ರಾಜಕೀಯ ಕಾರಣಕ್ಕಾಗಿ ವೀರಶೈವ ವಿದ್ಯಾರ್ಥಿ ನಿಲಯ ಕಾಮಗಾರಿಗೆ ತಡೆ: ವಡ್ಡರಹಳ್ಳಿ ಧನಂಜಯ

| Published : Mar 12 2024, 02:00 AM IST

ರಾಜಕೀಯ ಕಾರಣಕ್ಕಾಗಿ ವೀರಶೈವ ವಿದ್ಯಾರ್ಥಿ ನಿಲಯ ಕಾಮಗಾರಿಗೆ ತಡೆ: ವಡ್ಡರಹಳ್ಳಿ ಧನಂಜಯ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 40 ವರ್ಷಗಳಿಂದ ವೀರಶೈವ ಮಹಾಸಭಾ ಬೆರಳೆಣಿಕೆ ಜನರ ಕೈಯಲ್ಲಿದ್ದು ಮಹಾಸಭಾದ ಕಚೇರಿಗೆ ಬೀಗ ಹಾಕಲಾಗಿತ್ತು. ನಾನು ಅಧ್ಯಕ್ಷನಾದ ನಂತರ ಕಚೇರಿ ಬೀಗ ತೆಗೆಸಿ ವೀರಶೈವ ಮಹಾಸಭಾದ ಕಾರ್ಯ ಚಟುವಟಿಕೆಗಳನ್ನು ಸಕ್ರಿಯಗೊಳಿಸಿದ್ದೇನೆ. ಪಟ್ಟಣದ ವೀರಶೈವ ನಿವೇಶನ ವಿಚಾರವಾಗಿ ನ್ಯಾಯಾಲಯದಲ್ಲಿ 9 ಪ್ರಕರಣಗಳಿದ್ದು ನನ್ನ ಸ್ವಂತ ಹಣದಿಂದ ಈಗಾಗಲೇ 6 ಪ್ರಕರಣಗಳು ಇತ್ಯರ್ಥವಾಗಿದೆ. ಮೂರು ಪ್ರಕರಣಗಳೂ ಮುಕ್ತಾಯದ ಹಂತಕ್ಕೆ ಬಂದಿವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಾಜಕೀಯ ಕಾರಣಕ್ಕಾಗಿ ವೀರಶೈವ ಸಮುದಾಯಕ್ಕೆ ಸೇರಿದ ಕೆಲವರು ಪಟ್ಟಣದಲ್ಲಿ ನಿರ್ಮಾಣಗೊಳ್ಳಬೇಕಿದ್ದ ವೀರಶೈವ ವಿದ್ಯಾರ್ಥಿ ನಿಲಯದ ಕಾಮಗಾರಿಗೆ ತಡೆಯೊಡ್ಡಿದ್ದು ಇದಕ್ಕೆ ಮುಂಬರುವ ವೀರಶೈವ ಮಹಾಸಭಾದ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷರು, ವಕೀಲ ವಡ್ಡರಹಳ್ಳಿ ಧನಂಜಯ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಕೆಲವರು ರಾಜಕೀಯ ಪಿತೂರಿ ನಡೆಸುತ್ತಿದ್ದಾರೆ. ತಾವು ಕೂಡ ರಾಜಕೀಯವಾಗಿಯೇ ಎದುರಿಸುವುದಾಗಿ ಸವಾಲು ಹಾಕಿದರು.

ಕಳೆದ 40 ವರ್ಷಗಳಿಂದ ವೀರಶೈವ ಮಹಾಸಭಾ ಬೆರಳೆಣಿಕೆ ಜನರ ಕೈಯಲ್ಲಿದ್ದು ಮಹಾಸಭಾದ ಕಚೇರಿಗೆ ಬೀಗ ಹಾಕಲಾಗಿತ್ತು. ನಾನು ಅಧ್ಯಕ್ಷನಾದ ನಂತರ ಕಚೇರಿ ಬೀಗ ತೆಗೆಸಿ ವೀರಶೈವ ಮಹಾಸಭಾದ ಕಾರ್ಯ ಚಟುವಟಿಕೆಗಳನ್ನು ಸಕ್ರಿಯಗೊಳಿಸಿದ್ದೇನೆ ಎಂದರು.

ಪಟ್ಟಣದ ವೀರಶೈವ ನಿವೇಶನ ವಿಚಾರವಾಗಿ ನ್ಯಾಯಾಲಯದಲ್ಲಿ 9 ಪ್ರಕರಣಗಳಿದ್ದು ನನ್ನ ಸ್ವಂತ ಹಣದಿಂದ ಈಗಾಗಲೇ 6 ಪ್ರಕರಣಗಳು ಇತ್ಯರ್ಥವಾಗಿದೆ. ಮೂರು ಪ್ರಕರಣಗಳೂ ಮುಕ್ತಾಯದ ಹಂತಕ್ಕೆ ಬಂದಿವೆ ಎಂದರು.

ನಾನು ಸಮುದಾಯದ ನಾಮಿನಿ ಅಧ್ಯಕ್ಷನಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನ್ನ ಸಮುದಾಯದ ಜನರಿಂದ ಚುನಾಯಿತನಾಗಿದ್ದೇನೆ. ಮುಂದೆ ಚುನಾವಣೆ ಬರಲಿದೆ. ನಾನು ಮತ್ತೆ ಜನರಿಂದಲೇ ಆಯ್ಕೆಯಾಗುತ್ತೇನೇಯೇ ಹೊರತು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಅವಿರೋಧವಾಗಿ ಆಯ್ಕೆಯಾಗುವುದಿಲ್ಲ ಎಂದು ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದರು.

ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ವೀರಶೈವ ವಿದ್ಯಾರ್ಥಿ ನಿಲಯಕ್ಕೆ 1 ಕೋಟಿ ಹಾಗೂ ಬಸವ ಭವನ ನಿರ್ಮಾಣಕ್ಕೆ 2 ಕೋಟಿಯಂತೆ ಒಟ್ಟು 3 ಕೋಟಿ ರು. ಅನುದಾನ ನೀಡಿದ್ದರು. ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಸಮುದಾಯದ ಹಿತಕ್ಕೆ ಸ್ಪಂದಿಸಲಿಲ್ಲ ಎಂದರು.

ಎಚ್.ಟಿ.ಮಂಜು ಶಾಸಕರಾದ ಕೇವಲ 3 ತಿಂಗಳ ಅವಧಿಯಲ್ಲಿಯೇ ನಮ್ಮ ಮನವಿಗೆ ಸ್ಪಂಧಿಸಿ ಪಟ್ಟಣದ ಹೊರವಲಯದ ಸರ್ವೆ ನಂ 302 ರಲ್ಲಿ ವೀರಶೈವ ವಿದ್ಯಾರ್ಥಿ ನಿಲಯಕ್ಕೆ3 ಗುಂಟೆ ಜಾಗ ಮೀಸಲಿರಿಸಿ ಅದರ ಪಹಣಿ ಮಾಡಿಸಿದ್ದಾರೆ. ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಬಿಸಿಎಂ ಇಲಾಖೆ 5 ಲಕ್ಷ ರು.ಗಳನ್ನು ನಿರ್ಮಿತಿ ಕೇಂದ್ರಕ್ಕೆ ವರ್ಗಾಹಿಸಿದೆ ಎಂದರು.

ಕ್ಷೇತ್ರದ ಶಾಸಕರಿಗೆ ಮತ್ತು ವೀರಶೈವ ಮಹಾಸಭಾದ ಅಧ್ಯಕ್ಷನಾಗಿರುವ ನನಗೆ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ನಮ್ಮದೇ ಸಮುದಾಯದ ಕೆಲವರು ವಿದ್ಯಾರ್ಥಿ ನಿಲಯದ ಕಾಮಗಾರಿಯ ಗುದ್ದಲಿ ಪೂಜೆಗೆ ತಡೆಮಾಡಿ ವಿದ್ಯಾರ್ಥಿಗಳ ಅನ್ನಕ್ಕೆ ಕಲ್ಲು ಹಾಕಿದ್ದಾರೆ ಎಂದು ದೂರಿದರು.

ಸಮುದಾಯದ ಹಿತ ಕಾಯಬೇಕಾದ ತಾಲೂಕಿನ ಗವೀಮಠದ ಚನ್ನವೀರ ಶ್ರೀಗಳು ವೀರಶೈವ ಸಮುದಾಯದ ಒಂದು ಗುಂಪಿನ ಪರ ಕೆಲಸ ಮಾಡುತ್ತಿದ್ದಾರೆ. ಇದು ಅವರಿಗೆ ಗೌರವ ತರುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಕಾರ್ಯದರ್ಶಿ ಈರಪ್ಪ, ನಿರ್ದೇಶಕರಾದ ಮಾದೇಶ್, ಡಿ.ಸಿ.ಕುಮಾರ್, ಶಿವಮೂರ್ತಿ, ವಡ್ಡರಹಳ್ಳಿ ಶಿವಕುಮಾರ್, ಶಿಕ್ಷಕರಾದ ಶಿವಪ್ಪ, ಮಲ್ಲೇಶ್, ಶಿವಕುಮಾರ್, ಮುಖಂಡರಾದ ಬಸವಲಿಂಗಪ್ಪ, ಶಿವಕುಮಾರ್, ಚಂದ್ರಶೇಖರ್, ಭೀಮೇಶ್ ಕುಮಾರ್, ನಂದೀಶ್‌ಕುಮಾರ್, ಟಿ.ಎನ್.ಚಂದ್ರಪ್ಪ ಸೇರಿದಂತೆ ನೂರಾರು ಜನರು ಇದ್ದರು.