ಸಾರಾಂಶ
- ಮಾಜಿ ಸಚಿವ, ವೀರಶೈವ ಮಹಾಸಭಾ ಉಪಾಧ್ಯಕ್ಷ ಅಮರೇಗೌಡ ಹೇಳಿಕೆ
- ಮಹಾಸಭಾದ ಯಾದಗಿರಿ ಜಿಲ್ಲಾ ಪದಾಧಿಕಾರಿಗಳ ಸಭೆ, ಸದಸ್ಯತ್ವ ಅಭಿಯಾನ- ಒಳಪಂಗಡ ಬೇಧ ಮರೆತು ಒಂದಾದಾಗ ಮಾತ್ರ ರಾಜಕೀಯ ಶಕ್ತಿ ಸಾಧ್ಯ : ಬಯ್ಯಾಪುರ
- ಜಾತಿಗಣತಿ ಅವೈಜ್ಞಾನಿಕ ಎಂಬ ನಮ್ಮ ಒಕ್ಕೂರಲ ಕೂಗಿಗೆ ಕೈಬಿಟ್ಟ ಸರ್ಕಾರ ------ಕನ್ನಡಪ್ರಭ ವಾರ್ತೆ ಯಾದಗಿರಿ
ವೀರಶೈವ ಲಿಂಗಾಯತರು ಒಳಪಂಗಡಗಳ ಭೇದ ಮರೆತು ಒಂದಾದಾಗ ಮಾತ್ರ ರಾಜಕೀಯ ಶಕ್ತಿ ಕಾಪಾಡಿಕೊಳ್ಳಲು ಸಾಧ್ಯ ಎಂದು ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಅಮರೇಗೌಡ ಬಯ್ಯಾಪೂರ ಹೇಳಿದರು.ಭಾನುವಾರ, ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಮಹಾಸಭಾದ ಜಿಲ್ಲಾ ಮತ್ತು ಪದಾಧಿಕಾರಿಗಳ ಸಭೆ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಒಂದು ಕಾಲದಲ್ಲಿ ಕರ್ನಾಟಕದ ವಿಧಾನಸಭೆಗೆ ನೂರಕ್ಕೂ ಹೆಚ್ಚು ಜನ ವೀರಶೈವ ಲಿಂಗಾಯತ ಸಮಾಜದ ಶಾಸಕರು ಆಯ್ಕೆಯಾಗಿ ಬರುತ್ತಿದ್ದರು. ಆದರೆ, ನಾವು ಒಳಪಂಗಡಗಳ ಹೆಸರಲ್ಲಿ ಛಿಧ್ರವಾಗಿರುವುದರಿಂದ ನಮ್ಮ ಸಂಖ್ಯೆ ಈಗ ಅರ್ಧಕ್ಕಿಳಿದಿದೆ ಎಂದು ಅವರು ಬೇಸರ ಹೊರಹಾಕಿದರು.
ರಾಜಕೀಯ ಪ್ರಾಬಲ್ಯ ಪಡೆದು, ಸಂವಿಧಾನಾತ್ಮಕವಾದ ಸೌಲಭ್ಯಗಳನ್ನು ಪಡೆಯಬೇಕಾದರೆ ಮತ್ತೆ ನಾವು ಒಂದಾಗಬೇಕು. ಹಾಗಾದಾಗ ಮಾತ್ರ ಆಳುವ ಪಕ್ಷಗಳು ನಮ್ಮ ದನಿಗೆ ಬೆಂಬಲ ನೀಡುತ್ತವೆ ಎಂದರು.ಜಾತಿಗಣತಿ ಅವೈಜ್ಞಾನಿಕ ಮತ್ತು ಅದನ್ನು ಜಾರಿಗೊಳಿಸಲೇಬಾರದು ಎಂದು ನಾವೆಲ್ಲರೂ ಒಕ್ಕೂರಲಿನಿಂದ ಒತ್ತಾಯಿಸಿದ್ದಕ್ಕಾಗಿಯೇ ಸರ್ಕಾರ ಅದನ್ನು ಕೈಬಿಟ್ಟಿದೆ ಎಂದರು.
ಮುಂಬರುವ ಜಾತಿಗಣತಿಯಲ್ಲಿ ನಾವು ಯಾವುದೇ ಒಳಪಂಗಡಗಳಿಗೆ ಸೇರಿದ್ದರೂ ಲಿಂಗಾಯತ ಅನ್ನುವುದನ್ನು ಜೊತೆಯಲ್ಲಿ ಸೇರಿಸಿಕೊಂಡಾಗ ಮಾತ್ರ ನಮ್ಮ ನೈಜ ಸಂಖ್ಯೆ ತಿಳಿಯಲು ಸಾಧ್ಯ. ಸಮಾಜದ ಪ್ರಮುಖರು ಎಲ್ಲರಿಗೂ ತಿಳಿವಳಿಕೆ ನೀಡುವ ಕೆಲಸ ಮಾಡಬೇಕು ಎಂದರು.ಮಹಾಸಭಾದ ರಾಜ್ಯ ಪ್ರ.ಕಾ ನಟರಾಜ ಸಾಗರನಹಳ್ಳಿ ಮಾತನಾಡಿ, ಜಿಲ್ಲೆಯಲ್ಲೂ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ನಿರ್ಮಾಣ ಹಾಗೂ ವೀರಶೈವ ಲಿಂಗಾಯತ ಭವನ ನಿರ್ಮಾಣ ಮಾಡಬೇಕು ಎಂಬುದು ರಾಜ್ಯ ಘಟಕದ ಯೋಜನೆಯಾಗಿದ್ದು, ಸ್ಥಳೀಯ ಶಾಸಕರು ಹಾಗೂ ಸಚಿವರು ನಮ್ಮ ಸಮಾಜಕ್ಕೆ ಸೂಕ್ತ ನಿವೇಶನ ಒದಗಿಸುವ ಕಾರ್ಯ ಮಾಡಬೇಕೆಂದು ಮನವಿ ಮಾಡಿದರು.
ಮುಂಬರುವ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜದ ಜನಗಣತಿಯನ್ನು ಮಹಾಸಭಾದಿಂದ ಮಾಡುವ ಯೋಚನೆಯಿದ್ದು, ಅದರ ಸಾಧ್ಯಾಸಾಧ್ಯತೆಗಳ ಬಗ್ಗೆ ವರದಿ ನೀಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದರು.ಮಹಾಸಭಾದ ಸದಸ್ಯತ್ವ ಅಭಿಯಾನಕ್ಕೆ ಅಮರೇಗೌಡ ಬಯ್ಯಾಪೂರ ಚಾಲನೆ ನೀಡಿ, ಸಿದ್ಧಲಿಂಗರೆಡ್ಡಿ ಹಳಿಮನಿ ಮಲ್ಹಾರ ಹಾಗೂ ಶಾಂತರೆಡ್ಡಿ ದೇಸಾಯಿ ನಾಯ್ಕಲ್ ಅವರಿಗೆ ಸಾಂಕೇತಿಕವಾಗಿ ಸದಸ್ಯತ್ವ ರಸೀದಿ ನೀಡಿ ಚಾಲನೆ ನೀಡಿದರು.
ವೇದಿಕೆಯ ಮೇಲೆ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಮುಖಂಡರಾದ ಮಹೇಶರೆಡ್ಡಿ ಮುದ್ನಾಳ, ಶರಣಪ್ಪಗೌಡ ಕರೆಡ್ಡಿ ಮಲ್ಹಾರ, ಅಯ್ಯಣ್ಣ ಹುಂಡೇಕಾರ, ನ್ಯಾ. ಎಸ್.ಬಿ.ಪಾಟೀಲ, ಅವಿನಾಶ್ ಜಗನ್ನಾಥ, ಯುವ ಘಟಕದ ಜಿಲ್ಲಾಧ್ಯಕ್ಷ ಸುರೇಶ ಜಾಕಾ ಇದ್ದರು. ಮಹಾಸಭಾದ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಅತಿಥಿಗಳನ್ನು ಸ್ವಾಗತಿಸಿದರು. ಮಹಾಸಭೆಯ ಜಿಲ್ಲಾ ಪದಾಧಿಕಾರಿಗಳು ಇದ್ದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧರಾಜರೆಡ್ಡಿ ವಂದಿಸಿದರು.
-29ವೈಡಿಆರ್1: ಯಾದಗಿರಿಯಲ್ಲಿ ಮಹಾಸಭಾದ ಜಿಲ್ಲಾ ಮತ್ತು ಪದಾಧಿಕಾರಿಗಳ ಸಭೆ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಮಾಜಿ ಸಚಿವ ಹಾಗೂ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಅಮರೇಗೌಡ ಬಯ್ಯಾಪೂರ ಮಾತನಾಡಿದರು.