ತರಕಾರಿ ಮಾರುವ ಮಗಳ ಮುಡಿಗೇರಿದ ನಾಲ್ಕು ಚಿನ್ನದ ಪದಕಗಳು!

| Published : Sep 05 2025, 01:00 AM IST

ಸಾರಾಂಶ

ಸತತ ಓದು, ಪ್ರಾಧ್ಯಾಪಕರ ಮಾರ್ಗದರ್ಶನ ನನಗೆ ಹೆಚ್ಚು ಸಹಕಾರಿಯಾಯಿತು

ಬಳ್ಳಾರಿ: ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾಗಿ ಸೇವೆ ಮಾಡಬೇಕು ಎಂಬ ಕನಸಿದೆ. ಬಡತನ ನಡುವೆಯೂ ನನ್ನ ಓದಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡ ನನ್ನ ತಾಯಿ ನಾಗಮ್ಮಳೇ ವಿವಿಯ ನಾಲ್ಕು ಚಿನ್ನದ ಪದಕ ಪಡೆಯಲು ದೊಡ್ಡ ಪ್ರೇರಣೆ.

ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ 13ನೇ ಘಟಿಕೋತ್ಸವದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದು ಗಮನ ಸೆಳೆದ ವಿವಿಯ ವಾಣಿಜ್ಯಶಾಸ್ತ್ರ ವಿಭಾಗದ (ಎಂಕಾಂ) ವಿದ್ಯಾರ್ಥಿನಿ ಎನ್.ಹಂಸಾ ಅವರು ಮಾತುಗಳಿವು.

ನನ್ನಮ್ಮ ತರಕಾರಿ ಮಾರಿ ನಮ್ಮನ್ನು ಓದಿಸಿದ್ದಾಳೆ. ಅವರ ಆಶಯದಂತೆಯೇ ಮೊದಲಿನಿಂದಲೂ ಓದಿನಲ್ಲಿ ಮುಂದಿದ್ದೆ. ಪಿಯುಸಿಯಲ್ಲಿ ನಮ್ಮೂರಿಗೆ (ತೆಕ್ಕಲಕೋಟೆ) ನಾನೇ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯಾಗಿದ್ದೆ. ಪಿಜಿಯಲ್ಲಿ ಚಿನ್ನದ ಪದಕ ಪಡೆಯಲೇಬೇಕು ಎಂದು ನಿರ್ಧರಿಸಿದ್ದೆ. ಸತತ ಓದು, ಪ್ರಾಧ್ಯಾಪಕರ ಮಾರ್ಗದರ್ಶನ ನನಗೆ ಹೆಚ್ಚು ಸಹಕಾರಿಯಾಯಿತು ಎಂದು ಹಂಸಾ ತಿಳಿಸಿದರು.

ಎನ್. ಹಂಸಾ ಮೂಲತಃ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯವರು. ತಾಯಿ ನಾಗಮ್ಮ ಅವರೊಂದಿಗೆ ವಾಸವಾಗಿದ್ದಾರೆ. ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ನಾಗಮ್ಮಗೆ ಒಟ್ಟು ಮೂವರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ಈ ಪೈಕಿ ಓರ್ವ ಪುತ್ರ ಸಿವಿಲ್ ಕಾನ್ಸ್‌ಟೇಬಲ್ ಆಗಿ ಆಯ್ಕೆಯಾಗಿದ್ದು ತರಬೇತಿ ಪಡೆಯುತ್ತಿದ್ದಾರೆ. ವಿದ್ಯಾರ್ಥಿ ಎನ್. ಹಂಸಾ ಅವರು ತೆಕ್ಕಲಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸ, ಸಿರುಗುಪ್ಪದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ನನ್ನ ತಾಯಿಗೆ ನಾನು ಸರ್ಕಾರಿ ನೌಕರಿ ಸೇರಬೇಕು ಎಂಬ ಮಹಾದಾಸೆಯಿದೆ. ಅವರ ಆಸೆಯನ್ನು ಪೂರೈಸುವುದು ಮಗಳಾಗಿ ನನ್ನ ಕರ್ತವ್ಯವೂ ಹೌದು. ಮೊದಲಿನಿಂದಲೂ ನನಗೆ ಶಿಕ್ಷಕ ಕೆಲಸ ಎಂದರೆ ಇಷ್ಟ. ಹೀಗಾಗಿ ವಿವಿಯ ಪ್ರಾಧ್ಯಾಪಕಿಯಾಗಬೇಕು ಎಂಬ ಗುರಿ ಇಟ್ಟುಕೊಂಡಿರುವೆ. ಸತತ ಅಧ್ಯಯನದ ಮೂಲಕ ನನ್ನ ಗುರಿ ಮುಟ್ಟೇಮುಟ್ಟುವೆ ಎಂದು ಹಂಸಾ ವಿಶ್ವಾಸ ವ್ಯಕ್ತಪಡಿಸಿದರು.

ತಾಯಿ ನಾಗಮ್ಮ ಅವರು ಮಗಳ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರಲ್ಲದೆ ಮಕ್ಕಳ ಓದಿಗೆ ನಾನೆಂದೂ ಕೊರತೆ ಮಾಡಲಿಲ್ಲ ಎನ್ನುತ್ತಲೇ ಕಣ್ಣಾಲಿಗೆ ತುಂಬಿಕೊಂಡರು.

ಅಕ್ಕಸಾಲಿಗನ ಮಗಳಿಗೆ ಮೂರು ಚಿನ್ನದ ಪದಕಗಳು

ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ (ಎಂಎಸ್ಸಿ) ರಾಜೇಶ್ವರಿ ಮೂರು ಚಿನ್ನದ ಪದಕಗಳನ್ನು ಪಡೆದು ಗಮನ ಸೆಳೆದಿದ್ದಾರೆ.

ಇಲ್ಲಿನ ದೇವಿನಗರದ ನಿವಾಸಿಯಾಗಿರುವ ಅಕ್ಕಸಾಲಿಗ ವೃತ್ತಿ ಮಾಡುತ್ತಿರುವ ಗಿರೀಶ್‌ ಹಾಗೂ ಹನುಮಂತಮ್ಮ ದಂಪತಿಯ ಪುತ್ರಿ ರಾಜೇಶ್ವರಿ, ಪಿಎಚ್‌ಡಿ ಪದವಿ ಬಳಿಕ ವಿವಿಯ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುವ ಆಸೆ ಹೊತ್ತಿದ್ದಾರೆ.

ಮೂರು ಚಿನ್ನದ ಪದಕ ಪಡೆಯಲು ಪೋಷಕರ ಪ್ರೋತ್ಸಾಹ ಪ್ರಾಧ್ಯಾಪಕರ ಮಾರ್ಗದರ್ಶನ ಹಾಗೂ ವಿವಿಯ ಗ್ರಂಥಾಲಯವೇ ಕಾರಣ. ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಕಳೆದಿದ್ದೇನೆ ಎಂದರು. ಗೋಲ್ಡ್ ಮೆಡಲ್ ತೆಗೆದುಕೊಳ್ಳುವುದು ನನ್ನ ಕನಸಾಗಿತ್ತು. ಹೀಗಾಗಿಯೇ ಸತತ ಅಧ್ಯಯನ ಮಾಡಿದೆ. ಫಲ ಸಿಕ್ಕಿತು ಎಂದು ಸಂತಸಗೊಂಡರು.