ಸಾರಾಂಶ
ಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಸಿದ್ಧಾರೂಢರ ಜಾತ್ರೆ ಎಂದರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಹಬ್ಬದಂತೆ. ಭಕ್ತರ ದಂಡು ಒಂದಿಲ್ಲೊಂದು ಸೇವಾ ಕಾರ್ಯದಲ್ಲಿ ನಿರತರಾಗಿರುತ್ತದೆ. ಹಳೆ ಹುಬ್ಬಳ್ಳಿಯ ವೀರಯ್ಯ ಸಾಲಿಮಠ ಹಾಗೂ ಸ್ನೇಹಿತರ ತಂಡ ಪಾದಯಾತ್ರೆಯ ಮೂಲಕ ಬರುವ ಭಕ್ತರಿಗೆ ಉಪಹಾರದೊಂದಿಗೆ ಔಷಧಿ ವಿತರಣೆ, ಕಾಲುಗಳ ಮಸಾಜ್ ಕಾರ್ಯದಲ್ಲಿ ನಿರತವಾಗಿದೆ.
ಸಿದ್ಧಾರೂಢರ ಜಾತ್ರೆ ವೇಳೆ ಸಾವಿರಾರು ಭಕ್ತರು ಅನ್ನಪ್ರಸಾದ, ಪಲಾವ್, ರೊಟ್ಟಿ ಊಟ, ಲಾಡು ವಿತರಣೆ, ಮಜ್ಜಿಗೆ, ಬಾದಾಮಿ ಹಾಲು, ಕಲ್ಲಂಗಡಿ, ಎಳೆನೀರು, ದ್ರಾಕ್ಷಿ, ಬಾಳೆಹಣ್ಣುಗಳನ್ನು ಉಚಿತವಾಗಿ ವಿತರಿಸುತ್ತಾರೆ. ಆದರೆ, ವೀರಯ್ಯ ಅವರು ವಿಭಿನ್ನ ರೀತಿಯ ಸೇವೆಯಲ್ಲಿ ನಿರತರಾಗಿದ್ದಾರೆ. ಸಾವಿರಾರು ಜನರಿಗೆ ಔಷಧಿ ವಿತರಣೆ ಜೊತೆ ಬಳಲಿ ಬಂದ ಭಕ್ತರಿಗೆ ಮಸಾಜ್ ಮಾಡುತ್ತಿದ್ದಾರೆ.ಪಾದಯಾತ್ರಿಗಳ ಸೇವೆ
ಇವರು ಹಳೆ ಹುಬ್ಬಳ್ಳಿಯ ನಿವಾಸಿಗಳಾಗಿದ್ದು, ತ್ರಯಂಬಕೇಶ್ವರ ಹೆಸರಿನಲ್ಲಿ ಫಾರ್ಮಾ ಡಿಸ್ಟ್ರಿಬ್ಯೂಟರ್ ಆಗಿದ್ದಾರೆ. ಜಾತ್ರೆಯ ಪೂರ್ವ ಅಂದರೆ, ಶಿವರಾತ್ರಿಯಂದು ಶ್ರೀ ಸಿದ್ಧಾರೂಢರ ಮಠಕ್ಕೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ವಿಜಯನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಬರುತ್ತಾರೆ. ಪಾದಯಾತ್ರೆ ಕೈಗೊಂಡು ಬಸವಳಿದು ಬರುವ ಭಕ್ತರಿಗೆ ಕಳೆದ 10 ವರ್ಷಗಳಿಂದ ಔಷಧಿ ಹಾಗೂ ಕಾಲುಗಳಿಗೆ ಮಸಾಜ್ ಮಾಡಿ ವಿಶ್ರಾಂತಿಗೆ ಅವಕಾಶ ಮಾಡಿಕೊಡುತ್ತಿದೆ. ಇಲ್ಲಿ ಮೈ, ಕೈ ನೋವು, ಶೀತ, ಜ್ವರ, ವಾಂತಿ, ಬೇಧಿಗೆ ಉಚಿತವಾಗಿ ಔಷಧಿ ವಿತರಿಸಲಾಗುತ್ತದೆ.48 ಗಂಟೆಗಳ ಸೇವೆ
ಜಾತ್ರೆಯ ಪೂರ್ವದಿನವಾದ ಶಿವರಾತ್ರಿಯಂದು ಬೆಳಗ್ಗೆ 8ಗಂಟೆಗೆ ಆರಂಭವಾಗುವ ಇವರ ಸೇವಾ ಕಾರ್ಯ 48 ಗಂಟೆಗಳ ಕಾಲ ನಿರಂತರವಾಗಿರುತ್ತದೆ. ಶುಕ್ರವಾರ ಬೆಳಗ್ಗೆ 8ಗಂಟೆಗೆ ಆರಂಭವಾಗಿದ್ದು, ಭಾನುವಾರ ಬೆಳಗ್ಗೆ 8ಗಂಟೆಯ ವರೆಗೆ ನಡೆಯಲಿದೆ. ಈಗಾಗಲೇ 4 ಸಾವಿರಕ್ಕೂ ಅಧಿಕ ಜನರಿಗೆ ಔಷಧಿ ವಿತರಣೆ ಮಾಡಲಾಗಿದೆ. 1200ಕ್ಕೂ ಅಧಿಕ ಜನರಿಗೆ ಮಸಾಜ್ ಮಾಡಿದೆ.ಎಲ್ಲಾ ಅಜ್ಜನ ಸೇವೆಗಾಗಿ ಇದೆಲ್ಲ ಅಜ್ಜನ ಸೇವೆಗಾಗಿ ನಾನು ಮತ್ತು ನನ್ನ ಹತ್ತಾರು ಸ್ನೇಹಿತರು ಮಾಡುತ್ತಿರುವ ಸೇವೆ. ಸ್ನೇಹಿತರಾದ ಚನ್ನಬಸಯ್ಯ ಹಿರೇಮಠ, ಪ್ರಕಾಶ ಕುಲಕರ್ಣಿ, ಮುತ್ತು ಕುರಡಿಕೇರಿ, ಪ್ರಕಾಶ ಗದಿಗೆಪ್ಪನವರ, ಕುಮಾರ ರಾಯನಾಳ, ತಿಪ್ಪಣ್ಣ, ಮಹೇಶ ಸಾರವಾಡ, ಗಣೇಶ ಪೋಪ್ತಿ, ಕಲ್ಲಯ್ಯ ಕುರಡಿಕೇರಿ, ಸಚಿನ ಗೋಕಾವಿ ಸೇರಿದಂತೆ ಹಲವರು 48 ಗಂಟೆಗಳ ಕಾಲ ನಿರಂತರವಾಗಿ ಅಜ್ಜನ ಜಾತ್ರೆಗೆ ಪಾದಯಾತ್ರೆಯ ಮೂಲಕ ಬರುವ ಭಕ್ತರಿಗೆ ಉಪಹಾರ, ತಂಪು ಪಾನೀಯದೊಂದಿಗೆ ಔಷಧಿ, ಮಸಾಜ್ ಮಾಡುವ ಕಾರ್ಯ ಮಾಡಲಾಗುತ್ತಿದೆ. ನಮ್ಮ ಕಾರ್ಯಕ್ಕೆ ಭಕ್ತರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ ಎಂದು ವೀರಯ್ಯ ಸಾಲಿಮಠ ಹರ್ಷದಿಂದ ನುಡಿಯುತ್ತಾರೆ.
ವಿಶೇಷ ಸೇವಾಕಾರ್ಯನಾನು ಕಳೆದ 8 ವರ್ಷಗಳಿಂದ ಪಾದಯಾತ್ರೆ ಮಾಡುತ್ತಿದ್ದೇನೆ. 5 ವರ್ಷಗಳ ಹಿಂದೆ ವೀರಯ್ಯ ಹಾಗೂ ಸ್ನೇಹಿತರು ಕೈಗೊಳ್ಳುತ್ತಿರುವ ವಿಶೇಷ ಸೇವಾ ಕಾರ್ಯ ನೋಡುತ್ತಿದ್ದೇನೆ. ನನ್ನೊಂದಿಗೆ ಪಾದಯಾತ್ರೆ ಮೂಲಕ ಬರುವ ಹಲವು ಜನರನ್ನು ಇಲ್ಲಿ ಕರೆದುಕೊಂಡು ಬಂದು ಉಪಹಾರ ಸೇವಿಸಿ, ಮಸಾಜ್ ಮಾಡಿಸಿಕೊಂಡು ಹೋಗುತ್ತಿದ್ದೇನೆ.
- ಆನಂದ ನಾಗನೂರ, ಚಿಕ್ಕೋಡಿಯಿಂದ ಆಗಮಿಸಿದ ಭಕ್ತಸರ್ವಧರ್ಮದವರು ಭಾಗಿಸಿದ್ಧಾರೂಢ ಅಜ್ಜನವರ ಜಾತ್ರೆ ಅಂದರೆನೇ ಹಾಗೆ. ಹುಬ್ಬಳ್ಳಿಯ ಜನತೆ ಅಜ್ಜನ ಮೇಲಿಟ್ಟಿರುವ ಪ್ರೀತಿ ನೋಡಿ ಸಂತಸವಾಗುತ್ತದೆ. ನಾನೂ ಸಿದ್ಧಾರೂಢರ ಪರಮ ಭಕ್ತ. ಕಳೆದ 15 ವರ್ಷಗಳಿಂದ ಪಾದಯಾತ್ರೆ ನಡೆಸುತ್ತಿದ್ದೇನೆ. ಯಾವುದೇ ಜಾತಿ, ಮತ, ಪಂಥವೆನ್ನದೇ ಎಲ್ಲ ಧರ್ಮದವರು ಭಾಗಿಯಾಗಿ ಆಚರಿಸುವ ಜಾತ್ರೆಯೇ ಸಿದ್ಧಾರೂಢರ ಜಾತ್ರೆ.- ಮಹ್ಮದರಫೀಕ ನದಾಫ, ಬಾದಾಮಿಯಿಂದ ಪಾದಯಾತ್ರೆ ಮೂಲಕ ಆಗಮಿಸಿರುವ ಸಿದ್ಧಾರೂಢರ ಭಕ್ತ