ಒಂದೇ ಸೂರಿನಲ್ಲಿ ತರಕಾರಿ, ದಿನಸಿ, ತಿನಿಸು ಲಭ್ಯ!

| Published : Jan 20 2024, 02:03 AM IST

ಒಂದೇ ಸೂರಿನಲ್ಲಿ ತರಕಾರಿ, ದಿನಸಿ, ತಿನಿಸು ಲಭ್ಯ!
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿಯ ಗಾಮನಗಟ್ಟಿ, ಅಮರಗೋಳ, ಭೈರಿದೇವರಕೊಪ್ಪ, ಸುತಗಟ್ಟಿ, ನವನಗರದ ಜನರಿಗೆ ಕಾಯಿಪಲ್ಲೆ ಮತ್ತು ದಿನಸಿ ಖರೀದಿಸಲು ಮಾರುಕಟ್ಟೆ ಅವಶ್ಯಕತೆ ಇತ್ತು. ಇದನ್ನು ಅರಿತ ಪಾಲಿಕೆ ಅಧಿಕಾರಿಗಳು ಒಂದು ಎಕರೆ ಜಾಗದಲ್ಲಿ ಪಾಲಿಕೆ ಅನುದಾನ ಸೇರಿ ರು. 1.50 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಿಸಿದ್ದಾರೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ: ಒಂದೇ ಸೂರಿನಲ್ಲಿ ತರಕಾರಿ, ದಿನಸಿ, ತಿನಿಸು ಲಭ್ಯ!

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ-4ರ ಚಮತ್ಕಾರವಿದು. ಮನೆಗೆ ಅಗತ್ಯವಾಗುವ ದಿನಸಿ, ಕಾಯಿಪಲ್ಲೆ, ಪೂಜಾ ಸಾಮಗ್ರಿ, ಹೂವು, ಮಾಂಸಹಾರಿಗಳಿಗೆ ಚಿಕನ್‌, ಮಟನ್, ತಿಂಡಿ ಪ್ರಿಯರಿಗೆ ಬಗೆಬಗೆಯ ತಿನಿಸುಗಳು ಇಲ್ಲಿ ಲಭ್ಯ ಇವೆ. ಇಂಥ ವಿಭಿನ್ನ, ವೈವಿಧ್ಯಮಯ ಮೊದಲ ಮಾರುಕಟ್ಟೆ ಇದು. ಜ. 20ರಂದು ಈ ಮಾರುಕಟ್ಟೆ ಲೋಕಾರ್ಪಣೆಗೊಳ್ಳಲಿದೆ.

ಪಾಲಿಕೆ ವಲಯ ಕಚೇರಿಗಳಲ್ಲಿಯೇ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ನವನಗರ 4ನೇ ವಲಯ ಕಚೇರಿ ಸ್ವಚ್ಛ, ಸುಂದರ ಹಾಗೂ ಸಕಲ ಮೂಲ ಸೌಕರ್ಯವುಳ್ಳ ಮಾರುಕಟ್ಟೆ ಅಭಿವೃದ್ಧಿಪಡಿಸಿದೆ. ಸ್ಮಾರ್ಟ್‌ಸಿಟಿ ಖ್ಯಾತಿಯ ಹುಬ್ಬಳ್ಳಿ-ಧಾರವಾಡಕ್ಕೆ ಇದು ಮತ್ತೊಂದು ಹಿರಿಮೆ ಎನಿಸಿದೆ.

ಇಲ್ಲಿಯ ಗಾಮನಗಟ್ಟಿ, ಅಮರಗೋಳ, ಭೈರಿದೇವರಕೊಪ್ಪ, ಸುತಗಟ್ಟಿ, ನವನಗರದ ಜನರಿಗೆ ಕಾಯಿಪಲ್ಲೆ ಮತ್ತು ದಿನಸಿ ಖರೀದಿಸಲು ಮಾರುಕಟ್ಟೆ ಅವಶ್ಯಕತೆ ಇತ್ತು. ಕಾಯಿಪಲ್ಲೆ ಬೆಳೆಗಾರರು ಸಹ ಇಲ್ಲಿಗೆ ತಂದು ಮಾರುತ್ತಾರೆ. ಇದನ್ನು ಅರಿತ ಪಾಲಿಕೆ ಅಧಿಕಾರಿಗಳು ಒಂದು ಎಕರೆ ಜಾಗದಲ್ಲಿ ಪಾಲಿಕೆ ಅನುದಾನ ಸೇರಿ ರು. 1.50 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಿಸಿದ್ದಾರೆ.

ವಾರ್ಡ್‌ ನಂ. ೨೭ರ ಪಾಲಿಕೆ ಸದಸ್ಯೆ ಸುನೀತಾ ಸಂಜೀವ ಮಾಳವದಕರ ಹಾಗೂ ವಲಯ ಕಚೇರಿ ಸಹಾಯಕ ಆಯುಕ್ತ ರಮೇಶ್ ನೂಲ್ವಿ ಮಾರುಕಟ್ಟೆ ಅಭಿವೃದ್ಧಿಗೊಳಿಸುವ ಕುರಿತು ಶಾಸಕ ಅರವಿಂದ ಬೆಲ್ಲದ ಅವರ ಜತೆ ಚರ್ಚಿಸಿದಾಗ ಅಗತ್ಯ ಅನುದಾನ ನೀಡುವುದಾಗಿ ಭರವಸೆ ನಿಡಿದರು.

ಪಾಲಿಕೆ ಅನುದಾನ ಹಾಗೂ ಶಾಸಕರ ಅನುದಾನ ಸೇರಿ ರು. 1.50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ವ್ಯಾಪಾರಿ ವಲಯ ಅಭಿವೃದ್ಧಿಗೊಂಡಿದೆ. ಇಲ್ಲಿ ಇನ್ನೂರಕ್ಕೂ ಹೆಚ್ಚು ವರ್ತಕರಿಗೆ ವ್ಯಾಪಾರಕ್ಕೆ ಅವಕಾಶವಿದೆ.

ಏನೇನು ಇರಲಿದೆ

ಮಾರುಕಟ್ಟೆಯಲ್ಲಿ ಪೂರ್ಣಾವಧಿ ವ್ಯಾಪಾರಕ್ಕೆ 30 ಕಟ್ಟೆಗಳನ್ನು ನಿರ್ಮಿಸಲಾಗಿದ್ದು, ಹಣ್ಣು, ತರಕಾರಿ, ಸ್ಟೇಶನರಿ ಸಾಮಾನುಗಳು, ಕಿರಾಣಿ ದಿನಸಿಗಳು ಲಭ್ಯವಾಗಲಿವೆ.

ಗ್ರಾಹಕರಿಗೆ ಶುಚಿ ರುಚಿಯಾದ ತಿನಿಸು ಮಾರಾಟಕ್ಕೆ 14 ಕಟ್ಟೆಗಳು ಇವೆ. ಎಗ್‌ ರೈಸ್‌, ಪಾನಿಪುರಿ, ಸೇವಪುರಿ, ಇಡ್ಲಿ, ದೋಸೆ, ಇಡ್ಲಿ, ವೆಜ್‌ ಫ್ರೆಡ್‌ರೈಸ್‌, ಗೋಬಿ ಹೀಗೆ ತರಹೇವಾರಿ ತಿನಿಸಿಗಳು ತಿಂಡಿ ಪ್ರಿಯರಿಗೆ ಖುಷಿ ಹೆಚ್ಚಿಸಲಿವೆ.

ಅಲ್ಪಾವಧಿ ವ್ಯಾಪಾರಸ್ಥರಿಗೆ 81 ಕಟ್ಟೆಗಳನ್ನು ನಿರ್ಮಿಸಿದ್ದು, ತಪ್ಪಲು ಪಲ್ಲೆ, ಕಾಯಿಪಲ್ಲೆ ಮಾರಾಟಗಾರರಿಗೆ ಯೋಗ್ಯ ಸ್ಥಳವಾಗಿದೆ. ಈ ಹಿಂದೆ ಖಾಲಿ ಜಾಗೆಯಲ್ಲಿಯೇ ಇಲ್ಲಿ ವ್ಯಾಪಾರ ಮಾಡುತ್ತಿದ್ದ ಅಂಗಡಿಕಾರರಿಗೆ ಇಲ್ಲಿ ಕಟ್ಟೆಗಳನ್ನು ನೀಡಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದು, ಬೀದಿ ವ್ಯಾಪಾರಿಗಳಿಗೆ ಜನಸಂದಣಿ ಸೇರುವ ಮಾರುಕಟ್ಟೆ ಇದಾಗಲಿದೆ.

ವಿಶೇಷತೆಗಳು

ಮಾರುಕಟ್ಟೆ ಪಕ್ಕದಲ್ಲೇ ಫುಟ್‌ಪಾತ್‌ ಇದೆ. ಎರಡು ವಾಹನ ಪಾರ್ಕಿಂಗ್‌ ವ್ಯವಸ್ಥೆ, ಶೌಚಾಲಯ, ಕಸ ಸಂಗ್ರಹಣೆ ಪೌರಕಾರ್ಮಿಕರು, ಡಸ್ಟ್‌ಬಿನ್‌ ವ್ಯವಸ್ಥೆ, ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿದೆ. ಗೋಡೆಯ ಮೇಲಿನ ಚಿತ್ರಗಳು ಮಾರುಕಟ್ಟೆಯ ವಿಶೇಷಗಳಾಗಿವೆ. ಪ್ಲಾಸ್ಟಿಕ್‌ ಮುಕ್ತ ಮಾರುಕಟ್ಟೆ ಇದಾಗಿದ್ದು, ನಿಷೇಧಿತ ಪ್ಲಾಸ್ಟಿಕ್‌ ಬಳಕೆಗೆ ದಂಡ ವಿಧಿಸಲಾಗುತ್ತದೆ. ಉಗುಳುವವರ, ಕಸ ಚೆಲ್ಲುವವರ ವಿರುದ್ಧ ನಿರಂತರ ನಿಗಾವಹಿಸಿ ದಂಡ ವಿಧಿಸಲಾಗುತ್ತದೆ.

ಎರಡ್ಮೂರು ದಶಕದಿಂದ ಈ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ಹೊಸ ಮಾರುಕಟ್ಟೆಯಲ್ಲಿ ಈಗ ಸಕಲ ಮೂಲಸೌಕರ್ಯ ಕಲ್ಪಿಸಿರುವುದು ಖುಷಿ ತಂದಿದೆ ಎಂದು ಅಡಕೆ, ಪೂಜಾ ಸಾಮಗ್ರಿ ವ್ಯಾಪಾರಸ್ಥ ಎಚ್‌.ಎಂ. ಸಾವಂತನವರ ಹೇಳಿದರು.

ನವನಗರ ಕಾಯಿಪಲ್ಲೆ ಮಾರಾಟಗಾರರು ರಸ್ತೆ ಬದಿಯೇ ಕುಳಿತು ವ್ಯಾಪಾರ ಮಾಡುತ್ತಿದ್ದು, ಇದರಿಂದ ಈ ಭಾಗದಲ್ಲಿ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿತ್ತು. ಅವರೆಲ್ಲ ಇನ್ನು ಹೊಸ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲಿದ್ದು, ಟ್ರಾಫಿಕ್‌, ಪಾರ್ಕಿಂಗ್‌ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ನವನಗರ ವ್ಯಾಪಾರಸ್ಥ ರಮೇಶ ನಂದ್ಯಾಳ ತಿಳಿಸಿದ್ದಾರೆ.

ಇಂದು ಲೋಕಾರ್ಪಣೆ

ನೂತನ ಮಾರುಕಟ್ಟೆ ಜ. 20ರಂದು ಸಂಜೆ 7 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಮಾರುಕಟ್ಟೆ ಉದ್ಘಾಟಿಸಲಿದ್ದಾರೆ. ಶಾಸಕ ಅರವಿಂದ ಬೆಲ್ಲದ, 27ನೇ ವಾರ್ಡ್‌ ಸದಸ್ಯೆ ಸುನೀತಾ ಮಾಳವದಕರ, ನವನಗರ ವಲಯ ಕಚೇರಿ ಸಹಾಯಕ ಆಯುಕ್ತ ರಮೇಶ ನೂಲ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಪೋಟೋ

ಮಾರುಕಟ್ಟೆ-1

ಲೋಕಾರ್ಪಣೆಗೆ ಸಿದ್ಧಗೊಂಡಿರುವ ನವನಗರದ ನೂತನ ಮಾರುಕಟ್ಟೆಯನ್ನು ವಲಯ ಕಚೇರಿ ಸಹಾಯಕ ರಮೇಶ ನೂಲ್ವಿ ಅವರು ಪರಿಶೀಲಿಸಿದರು.

ಪೋಟೋ

ಮಾರುಕಟ್ಟೆ-2

ನವನಗರದಲ್ಲಿನ ಹೊಸ ಮಾರುಕಟ್ಟೆಯಲ್ಲಿ ಅಲ್ಪಾವಧಿ ವ್ಯಾಪಾರಸ್ಥರಿಗೆ ನಿರ್ಮಿಸಿದ ಕಟ್ಟೆಗಳು.