ವೀರಶೈವ ಲಿಂಗಾಯತರು ಒಂದಾದರೆ ರಾಜಕೀಯ ಬಲ ಸಿಗಲು ಸಾಧ್ಯ

| Published : Dec 29 2024, 01:16 AM IST

ಸಾರಾಂಶ

ವೀರಶೈವರು ಒಂದಾಗಬೇಕು ಎಂಬುದು ಕೇವಲ ಮಾತಿನಲ್ಲಿ ಹೇಳಿದರೇ ಸಾಲದು. ಪ್ರತಿಯೊಂದು ಲಿಂಗಾಯತ ಒಳ ಪಂಗಡಗಳ ಜನರ ಮನಸ್ಸಿನಲ್ಲಿ ಮೂಡಬೇಕು ಮತ್ತು ಅದು ಕೃತಿಯಾಗಿ ಜಾರಿಯಾಗಬೇಕು ಅವಾಗ ಮಾತ್ರ ಲಿಂಗಾಯತ ಸಮೂದಾಯಕ್ಕೆ ರಾಜಕೀಯ ಬಲ ಸಿಗಲು ಸಾಧ್ಯ ಎಂದು ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಹಿರೇಕೆರೂರು: ವೀರಶೈವರು ಒಂದಾಗಬೇಕು ಎಂಬುದು ಕೇವಲ ಮಾತಿನಲ್ಲಿ ಹೇಳಿದರೇ ಸಾಲದು. ಪ್ರತಿಯೊಂದು ಲಿಂಗಾಯತ ಒಳ ಪಂಗಡಗಳ ಜನರ ಮನಸ್ಸಿನಲ್ಲಿ ಮೂಡಬೇಕು ಮತ್ತು ಅದು ಕೃತಿಯಾಗಿ ಜಾರಿಯಾಗಬೇಕು ಅವಾಗ ಮಾತ್ರ ಲಿಂಗಾಯತ ಸಮೂದಾಯಕ್ಕೆ ರಾಜಕೀಯ ಬಲ ಸಿಗಲು ಸಾಧ್ಯ ಎಂದು ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಗುರುಭವನದಲ್ಲಿ ಬುಧವಾರ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಹಿರೇಕೆರೂರ-ರಟ್ಟೀಹಳ್ಳಿ ತಾಲೂಕು ಘಟಕದ ಸೇವಾದೀಕ್ಷಾ ಹಾಗೂ ಸದಸ್ಯತ್ವ ಅಭಿಯಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಒಂದು ಸಮಾಜ ಲೌಖಿಕವಾಗಿ ಬೆಳೆಯಬೇಕೆಂದರೆ ರಾಜಕೀಯ ಶಕ್ತಿ ಬೇಕು. ಲಿಂಗಾಯತರಲ್ಲಿರುವ ಸಹನೆ ಶಕ್ತಿ ನಮ್ಮನ್ನು ಹಾಳುಮಾಡುತ್ತಿದೆ. ಎಲ್ಲ ಒಳ ಪಂಗಡಗಳು ಒಂದಾಗಿ ಹೋರಾಟ ಮಾಡಿದಾಗ ಮಾತ್ರ ಕೇಂದ್ರ ಸರಕಾರದ ಒಬಿಸಿ ಸ್ಥಾನಮಾನಗಳು ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಜನರು ಯೋಚನೆ ಮಾಡಬೇಕು ಎಂದು ಕರೆ ನೀಡಿದರು.

ಶಾಸಕ ಯು.ಬಿ. ಬಣಕಾರ ಮಾತನಾಡಿ, ವೀರಶೈವ ಲಿಂಗಾಯತ ಸಮೂದಾಯದ ಒಳ ಪಂಗಡಗಳ ನಡುವೆ ಸಾಮರಸ್ಯದ ಜೊತೆಗೆ ನಾವೆಲ್ಲ ಒಂದು ಎಂಬ ಭಾವನೆ ಮೂಡಬೇಕು. ಹಿರೇಕೆರೂರರಲ್ಲಿ ಇಂದು ವೀರಶೈವ ಸಮೂದಾಯದ ಜನರು ಸೇರಿ ಸದಸ್ಯತ್ವ ಅಭಿಯಾನ ಮಾಡುತ್ತಿರುವುದು ಹೋರಾಟಕ್ಕೆ ಅಡಿಗಲ್ಲು ಹಾಕಿದಂತೆ. ಭಕ್ತ ಒಂದು ಭಾಗವಾದರೇ ಗುರು ಒಂದು ಭಾಗ ಆದ್ದರಿಂದ ಸಮಾಜದ ಜನರ ಒಗ್ಗೂಡುವಿಕೆಯಲ್ಲಿ ಮಠಗಳ ಪಾತ್ರ ಪ್ರಮುಖವಾಗಿದೆ. ಸಮಾಜದ ಜನರು ಸದಸ್ಯತ್ವ ನೊಂದಣಿ ಪಡೆಯುವ ಮೂಲಕ ಸಮಾಜಕ್ಕೆ ಶಕ್ತಿ ತುಂಬಬೇಕು ಎಂದರು.

ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ವೀರಶೈವ ಲಿಂಗಾಯತ ಉಪ ಪಂಗಡಗಳು ಒಂದಾಗದಿದ್ರೆ ಈ ಸಮೂದಾಯ ಉದ್ದಾರ ಆಗುವುದಿಲ್ಲ. ನಾವೆಲ್ಲರೂ ಮೂಲ ಲಿಂಗಾಯತರು ಎನ್ನುವುದನ್ನು ಅರಿಯಬೇಕು. ಎಲ್ಲರನ್ನು ಸಮಾನತೆಯಿಂದ ಕಾಣುವ ಲಿಂಗಾಯತರು ಇಂದು ಹೊರಗೆ ಉಳಿದಿದ್ದು, ಬಸವಣ್ಣನವರ ತತ್ವವನ್ನು ಮುಂದಿಟ್ಟುಕೊಂಡು ನಮ್ಮನ್ನು ರಾಜಕೀಯವಾಗಿ ಸಾಮಾಜಿಕವಾಗಿ ಹೊರಗೆ ಇಟ್ಟಿದ್ದಾರೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಸಮಾಜದ ಜನರು ಅವಕಾಶ ವಂಚಿತರಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುವ ಮಾನ್ಯತೆ ವೀರಶೈವ ಲಿಂಗಾಯತ ಸಮೂದಾಯಕ್ಕೆ ಸಿಗಬೇಕು ಎಂದರು.

ತಿಪ್ಪಯಿಕೊಪ್ಪ ಶ್ರೀಮೂಖಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಇಂದು ಮಠಗಳು ಇವೆ ಎಂದು ಸಮಾಜದಲ್ಲಿ ಸಂಸ್ಕೃತಿ ಸಂಸ್ಕಾರ ಉಳಿದಿದೆ.ಸಮಾಜದ ಜನರು ತಮ್ಮ ತಮ್ಮ ಇಚ್ಛಾನುಸಾರ ಒಳಪಂಗಡಗಳನ್ನು ಮಾಡಿಕೊಂಡು ತಮ್ಮದೇ ಆಚಾರ ವಿಚಾರ ನಡೆಸುತ್ತಾ ನಡೆದಿದ್ದಾರೆ. ನಾವೆಲ್ಲ ಒಂದೇ ಭಾವನೆ ಹುಟ್ಟಿಸುವಲ್ಲಿ ಎಲ್ಲ ಸಮೂದಾಯದ ಮಠಗಳು ಮುಂದಾಗಬೇಕು. ವೀರಶೈವ ಲಿಂಗಾಯತ ಸಮೂದಾಯದ ಜನರಿಗೆ ನ್ಯಾಯ ಒದಗಿಸುವಲ್ಲಿ ಚಿಂತನೆಗಳು ನಡೆಯಬೇಕು ಎಂದರು.

ಸಮಾರಂಭದಲ್ಲಿ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಮ್.ಎಸ್. ಕೋರಿಶೆಟ್ರ, ತಾಲೂಕಾಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಲಿಂಗರಾಜ ಚಪ್ಪರದಹಳ್ಳಿ, ಗುರುಶಾಂತಪ್ಪ ಯತ್ತಿನಹಳ್ಳಿ, ಮಹೇಂದ್ರ ಬಡಳ್ಳಿ, ಜಿ.ಪಿ. ಪ್ರಕಾಶ, ಎಸ್.ಎಸ್‌. ಪಾಟೀಲ. ಎಸ್.ಬಿ. ತಿಪ್ಪಣ್ಣನವರ, ಪಾಲಾಕ್ಷಗೌಡ ಪಾಟೀಲ,ರಾಮಣ್ಣ ಕೆಂಚಳ್ಳೇರ, ಮಹೇಂದ್ರ ಬಣಕಾರ, ಲತಾ ಗೌಡ್ರ, ಸುಮಿತ್ರಾ ಪಾಟೀಲ, ಮಂಜುಳಾ ಬಾಳಿಕಾಯಿ, ಲತಾ ಬಣಕಾರ, ಮಾಲತೇಶ ಗಂಗೋಳ ಹಾಗೂ ಸಮಾಜ ಮುಖಂಡರು ಇದ್ದರು.