ಸಾರಾಂಶ
ಕೊಡಗು ವಿಶ್ವವಿದ್ಯಾಲಯವನ್ನು ಬಂದ್ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಅಖಿಲ ಭಾರತ ವೀರ ಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ವಿಶ್ವ ವಿದ್ಯಾಲಯವನ್ನು ಬಂದ್ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಶಿವಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಗುಡ್ಡಗಾಡು ಪ್ರದೇಶ ಹಾಗೂ ಇಲ್ಲಿನ ಬಹುತೇಕ ಸಮುದಾಯ ಕೂಲಿಕಾರ್ಮಿಕರಾಗಿದ್ದಾರೆ. ಗ್ರಾಮೀಣ ಹಾಗೂ ಜನಸಾಮಾನ್ಯರ ಮಕ್ಕಳಿಗೆ ಕೊಡಗು ವಿವಿ ರಚನೆಯಿಂದ ಮನೆ ಬಾಗಿಲಲ್ಲಿ ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ ದೊರೆಯುತ್ತಿದೆ. ಕೊಡಗು ವಿವಿ ಬಂದ್ ಮಾಡಿದರೆ ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ಹಾಗೂ ಮೈಸೂರು ಅವಲಂಬಿಸಬೇಕಾಗುತ್ತದೆ.
ಜೊತೆಗೆ ಉನ್ನತ ಶಿಕ್ಷಣಕ್ಕೆ ಅವಕಾಶಗಳು ಕಡಿಮೆ ಇರುತ್ತವೆ. ಆದ್ದರಿಂದ ಇಲ್ಲಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೊಡಗು ವಿವಿಯನ್ನು ಅಳುವಾರದಲ್ಲಿ ಉಳಿಸಿ ಮುಂದುವರೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು. ಕೊಡಗು ವಿವಿ ಉಳಿವಿಗಾಗಿ ಹಿತರಕ್ಷಣಾ ಬಳಗದ ಹೋರಾಟಕ್ಕೆ ನಮ್ಮ ಸಂಘಟನೆ ವತಿಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು. ಕೊಡಗು ವಿವಿ ಮುಂದುವರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆಯುವುದಾಗಿ ಶಿವಪ್ಪ ಹೇಳಿದರು.ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಕಾರ್ಯದರ್ಶಿ ಶಂಭಶಿವಮೂರ್ತಿ, ಖಜಾಂಜಿ ಉದಯಕುಮಾರ್, ತಾಲೂಕು ಅಧ್ಯಕ್ಷ ಎಚ್.ಎಂ.ಮಧುಸೂದನ್, ನಿರ್ದೇಶಕ ಕೆ.ಡಿ.ಪ್ರಶಾಂತ್, ಅಮೃತ್ ಇದ್ದರು.