ವೀರಶೈವ ಲಿಂಗಾಯತರು ಹೋಮ ಹವನ ಮಾಡಬೇಡಿ

| Published : Nov 19 2024, 12:48 AM IST

ಸಾರಾಂಶ

ಶಿರಾ ಜಗತ್ತಿನ ಮಾರ್ಗದರ್ಶಕ ಸಂಸ್ಕೃತಿ ಹರಪ್ಪ ಸಂಸ್ಕೃತಿ, ಅದರ ಮೂಲ ಪುರುಷ ಹರ, ಎಲ್ಲಾ ಧರ್ಮಗಳಿಗೂ ಆಶ್ರಯ ನೀಡಿದ್ದು ಶ್ರೀಶೈಲ. ಆರ್ಯ ಮತ್ತು ದ್ರಾವಿಡ ಸಂಸ್ಕೃತಿ ಸೇರಿ ಹಿಂದೂ ಧರ್ಮವಾಯಿತು. ಆರ್ಯರು ಅಗ್ನಿ ಆರಾಧಕರು, ದ್ರಾವಿಡರು ಜಲ ಆರಾಧಕರು. ಆದ್ದರಿಂದ ದ್ರಾವಿಡ ಸಂಸ್ಕೃತಿಯವರು ಯಜ್ಞ ಯಾಗಾದಿಗಳನ್ನು ಮಾಡಬಾರದು ಎಂದು ನಿಡುಮಾಮಿಡಿ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿಗಳು ನುಡಿದರು.

ಕನ್ನಡಪ್ರಭ ವಾರ್ತೆ ಶಿರಾ ಜಗತ್ತಿನ ಮಾರ್ಗದರ್ಶಕ ಸಂಸ್ಕೃತಿ ಹರಪ್ಪ ಸಂಸ್ಕೃತಿ, ಅದರ ಮೂಲ ಪುರುಷ ಹರ, ಎಲ್ಲಾ ಧರ್ಮಗಳಿಗೂ ಆಶ್ರಯ ನೀಡಿದ್ದು ಶ್ರೀಶೈಲ. ಆರ್ಯ ಮತ್ತು ದ್ರಾವಿಡ ಸಂಸ್ಕೃತಿ ಸೇರಿ ಹಿಂದೂ ಧರ್ಮವಾಯಿತು. ಆರ್ಯರು ಅಗ್ನಿ ಆರಾಧಕರು, ದ್ರಾವಿಡರು ಜಲ ಆರಾಧಕರು. ಆದ್ದರಿಂದ ದ್ರಾವಿಡ ಸಂಸ್ಕೃತಿಯವರು ಯಜ್ಞ ಯಾಗಾದಿಗಳನ್ನು ಮಾಡಬಾರದು ಎಂದು ನಿಡುಮಾಮಿಡಿ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿಗಳು ನುಡಿದರು. ಅವರು ನಗರದ ಶ್ರೀ ಕಾಳಿಂಗಯ್ಯನ ಮಠದ 350 ನೇ ವಾರ್ಷಿಕೋತ್ಸವ ಮತ್ತು ನಿಡುಮಾಮಿಡಿ ಶಾಖಾ ಮಠದ ಪಟ್ಟಾಧಿಕಾರ ಮಹೋತ್ಸವದಲ್ಲಿ ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವವನ್ನು ಉದ್ಘಾಟಿಸಿ ಆರ್ಶೀವಚನ ನೀಡಿದರು. ಶಿವ ಸಂಸ್ಕೃತಿ ದ್ರಾವಿಡ ಸಂಸ್ಕೃತಿ. ದ್ರಾವಿಡ ಸಂಸ್ಕೃತಿಯ ಜಲ ತತ್ವ ಆರಾಧಕರಾದ ವೀರಶೈವ ಲಿಂಗಾಯತ ಧರ್ಮೀಯರಿಗೆ ಯಜ್ಞ ಯಾಗಾದಿ ಹೋಮ ಹವನಗಳ ಆಚರಣೆ ಮೂಲ ಪರಂಪರೆಗೆ ಹೊರತಾದುದು ಎಂದು ಪ್ರತಿಪಾದಿಸಿದರು. ಪಟ್ಟಾಧಿಕಾರ ಮಹೋತ್ಸವ

ಶಿರಾ ನಗರದ ಚಂಗಾವರ ರಸ್ತೆಯಲ್ಲಿರುವ ಶ್ರೀ ಕಾಳಿಂಗಯ್ಯನ ಮಠದ 350ನೇ ವಾರ್ಷಿಕೋತ್ಸವ ಮತ್ತು ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಶಿವಾಯುತ ಶ್ರೀ ಕಾಳಿಂಗೇಶ್ವರ ಸ್ವಾಮಿಗಳಿಗೆ ಶಿರಾ ಶಾಖಾ ಮಠಕ್ಕೆ ಪೀಠಾಧ್ಯಕ್ಷರನ್ನಾಗಿ ಪಟ್ಟಾಧಿಕಾರ ಮಾಡಲಾಯಿತು. ಬೆಂಗಳೂರಿನ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ ಸಂಕ್ರಮಣ ಕಾಲಘಟ್ಟದಲ್ಲಿ ಸುಧೀರ್ಘ ಇತಿಹಾಸವಿರುವ ಕಾಳಿಂಗಯ್ಯ ಮಠದ ಸಾರಥ್ಯ ವಹಿಸಿರುವ ನೂತನ ಶ್ರೀಗಳಿಗೆ ಶುಭ ಹಾರೈಸಿದರು.ನಿಡುಮಾಮಿಡಿ ಪೀಠದ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಶಿವಾಯತ ಕಾಳಿಂಗೇಶ್ವರ ಶ್ರೀಗಳಿಗೆ ಕಿರೀಟ ಧಾರಣೆ ಮಾಡಿ ಪಂಚ ಮುದ್ರಿಕೆಗಳನ್ನು ಇತ್ತು ಆಶೀರ್ವದಿಸಿ ಅಭಿನಂದಿಸಿದರು. ಗಂಗಾವತಿ ಕಲ್ಮಠದ ಡಾ. ಕೊಟ್ಟೂರು ಸ್ವಾಮೀಜಿ, ಹುಬ್ಬಳ್ಳಿಯ ನವನಗರದ ಡಾ.ರಾಜಶೇಖರ ಶಿವಾಚಾರ್ಯ, ಗುಳೇ ದಗುಡ್ಡದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಬಾಗಲಕೋಟೆಯ ಚಾಲುಕ್ಯ ಸಂಸ್ಕೃತಿಯ ಅಧ್ಯಯನ ಪೀಠದ ಅಧ್ಯಕ್ಷರಾದ ಜಿ.ಎನ್.ಪಾಟೀಲ ಮಾತನಾಡಿ ಹಂಡೆ ರಾಜವಂಶದ ಅರಸರಿಗೆ ಮಾರ್ಗದರ್ಶನ ನೀಡಿದ ನಿಡುಮಾಮಿಡಿ ಪೀಠದ ಚಾರಿತ್ರಿಕ ಮಹತ್ವದ ಕುರಿತು ವಿವರಿಸಿದರು.ಸಮಾರಂಭದಲ್ಲಿ ಆಂಧ್ರಪ್ರದೇಶದ ಸಾರಂಗ ಮಠದ ಡಾ. ಸಾರಂಗದರ ದೇಶಿಕೇಂದ್ರ ಸ್ವಾಮೀಜಿ, ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿಯಾದ ರೇಣುಕ ಪ್ರಸನ್ನ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ನಟರಾಜ್ ಸಾಗರನಹಳ್ಳಿ, ಜಿಲ್ಲಾಧ್ಯಕ್ಷರಾದ ಡಾ.ಪರಮೇಶ್, ತುಮಕೂರಿನ ಸಾಹಿತಿಗಳಾದ ಡಾ.ಬಿ. ನಂಜುಂಡಸ್ವಾಮಿ, ಶಿರಾದ ಮುಖಂಡರಾದ ತರೂರು ಬಸವರಾಜು, ಸಿ.ಎಸ್.ಪಲ್ಲವಿ, ಜಿ.ಆರ್.ನಟರಾಜು, ನಾಗರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು. 18ಶಿರಾ3:ಶಿರಾ ನಗರದ ಚಂಗಾವರ ರಸ್ತೆಯಲ್ಲಿರುವ ಶ್ರೀ ಕಾಳಿಂಗಯ್ಯನ ಮಠದ 350 ನೇ ವಾರ್ಷಿಕೋತ್ಸವ ಮತ್ತು ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.