ಸಮಾಜದಲ್ಲಿ ವೀರಶೈವ ಲಿಂಗಾಯತರು ಒಗ್ಗಟ್ಟಾಗಿರಿ

| Published : Mar 23 2025, 01:32 AM IST

ಸಾರಾಂಶ

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದವರು ಪರಸ್ಪರ ಪ್ರೀತಿ, ಸಹಕಾರ ಬೆಳಸಿಕೊಂಡು, ಸಮಾಜ ಸಂಘಟನೆಗೆ ಮುಂದಾಗಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ, ಪಂಚಮಸಾಲಿ ಜಗದ್ಗುರು ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದವರು ಪರಸ್ಪರ ಪ್ರೀತಿ, ಸಹಕಾರ ಬೆಳಸಿಕೊಂಡು, ಸಮಾಜ ಸಂಘಟನೆಗೆ ಮುಂದಾಗಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ, ಪಂಚಮಸಾಲಿ ಜಗದ್ಗುರು ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಕರೆ ನೀಡಿದರು.

ನಗರದ ಪಿ.ಜೆ. ಬಡಾವಣೆಯಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಕಚೇರಿಯಲ್ಲಿ ಶುಕ್ರವಾರ ದಾವಣಗೆರೆ ಗ್ರಾಮಾಂತರ ಘಟಕದಿಂದ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿನ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಹಿಂದೆ ವೀರಶೈವ ಲಿಂಗಾಯತ ಸಮಾಜದವರೇ ಜಮೀನ್ದಾರರಾಗಿದ್ದರು, ಈಗಲೂ ನಮ್ಮವರು ಅನುಕೂಲಸ್ಥರು ಎಂಬ ಭಾವನೆಯಿದೆ. ಉತ್ತರ ಕರ್ನಾಟಕದಲ್ಲಿ ಪಂಚಮಸಾಲಿ ಸಮಾಜದ ಜನತೆ ಈಗ ತೀರಾ ಬಡತನದಲ್ಲಿದ್ದಾರೆ. ಸರ್ಕಾರದ ಸೌಲಭ್ಯ ವಂಚಿತರಾಗಿದ್ದಾರೆ. ವಿದ್ಯಾವಂತರೂ ಮೀಸಲಾತಿ ವಂಚಿತರಾಗಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ರಾಜ್ಯ ಘಟಕದಿಂದ ಒಬಿಸಿ ಮೀಸಲಾತಿ ಕೋರಿ ಮನವಿ ಸಲ್ಲಿಸಿದ್ದೆವು. ಪಂಚಮಸಾಲಿ ಸಮಾಜ ಕರ್ನಾಟಕದ ಹಿಂದುಳಿದ ಜಾತಿ ಪಟ್ಟಿಯಲ್ಲಿ ಇರಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಿದ್ದಾಗ 3ಬಿಗೆ ಸೇರಿಸಿದರು. ಹಿಂದಿನ ಸರ್ಕಾರ ಮಾಡಿದ 2ಡಿ ಈಗ ನ್ಯಾಯಾಲಯದಲ್ಲಿದ್ದು, 3ಬಿ ಮೀಸಲಾತಿ ಅಸ್ತಿತ್ವದಲ್ಲಿದ್ದು, ಇದರ ಪ್ರಯೋಜನ ತಮ್ಮ ತಾಲೂಕಿನ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ 3ಬಿ ಮೀಸಲಾತಿ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಲಿಂಗಾಯತ ಸಮಾಜದ ಗಾಣಿಗ, ಬಣಜಿಗ, ಹಡಪದ, ಕುಂಬಾರ ಲಿಂಗಾಯತರು, ಲಿಂಗಾಯತನೆಂದು ಬರೆಸದೇ 2ಎ ಮೀಸಲಾತಿ ಪಡೆಯುತ್ತಿದ್ದಾರೆ. ಪಂಚಮಸಾಲಿ ಸಮಾಜ ಬಾಂಧವರು ಒಗ್ಗಟ್ಟಾಗಬೇಕು ಎಂದರು.

ಜಯಣ್ಣ ಬಿಸಿಲೇರಿ ಮಾತನಾಡಿ, ಅಕ್ಕಮಹಾದೇವಿ ಜೀವನ ಸಮುದ್ರದಂತೆ ಅಧ್ಯಯನವಿಲ್ಲದೇ ಅವರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಅಕ್ಕಮಹಾದೇವಿ ಕುರಿತು ಹಲವು ಪುಸ್ತಕ, ಸಂಶೋಧನೆ ನಡೆದಿವೆ. ಅವರ ಜೀವನ ಎಲ್ಲಾ ಮಹಿಳೆಯರಿಗೆ ಸ್ಪೂರ್ತಿಯಾಗಿದೆ. ಜಿಲ್ಲಾ ಘಟಕ, ಮಹಿಳಾ ಘಟಕಗಳ ಸಹಕಾರದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪಂಚಮಸಾಲಿ ವಧು ವರರ ಮಾಹಿತಿ ಕೇಂದ್ರದ ನಿರ್ದೇಶಕ ಮಂಜುನಾಥ ಪುರುವಂತರ, ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಾ ಪಾಟೀಲ್, ಬಾಡಾ ನಾಗರಾಜಪ್ಪ, ಕೈದಾಳ್ ರುದ್ರಸ್ವಾಮಿ, ಮಾಯಕೊಂಡ ರುದ್ರೇಶ್, ಅಣಜಿ ಸಂಗನಬಸಪ್ಪ, ಕಾಶೀಪುರ ಮಲ್ಲಿಕಾರ್ಜುನ, ಎಂ.ದೊಡ್ಡಪ್ಪ ವೀಣಾ ನಟರಾಜ ಬೆಳ್ಳೂಡಿ, ಮೀನಾ ಪ್ರಸಾದ್ ಅಣಪುರ್, ಉಮಾ ಸೋಮಶೇಖರ ಕಿಚಡಿ, ಬಣಕಾರ ನಾಗರಾಜ್ ಬಿಸಲೇರಿ, ಜಗದೀಶ, ಕಾಶಿಪುರ ವಿಶ್ವನಾಥ ಇತರರು ಇದ್ದರು.