ಸಾರಾಂಶ
- ಶ್ರೀ ಜಗದ್ಗುರು ರೇಣುಕಾಚಾರ್ಯ-ಶ್ರೀ ಬಸವೇಶ್ವರ ಜಯಂತಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದಯೆಯೇ ಧರ್ಮದ ಮೂಲ ಎಂದು ಸಾರಿದವರು ವೀರಶೈವ-ಲಿಂಗಾಯತರು. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಸಮಾಜ ನಮ್ಮದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.ನಗರದ ಶ್ರೀ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಶನಿವಾರ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ವಿಶ್ವಗುರು ಬಸವೇಶ್ವರರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಮಗಳಾಗಿ ಕಾರ್ಯಕ್ರಮಕ್ಕೆ ಬಂದಿರುವೆ. ಬೇರೆ ಸಮಾಜದವರ ಜೊತೆಗೆ ಹಂಚಿಕೊಂಡು ತಿನ್ನುವ, ಎಲ್ಲರನ್ನೂ ಒಟ್ಟಿಗೆ ಕರೆದು ಕೊಂಡು ಹೋಗುವ ಸಮಾಜ ನಮ್ಮದು. ಕರ್ನಾಟಕದ ಮೂಲೆ ಮೂಲೆಗಳಲ್ಲಿ ವೀರಶೈವ ಲಿಂಗಾಯತ ಸಮಾಜ ಬಾಂಧವರು ಇದ್ದಾರೆ. ಸಮಾಜದ ಸೇವೆಯನ್ನು ಮಗಳಾಗಿ ಮಾಡುವೆ. ಇಡೀ ಕರ್ನಾಟಕ ರಾಜ್ಯಾದ್ಯಂತ ಸಮಾಜಕ್ಕೆ ಸೇವೆ ಮಾಡುವೆ ಎಂದು ಹೇಳಿದರು. ಎಂದೆಂದಿಗೂ ಶಾಶ್ವತವಾಗಿ ಉಳಿಯುವಂತಹ ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು 12ನೇ ಶತಮಾನದಲ್ಲೆ ಸಾರಿದ ಮಹಾನ್ ವ್ಯಕ್ತಿ ಬಸವೇಶ್ವರರು, ಇವರ ತತ್ತ್ವ, ಆದರ್ಶಗಳು ನಮಗೆ ಮಾದರಿಯಾಗಲಿ ಎಂದು ಆಶಿಸಿದರು.
ವೀರಶೈವ-ಲಿಂಗಾಯಿತ ಸಮಾಜವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ಯಾಮನೂರು ಶಿವಶಂಕರಪ್ಪ, ಈಶ್ವ ರ್ ಖಂಡ್ರೆ ಮಾರ್ಗದರ್ಶನ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಪಕ್ಷಾತೀತವಾಗಿ ಸಮಾಜದ ಪರವಾಗಿ ಮನೆಮಗಳಂತೆ ಕೆಲಸ ಮಾಡಲು ಸಿದ್ಧವಾಗಿದ್ದೇನೆ ಎಂದರು.12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಮೊಟ್ಟ ಮೊದಲು ಮಹಿಳೆಯರನ್ನು ಮುಖ್ಯವಾಹಿನಿಗೆ ಕರೆ ತಂದರು. ಧಯವೇ ಧರ್ಮದ ಮೂಲವಯ್ಯ ಎಂಬ ಸಂದೇಶ ನೀಡಿರುವ ಬಸವೇಶ್ವರರ ಜೀವನದ ಸಾರಾಂಶ, ಸತ್ಯವನ್ನು ನಾಗರಿಕರು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಲಿಂಗಾಯತ ಭವನದ ನಿರ್ಮಾಣಕ್ಕಾಗಿ ಹತ್ತು ಲಕ್ಷ ರು. ವೈಯಕ್ತಿಕ ದೇಣಿಗೆ ನೀಡುವುದಾಗಿ ಸಚಿವರು ಇದೇ ಸಂದರ್ಭದಲ್ಲಿ ಘೋಷಿಸಿದರು. ಜೊತೆಗೆ ಸರ್ಕಾರದಿಂದ ಹೆಚ್ಚಿನ ದೇಣಿಗೆ ಕೊಡಿಸುವ ಭರವಸೆ ನೀಡಿದರು.ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ರಾಜ್ಯದಲ್ಲಿ ಬದುಕು ರೂಪಿಸಿಕೊಂಡಿರುವ ಸಮಾಜದ ಒಳ ಪಂಗಡಗಳ ನಿವಾಸಿ ಗಳು ಶೈಕ್ಷಣಿವಾಗಿ ಒಗ್ಗಟ್ಟಾಗಲು ಒಳ ಪಂಗಡ ಮರೆತು ವೀರಶೈವ-ಲಿಂಗಾಯಿತರೆಂದು ಒಂದಾಗಬೇಕು. ಜೊತೆಗೆ ಸಮುದಾಯದ ಬೆಳವಣಿಗೆಗೆ ಸಹಕರಿಸಬೇಕು ಎಂದು ತಿಳಿಸಿದರು.
ನೂತನ ಸಮುದಾಯ ಭವನಕ್ಕೆ ಪಕ್ಷಾತೀತವಾಗಿ ಎಲ್ಲರೂ ಆರ್ಥಿಕವಾಗಿ ಕೈಜೋಡಿಸಿದ್ದಾರೆ. ಇನ್ನೂ ಕೆಲವು ಕೆಲಸಗಳು ಬಾಕಿಯಿರುವ ಕಾರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಉಳಿದ ಕೆಲಸಕ್ಕೆ ಅನುದಾನ ಬಿಡುಗಡೆಗೊಳಿಸಿ ಭವನ ಲೋಕಾರ್ಪಣೆಗೊಳಿಸಲಾಗುವುದು ಎಂದರು. ಸಮಾಜದ ಪ್ರಧಾನ ಕಾರ್ಯದರ್ಶಿ ಮಾತನಾಡಿ ಎಂ.ಸಿ.ಶಿವಾನಂದಸ್ವಾಮಿ, ಸಮಾಜದ ಏಳಿಗೆಗೆ ಭವನ ನಿರ್ಮಿಸುವ ಉದ್ದೇಶದಿಂದ ಬಸವೇಗೌಡ ಕುಟುಂಬದ ಸಹಕಾರದಿಂದ ಪ್ರಾರಂಭಿಸಿದ ಸಮುದಾಯ ಭವನ 9 ಎಕರೆ ಪ್ರದೇಶದಲ್ಲಿ ಅಚ್ಚು ಕಟ್ಟಾಗಿ ನಿರ್ಮಾಣವಾಗುತ್ತಿದೆ. ಜೊತೆಗೆ ಶಾಸಕರು ಸಮಾಜದ ಬಗ್ಗೆ ಕಾಳಜಿ ವಹಿಸಿ ₹2 ಕೋಟಿ ಅನುದಾನ ಒದಗಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷ ಬಿ.ಎ.ಶಿವಶಂಕರ್ ವಹಿಸಿದ್ದರು. ನೈಸರ್ಗಿಕ ಕೃಷಿಕ ಚಂದ್ರಶೇಖರ ನಾರಣಾಪುರ ಶ್ರೀ ರೇಣುಕಾಚಾರ್ಯ ಮತ್ತು ಬಸವೇಶ್ವರರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್, ಕಾಫಿ ಬೆಳೆಗಾರ ಎ.ಬಿ.ಸುದರ್ಶನ್, ಸಮಾಜದ ಉಪಾಧ್ಯಕ್ಷ ಎಚ್.ಎನ್.ನಂಜೇಗೌಡ, ಎಚ್.ಎಂ.ರೇಣುಕಾರಾಧ್ಯ, ಎಂ.ಎಸ್. ನಿರಂಜನ್, ಕಾರ್ಯದರ್ಶಿಗಳಾದ ಸಿ.ಬಿ.ನಂದೀಶ್, ಡಿ.ಎಸ್.ಮಮತಾ, ಖಜಾಂಚಿ ಎಸ್.ದೇವರಾಜ್, ಮುಖಂಡರಾದ ಕೆ.ಸಿ. ನಿಶಾಂತ್, ದಿವಾಕರ್, ಬಸವರಾಜು, ಜಗದೀಶ್, ಜಿ.ಕೆ.ನಂಜೇಶ್ ಉಪಸ್ಥಿತರಿದ್ದರು. 24 ಕೆಸಿಕೆಎಂ 3ಚಿಕ್ಕಮಗಳೂರಿನ ಶ್ರೀ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಶನಿವಾರ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ವಿಶ್ವಗುರು ಬಸವೇಶ್ವರರ ಜಯಂತಿಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ ಇದ್ದರು.