳಿ ನಮ್ಮ ಅನ್ನದ ತಟ್ಟೆಗೆ ಕೈ ಹಾಕಬೇಡಿ. ಕೈ ಹಾಕಿದರೆ ನಿಮ್ಮ ಕೈಯನ್ನು ಕತ್ತರಿಸುತ್ತೇವೆ ಎಂದು ಸ್ವಾಮೀಜಿ ಹಾಗೂ ಹೋರಾಟಗಾರರಿಗೆ ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದು ಹಾಗೂ ಶ್ರೀಗಳನ್ನು ಬಿಜೆಪಿಯ ಏಜೆಂಟ್ ಎಂದು ನಿಂದಿಸಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮವಾಗಬೇಕು ಎಂದು ಒತ್ತಾಯಿಸಿದರು.

ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ನೇತೃತ್ವದಲ್ಲಿ ಮಹಾಸಭಾದ ನಿರ್ದೇಶಕರು ನಗರದ ಎಸ್ಪಿ ಕಚೇರಿಗೆ ತೆರಳಿ ದೂರು ನೀಡುವ ಮೂಲಕ ಕೆ.ಎಸ್.ಶಿವರಾಮು ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ಮನೆಗೆ ಸಾವಿರಾರು ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮಾಜದವರು ಮುತ್ತಿಗೆ ಹಾಕಬೇಕಾಗುತ್ತದೆ. ಸಂವಿಧಾನ ದತ್ತವಾಗಿ ಮೀಸಲಾತಿ ಕೇಳುವುದು ನಮ್ಮ ಹಕ್ಕು. ಇದರ ವಿರುದ್ಧ ಮಾತನಾಡುವ ಮೂಲಕ ಶಿವರಾಮು ಅವರು ಜಾತಿ ಜಾತಿಗಳ ನಡುವೆ ವೈಷಮ್ಯ ಉಂಟು ಮಾಡುತ್ತಿದ್ದಾರೆ. ಈ ಕೂಡಲೇ ಇವರನ್ನು ಬಂಧಿಸಬೇಕು ಎಂದು ನಂದೀಶ್‌ ಒತ್ತಾಯಿಸಿದರು.

ಲಿಂಗಾಯತ ಪಂಚಮಸಾಲಿ ಸಮಾಜವು ಕೃಷಿ ನಂಬಿಕೊಂಡು ಕೃಷಿ ಕಾರ್ಮಿಕ ಸಮಾಜವಾಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ರಾಜ್ಯ ಸರ್ಕಾರ ೨ಎ ಮೀಸಲಾತಿ ಹಾಗೂ ಎಲ್ಲ ಲಿಂಗಾಯಿತರನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಸುವ ಕುರಿತು ಲಿಂಗಾಯತ ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಸಂವಿಧಾನದ ಆಶಯದಂತೆ ಮೀಸಲಾತಿಗೆ ಶ್ರೀಗಳ ನೇತೃತ್ವದಲ್ಲಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಿವೆ. ಇದು ನ್ಯಾಯೋಚಿತವಾಗಿದೆ. ಈ ಹಿಂದೆಯು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹೋರಾಟ ನಡೆದಿದೆ ಎಂದರು.

ಕರ್ನಾಟಕದಲ್ಲಿ ಅತಿ ದೊಡ್ಡ ಸಮುದಾಯವಾದ ಪಂಚಮಸಾಲಿ ಲಿಂಗಾಯತ ಸಮುದಾಯದ ಶ್ರೀಗಳಿಗೆ ಬೆದರಿಕೆ ಹಾಕಿ ನಿಂದಿಸಿರುವ ಕೆ.ಎಸ್. ಶಿವರಾಮು ಅವರ ಹೇಳಿಕೆಯ ಹಿಂದೆ ಜಾತಿ ಜಾತಿಗಳ ಮಧ್ಯೆ ಸಂಘರ್ಷ ಉಂಟು ಮಾಡಿ ಸಮಾಜದ ಸಾಮರಸ್ಯ ಹಾಳು ಮಾಡುವ ಹಾಗೂ ಶ್ರೀಗಳ ಲಕ್ಷಾಂತರ ಭಕ್ತರನ್ನು ಪ್ರಚೋದಿಸಿ ಗಲಭೆಯಬ್ಬಿಸುವ ವ್ಯವಸ್ಥಿತ ಹುನ್ನಾರ ಅಡಗಿರುತ್ತದೆ. ಆದ ಕಾರಣ ಶ್ರೀಗಳಿಗೆ ಜೀವ ಬೆದರಿಕೆ ಹಾಕಿ, ನಿಂದಿಸಿ, ಗಲಭೆಗೆ ಪ್ರಚೋದಿಸಿದ ಸದರಿ ವ್ಯಕ್ತಿಯನ್ನು ಕೂಡಲೇ ಬಂಧಿಸಿ ವಿಚಾರಣೆಗೊಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್ಪಿ ಅವರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ಲುಪುರ ಮಂಜೇಶ್, ನಿರ್ದೇಶಕ ಬಿಸಲವಾಡಿ ಉಮೇಶ್, ಕಾವುದವಾಡಿ ಗುರು, ತಾಲೂಕು ಅಧ್ಯಕ್ಷ ಉಗನೇದಹುಂಡಿ, ಬಾಲಚಂದ್ರಮೂರ್ತಿ, ಹಿರಿಬೇಗೂರು ಗುರುಸ್ವಾಮಿ, ತೊರವಳ್ಳಿ ಕುಮಾರ್, ಕಟ್ನವಾಡಿ ಮಹದೇವಸ್ವಾಮಿ, ಇತರರು ಇದ್ದರು.