ಕಳೆದ ಸಭೆಯಲ್ಲಿ ಪಾರ್ಕಿಂಗ್ ಶುಲ್ಕ ರದ್ದುಪಡಿಸುವ ಕುರಿತು ನಿರ್ಣಯಿಸಲಾಗಿತ್ತು. ಆದರೆ, ಈ ವರೆಗೂ ಜಾರಿಗೆ ಬಂದಿಲ್ಲ. ಪತ್ರಿಕಾ ಪ್ರಕಟಣೆಯನ್ನೂ ಆಯುಕ್ತರು ನೀಡಿಲ್ಲ.
ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಬೈಕ್, ಕಾರು ಸೇರಿದಂತೆ ಯಾವುದೇ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ನೀಡಬೇಕಿಲ್ಲ!ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಜನತೆಗೆ ಸಿಹಿ ಸುದ್ದಿ ನೀಡಿದರು.
ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸದಸ್ಯ ಶಿವು ಮೆಣಸಿನಕಾಯಿ, ಕಳೆದ ಸಭೆಯಲ್ಲಿ ಪಾರ್ಕಿಂಗ್ ಶುಲ್ಕ ರದ್ದುಪಡಿಸುವ ಕುರಿತು ನಿರ್ಣಯಿಸಲಾಗಿತ್ತು. ಆದರೆ, ಈ ವರೆಗೂ ಜಾರಿಗೆ ಬಂದಿಲ್ಲ. ಪತ್ರಿಕಾ ಪ್ರಕಟಣೆಯನ್ನೂ ಆಯುಕ್ತರು ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಅತ್ತ ಅನಧೀಕೃತವಾಗಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ಜತೆಗೆ ಜನರಿಗೆ ಅವಾಚ್ಯವಾಗಿ ನಿಂದಿಸಲಾಗುತ್ತಿದೆ ಎಂದು ಕಿಡಿಕಾರಿದರು. ಆಗ ಆಯುಕ್ತರು, ಪಾರ್ಕಿಂಗ್ ಶುಲ್ಕವನ್ನು ಕಳೆದ ಸಭೆಯಲ್ಲೇ ರದ್ದುಪಡಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಮಹಾನಗರದಲ್ಲಿ ವಾಹನ ನಿಲುಗಡೆಗೆ ಪಾರ್ಕಿಂಗ್ ಶುಲ್ಕ ನೀಡುವ ಅಗತ್ಯವಿಲ್ಲ ಎಂದರು.ಆಯುಕ್ತರಿಗೆ ಅಧಿಕಾರ:
ಸ್ಮಾರ್ಟ್‌ಸಿಟಿ ಯೋಜನೆಯಡಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಅನುಷ್ಠಾನಗೊಳಿಸಿದ ಸ್ಮಾರ್ಟ್‌ಹೆಲ್ತ್ ಕೇರ್ ಯೋಜನೆಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ವರದಿಯನ್ನು ಸಾಮಾನ್ಯಸಭೆಯಲ್ಲಿ ಮಂಡಿಸಲಾಯಿತು. ಯೋಜನೆಗೆ ಮಾನವ ಸಂಪನ್ಮೂಲಗಳಿಗೆ ಗುತ್ತಿಗೆದಾರರೆ ವೇತನ ಭರಿಸಬೇಕು. ಆದರೆ, ಪಾಲಿಕೆಯಿಂದ ಪಾವತಿಸಲಾಗಿದೆ. ಇದು ₹ 70 ಲಕ್ಷವಿದ್ದು ಇದನ್ನು ವಸೂಲಿ ಮಾಡಿ ಪಾಲಿಕೆಗೆ ಪಾವತಿಸುವುದು ಆಯುಕ್ತರ ಜವಾಬ್ದಾರಿ. ಇದಲ್ಲದೇ ಅವ್ಯವಹಾರ ಎಸಗಿದ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆಯೂ ನಿರ್ದೇಶನ ನೀಡಲಾಯಿತು. ಇದಕ್ಕೆ ಆಯುಕ್ತರಿಗೆ ಸಂಪೂರ್ಣ ಅಧಿಕಾರ ನೀಡಲಾಯಿತು. ಈ ವೇಳೆ ಮಾತನಾಡಿದ ಸದಸ್ಯ ತಿಪ್ಪಣ್ಣ ಮಜ್ಜಗಿ, ಇದೀಗ ಹಣ ವಸೂಲಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ತಕ್ಷಣವೇ ಹಣ ವಸೂಲಿ ಮಾಡುವಂತೆ ಆಯುಕ್ತರಿಗೆ ತಿಳಿಸಿದರು.