ಸಾರಾಂಶ
ಪಟ್ಟಣದಲ್ಲಿ ಕಳ್ಳತನ ವಾಗಿದ್ದ ಟಿಪ್ಪರ್ ಲಾರಿಯೊಂದನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಂತರ್ ರಾಜ್ಯ ವಾಹನ ಕಳ್ಳರನ್ನು ಬಂಧಿಸಿ ಕಳ್ಳತನವಾಗಿದ್ದ ₹20 ಲಕ್ಷ ಬೆಲೆ ಬಾಳುವ ಟಿಪ್ಪರ್ ಲಾರಿ, ವಿವಿಧ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಪಟ್ಟಣದಲ್ಲಿ ಕಳ್ಳತನ ವಾಗಿದ್ದ ಟಿಪ್ಪರ್ ಲಾರಿಯೊಂದನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಂತರ್ ರಾಜ್ಯ ವಾಹನ ಕಳ್ಳರನ್ನು ಬಂಧಿಸಿ ಕಳ್ಳತನವಾಗಿದ್ದ ₹20 ಲಕ್ಷ ಬೆಲೆ ಬಾಳುವ ಟಿಪ್ಪರ್ ಲಾರಿ, ವಿವಿಧ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.ಪಟ್ಟಣದ ಕೋನಸಾಗರ ರಸ್ತೆಯಲ್ಲಿರುವ ಗೋವಿಂದ ಎಂಬುವರಿಗೆ ಸೇರಿದ ₹12 ಲಕ್ಷ ಬೆಲೆ ಬಾಳುವ ಟಿಪ್ಪರ್ ಲಾರಿ ಕಳುವಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರಿ ಮಾರ್ಗದರ್ಶನದಲ್ಲಿ ಟಿಪ್ಪರ್ ಜಾಡು ಹಿಡಿದು ಹೊರಟ ಪೊಲೀಸರಿಗೆ ವಾಹನ ಕಳ್ಳತನ ಮಾಡುವ ಅಂತರ್ ರಾಜ್ಯ ಕಳ್ಳರಿಬ್ಬರು ಸಿಕ್ಕಿಬಿದ್ದಿದ್ದಾರೆ. ವಿ. ಮಹೇಶ(33) ವಿ. ಪ್ರಭಾಕರ ಬಂಧಿತ ಆರೋಪಿಗಳು.
ಇವರು ಮೂಲತಃ ಆಂದ್ರ ಪ್ರದೇಶದವರಾಗಿದ್ದು ರಾಜ್ಯದ ವಿಜಯನಗರ ( ಹೊಸಪೇಟೆಯ)ಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿ ಕೊಪ್ಪಳ, ಬಳ್ಳಾರಿ, ದಾವಣಗೆರೆ, ಹಾವೇರಿ, ಗದಗ ಸೇರಿದಂತೆ ಆಂಧ್ರಪ್ರದೇಶದ ಉರುವುಕೊಂಡ ಮಂಡಲ ವ್ಯಾಪ್ತಿಯಲ್ಲಿ ಟಾಟಾ ಸುಮೋ, ಲಾರಿ, ಬೈಕು, ಸೇರಿದಂತೆ ವಿವಿಧ ವಾಹನಗಳ ಕಳ್ಳತನ ಮಾಡಿ ಸಿಕ್ಕಿ ಬಿದ್ದು ಈ ಹಿಂದೆ ಜೈಲು ಸೇರಿದ್ದರು.ಜೈಲಿನಿಂದ ಹೊರಬಂದ ನಂತರ ಮತ್ತೆ ಹಳೆ ಚಾಳಿ ಮುಂದುವರಿಸಿ ಪಟ್ಟಣದ ಕೋನಸಾಗರ ರಸ್ತೆಯಲ್ಲಿದ್ದ ಗೋವಿಂದ ಎನ್ನುವರಿಗೆ ಸೇರಿದ ₹12 ಲಕ್ಷ ಮೌಲ್ಯದ ಟಿಪ್ಪರ್ ಲಾರಿಯನ್ನು ಕದ್ದು ಪರಾರಿಯಾಗಿದ್ದರು. ಪತ್ತೆ ಕಾರ್ಯ ಕೈಗೊಂಡ ಪೊಲೀಸರು ಆಂಧ್ರ ಪ್ರದೇಶದ ಗಡಿಭಾಗದಲ್ಲಿ ಕಳ್ಳರ ಎಡೆಮುರಿ ಕಟ್ಟಿ ಬಂಧಿತರಿಂದ ಪಟ್ಟಣದಲ್ಲಿ ಕಳುವಾಗಿದ್ದ ಟಿಪ್ಪರ್, ಟಾಟಾ ಸುಮೋ, ಬುಲೆಟ್ ಬೈಕ್ ಸೇರಿ ₹20 ಲಕ್ಷ ಮೌಲ್ಯದ ವಾಹನಗಳನ್ನು ವಶ ಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.