ಸಾರಾಂಶ
- ಬಸವತತ್ವ ಸಮಾವೇಶ ಉದ್ಘಾಟಿಸಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಉಳವಿ ಚನ್ನಬಸವೇಶ್ವರರು ಇಲ್ಲದೇ ಇದಿದ್ದರೆ ಕಲ್ಯಾಣ ಕ್ರಾಂತಿಯ ಸಂದರ್ಭ ವಚನ ಸಾಹಿತ್ಯ ನಶಿಸಿ ಹೋಗುತ್ತಿದ್ದವು. 12ನೇ ಶತಮಾನದ ಮಡಿವಾಳ ಮಾಚಿದೇವ, ನುಲಿಯ ಚಂದಯ್ಯ, ಉಳವಿ ಚನ್ನಬಸವೇಶ್ವರ ಅವರ ಶ್ರಮದಿಂದ ಇಂದು ವಚನ ಸಾಹಿತ್ಯ ಉಳಿದಿದೆ. ಅಂತಹ ಉಳಿವಿ ಚನ್ನಬಸವೇಶ್ವರರ ಮಹಾಪುರಾಣ ಕಾರ್ಯಕ್ರಮ ಶ್ರಾವಣ ಮಾಸದಲ್ಲಿ ತಿಂಗಳ ಪರ್ಯಂತ ಕೇಳುತ್ತಿರುವ ನೀವುಗಳೇ ಪುಣ್ಯವಂತರು ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.ಶುಕ್ರವಾರ ಸಂಜೆ ಪಟ್ಟಣದ ಶ್ರೀ ಹಾಲಸ್ವಾಮಿ ಸಮುದಾಯ ಭವನದಲ್ಲಿ ಶ್ರೀ ಹಾಲಸ್ವಾಮಿ ವಿರಕ್ತ ಮಠದ ವತಿಯಿಂದ ಆ.23ರವರೆಗೆ ನಡೆಯಲಿರುವ ಶ್ರಾವಣ ಮಾಸದ ಮಹಾಪುರಾಣ ಅಂಗವಾಗಿ ಶ್ರೀ ಉಳವಿ ಚನ್ನಬಸವೇಶ್ವರರ ಮಹಾಪುರಣ ವಚನಾಮೃತ ಬೋಧನೆ- ಬಸವತತ್ವ ಸಮಾವೇಶದ ಉದ್ಘಾಟನೆ ಹಾಗೂ ಲಿಂಗೈಕ್ಯ ಶ್ರೀಗಳಾದ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮೀಜಿ ಅವರ, ಶ್ರೀ ಹಾಲಸ್ವಾಮೀಜಿ ಅವರ, ಶ್ರೀಕಂಠ ಮಹಾಸ್ವಾಮೀಜಿ ಅವರ ಶ್ರೀ ಜಯದೇವ ಮಹಾಸ್ವಾಮೀಜಿ ಸಂಸ್ಮರಣೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ದಾವಣಗೆರೆ ನಗರದಲ್ಲಿ ಪಂಚಪೀಠಾಧ್ಯಕ್ಷರು ಒಟ್ಟಿಗೆ ಸೇರಿ ವೀರಶೈವ ಲಿಂಗಾಯಿತ ಸಮಾಜವನ್ನು ಸಂಘಟಿಸುವ ನಿರ್ಣಯ ಕೈಗೊಂಡಿರುವುದು ಶ್ಲಾಘನೀಯ ಎಂದರು.
ರಾಜ್ಯದಲ್ಲಿ 1.50 ಕೋಟಿಗೂ ಅಧಿಕ ಸಂಖ್ಯೆಯಲ್ಲಿ ವೀರಶೈವ ಲಿಂಗಾಯಿತರು ಇದ್ದಾರೆ. ಒಳಪಂಗಡಗಳ ಹೆಸರಿನಲ್ಲಿ ವರ್ಗೀಕರಣ ಸರಿಯಲ್ಲ. ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸಲು ಮುಂದಾಗಿದೆ. ಈ ಸಂದರ್ಭ ರಾಜ್ಯದ ಎಲ್ಲ ಲಿಂಗಾಯಿತರು ಒಳಪಂಗಡಗಳನ್ನು ಮರೆತು ವೀರಶೈವ ಲಿಂಗಾಯಿತ ಎಂದು ಬರೆಸಬೇಕು ಎಂದರು.ಮಾಜಿ ಶಾಸಕ ವಡ್ನಾಳ್ ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರಾವಣ ಮಾಸದಲ್ಲಿ ಅನಾದಿ ಕಾಲದಿಂದಲೂ ಹಿರಿಯರು ಶ್ರದ್ಧಾ-ಭಕ್ತಿಗಳಿಂದ ವಿಶೇಷ ಪೂಜೆ, ವ್ರತ, ಆಚರಣೆಗಳನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಈ ಮಧ್ಯೆ ಇಂದಿನ ಆಧುನಿಕ ಜಗತ್ತಿನಲ್ಲಿ ನಮ್ಮ ಸಂಪ್ರದಾಯ ಆಚಾರ ವಿಚಾರಗಳು ಮರೆಯಾಗುತ್ತಿರುವುದು ವಿಷಾದನೀಯ ಸಂಗತಿ. ಮುಂದಿನ ಪೀಳಿಗೆಗೆ ನಮ್ಮ ಆಚಾರ ವಿಚಾರಗಳನ್ನು ಕಲಿಸಬೇಕಾಗಿದೆ ಎಂದರು.
ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ, ಶ್ರಾವಣ ಮಾಸವನ್ನು ವಿಶ್ವಾದ್ಯಂತ ಆಚರಣೆ ಮಾಡುತ್ತಿದ್ದಾರೆ. ಅನುಷ್ಠಾನ ಮತ್ತು ಪುರಾಣ- ಪುಣ್ಯಕಥೆಗಳನ್ನು ಕೇಳುವ ಪವಿತ್ರವಾದ ಮಾಸ ಇದು. ಈ ಮಾಸದಲ್ಲಿ ಮಹತ್ಮರ ವಚನ, ಚಿಂತನೆಗಳನ್ನು ಕೇಳುವುದರಿಂದ ಜೀವನದಲ್ಲಿ ನೆಮ್ಮದಿ ಲಭಿಸುತ್ತದೆ ಎಂದರು.ಸಮಾರಂಭದಲ್ಲಿ ಪ್ರವಚನಕಾರ ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿಗಳ ಶಿಷ್ಯರಾದ ಮಹಾಂತೇಶ ಶಾಸ್ತ್ರಿ ಅವರು ಶ್ರೀ ಉಳವಿ ಬಸವೇಶ್ವರರ ಮಹಾಪುರಾಣದ ಪ್ರವಚನ ಆರಂಭಿಸಿದರು.
ಮುಖ್ಯ ಅತಿಥಿಗಳಾಗಿ ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಸಾಗರದ ಶಿವಲಿಂಗಪ್ಪ, ರಾಜಶೇಖರಯ್ಯ, ಬೂದಿಸ್ವಾಮಿ, ಮುರುಡಪ್ಪ, ಜ್ಯೋತಿಕೊಟ್ರೇಶ್ ಕೋರಿ, ಮಹಾಂತೇಶಶಾಸ್ತ್ರಿ, ಜವಳಿ ಮಹೇಶ್, ಕರಿಸಿದ್ದಪ್ಪ, ನಾಗೇಂದ್ರಯ್ಯ, ಸಂಗಯ್ಯ, ರೂಪಮುರುಡೇಶ್, ಕಮಲಾಹರೀಶ್, ಚಂದ್ರಯ್ಯ, ಎಚ್.ಬಿ.ರುದ್ರಯ್ಯ ಸೇರಿದಂತೆ ಭಕ್ತಾಧಿಗಳು ಹಾಜರಿದ್ದರು.- - -
-26ಕೆಸಿಎನ್‌ಜಿ1.ಜೆಪಿಜಿ:ಸಮಾರಂಭವನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು. ಹಿರೇಮಠದ ಶ್ರೀಗಳು, ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮತ್ತಿತರರು ಪಾಲ್ಗೊಂಡಿದ್ದರು.