ಕಾಂಗ್ರೆಸ್ ಸರ್ಕಾರ ಮುಸ್ಲಿಂರನ್ನು ತುಷ್ಟೀಕರಣ ಮಾಡುತ್ತಿರುವ ಕಾರಣ ರಾಜ್ಯದಲ್ಲಿ ಕೊಲೆ, ಸುಲಿಗೆ, ಹಲ್ಲೆ ಪ್ರಕರಣಗಳು ಹೆಚ್ಚಾಗಿವೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಬೇಕಿದ್ದ ಸರ್ಕಾರ ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ.

ಕನ್ನಡಪ್ರಭ ವಾರ್ತೆ ನಂಜನಗೂಡು

ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಭೀಕರವಾಗಿ ಹತ್ಯೆಗೈದಿರುವ ಆರೋಪಿ ಫಯಾಜ್‌ ಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ತಾಲೂಕು ವೀರಶೈವ ಮಹಾಸಭಾದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಸಂಘಟನೆಯ ಕಾರ್ಯಕರ್ತರು ಫಯಾಜ್‌ ನನ್ನು ಗಲ್ಲಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿದರು.

ಎನ್.ಸಿ. ಬಸವಣ್ಣ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮುಸ್ಲಿಂರನ್ನು ತುಷ್ಟೀಕರಣ ಮಾಡುತ್ತಿರುವ ಕಾರಣ ರಾಜ್ಯದಲ್ಲಿ ಕೊಲೆ, ಸುಲಿಗೆ, ಹಲ್ಲೆ ಪ್ರಕರಣಗಳು ಹೆಚ್ಚಾಗಿವೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಬೇಕಿದ್ದ ಸರ್ಕಾರ ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ, ಆರೋಪಿ ಫಯಾಜ್‌ನನ್ನು ಬರೀ ಬಂಧಿಸಿದರಷ್ಟೆ ಸಾಲದು, ಕೃತ್ಯವೆಸಗುವ ಸಮಾಜ ಘಾತುಕರಿಗೆ ಪಾಠವಾಗುವಂತೆ ಉತ್ತರ ಪ್ರದೇಶ ಮಾದರಿಯಲ್ಲಿ ಅವರ ಮನೆ ನೆಲಸಮಗೊಳಿಸಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.

ವೀರಶೈವ ಮಹಾಸಭಾ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಆರೋಪಿ ಫಯಾಜ್‌ ನಿಗೆ ಗಲ್ಲುಶಿಕ್ಷೆ ವಿಧಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಮಾಜದ ವತಿಯಿಂದ ಉಗ್ರ ಪ್ರತಿಭಟನೆ ರೂಪಿಸಲಾಗುವುದು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಎಚ್.ಸಿ. ಅಶೋಕ್, ಬದನವಾಳು ಮಂಜುನಾಥ್, ಮಾಧು, ಬಿ.ಎಸ್. ಮಹದೇವಪ್ಪ, ಎಸ್.ಎಂ.ಕೆಂಪಣ್ಣ, ಮಂಗಳಾ ಸೋಮಶೇಖರ್, ಎಪಿಎಂಸಿ ಮಾಜಿ ಸದಸ್ಯ ಗುರುಸ್ವಾಮಿ, ಮಂಜುಳಾ ಮಧು, ಎಚ್.ಎಸ್. ಮಹದೇವಸ್ವಾಮಿ, ಉಮೇಶ್, ತ್ರಿಣೇಶ್, ಶೇಖರ್, ಕೆಂಡಗಣ್ಣಪ್ಪ, ಮಸಗೆರಾಜು, ರಾಜಶೇಖರ್ ಇದ್ದರು.