ಕಾರವಾರ ಟಾಗೋರ್ ಬೀಚ್ ಬಳಿ ಪ್ರವಾಸೋದ್ಯಮ ಇಲಾಖೆ ಪಾರ್ಕಿಂಗ್ ಸ್ಥಳ ನಿಗದಿಪಡಿಸದ ಹಿನ್ನೆಲೆಯಲ್ಲಿ ಪ್ರವಾಸಿಗರ ವಾಹನಗಳು ಮರಳಿನಲ್ಲಿ ಸಿಲುಕಿಕೊಳ್ಳುತ್ತಿವೆ. ಅದರಿಂದ ಪ್ರವಾಸಿಗರು ಸಮಸ್ಯೆ ಎದುರಿಸುವಂತಾಗಿದೆ.
ಕಾರವಾರ: ಕರಾವಳಿ ನಗರಿ ಕಾರವಾರದ ಕಡಲತೀರಕ್ಕೆ ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಜನಜಂಗುಳಿ ಇಲ್ಲದ ಇಲ್ಲಿನ ವಿಶಾಲವಾದ ಕಡಲತೀರ ಹಾಗೂ ಸುಂದರ ಪರಿಸರವನ್ನು ಆಸ್ವಾದಿಸುವ ಪ್ರವಾಸಿಗರು ಕೆಲಹೊತ್ತು ಇಲ್ಲಿ ಕಾಲ ಕಳೆದು ಆನಂತರ ಮುಂದಿನ ಪ್ರಯಾಣ ಕೈಗೊಳ್ಳುತ್ತಾರೆ. ಆದರೆ ಹೀಗೆ ಬರುವ ಪ್ರವಾಸಿಗರು ಕಡಲತೀರದಲ್ಲಿ ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ಕೊಂಡೊಯ್ಯಲು ಮುಂದಾಗಿ ಸಂಕಷ್ಟಕ್ಕೆ ಸಿಲುಕುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ.
ಹೆದ್ದಾರಿಗೆ ಹೊಂದಿಕೊಂಡೇ ಇರುವ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆ ಎದುರಿನ ಪ್ರದೇಶ ನೋಡಲು ಮೈದಾನದಂತೆಯೇ ಕಾಣುತ್ತದೆ. ಆದರೆ ಅದು ಮರಳು ಮಿಶ್ರಿತ ಪ್ರದೇಶವಾಗಿರುವುದರಿಂದ ವಾಹನಗಳು ಓಡಾಡಿದಾಗ ಹಲವು ಬಾರಿ ಮರಳಿನಲ್ಲಿ ವಾಹನದ ಚಕ್ರ ಸಿಲುಕಿ ಪ್ರವಾಸಿಗರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಬುಧವಾರ ಪ್ರವಾಸಿಗರ ಬಸ್ಸೊಂದು ಇಲ್ಲಿನ ಕಡಲತೀರದ ಮರಳಿನಲ್ಲಿ ಸಿಲುಕಿಕೊಂಡಿದೆ. ಸಮುದ್ರ ತೀರದ ಪ್ರದೇಶದಲ್ಲಿ ಬಸ್ಸನ್ನು ತಿರುಗಾಡಿಸಲು ಮುಂದಾದ ಸಂದರ್ಭದಲ್ಲಿ ಬಸ್ಸು ಮರಳಿನಲ್ಲಿ ಹೂತುಹೋಗಿದ್ದು ಚಾಲಕ ಹಾಗೂ ಪ್ರವಾಸಿಗರು ಸೇರಿ ಎಷ್ಟೇ ಹರಸಾಹಸಪಟ್ಟರೂ ಬಸ್ಸನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗಿಲ್ಲ. ಕೊನೆಗೆ ಸ್ಥಳಕ್ಕೆ ಜೆಸಿಬಿ ತರಿಸಿ ಬಸ್ಸನ್ನು ಮರಳಿನಿಂದ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಮೋಜು, ಮಸ್ತಿಗೆಂದು ಬಂದಿದ್ದ ಪ್ರವಾಸಿಗರು ಸಂಕಷ್ಟ ಅನುಭವಿಸಿದ್ದಲ್ಲದೇ ವಿನಾಕಾರಣ ಸಾವಿರಾರು ರುಪಾಯಿ ಖರ್ಚು ಮಾಡಬೇಕಾದ ಸ್ಥಿತಿ ಎದುರಾಯಿತು.ಕಡಲತೀರಕ್ಕೆ ಆಗಮಿಸುವ ಪ್ರವಾಸಿಗರ ವಾಹನಗಳು ಹೀಗೆ ಮರಳಿನಲ್ಲಿ ಸಿಲುಕಿ ಪರದಾಟ ನಡೆಸುವುದು ಹೊಸದೇನಲ್ಲ. ಆದರೂ ಪ್ರವಾಸಿಗರನ್ನು ಎಚ್ಚರಿಸಬೇಕಾದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸದೇ ಕಣ್ಮುಚ್ಚಿ ಕುಳಿತಂತಿದೆ. ಕಡಲತೀರಕ್ಕೆ ಬರುವ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡುವ ನಿಟ್ಟಿನಲ್ಲಿ ಕನಿಷ್ಠ ಸೂಚನಾ ಫಲಕಗಳನ್ನೂ ಸಹ ಅಳವಡಿಸದಿರುವುದು ದೂರದೂರುಗಳಿಂದ ಬರುವ ಪ್ರವಾಸಿಗರು ವಾಹನಗಳನ್ನು ಮರಳಿನಲ್ಲಿ ಸಿಲುಕಿಸಿಕೊಂಡು ಸಂಕಷ್ಟ ಅನುಭವಿಸುವಂತೆ ಮಾಡಿದೆ.
ಕಡಲತೀರಕ್ಕೆ ಸೂಕ್ತ ಪಾರ್ಕಿಂಗ್ ನಿಗದಿ ಅಗತ್ಯ: ಹೆದ್ದಾರಿಯಂಚಿಗೇ ಇರುವ ಟ್ಯಾಗೋರ್ ಕಡಲತೀರಕ್ಕೆ ಮಂಗಳೂರು, ಗೋವಾ ಮಾರ್ಗಗಳಿಗೆ ತೆರಳುವ ಪ್ರವಾಸಿಗರೂ ಭೇಟಿ ನೀಡಿ ತೆರಳುತ್ತಾರೆ. ಹೀಗಾಗಿ ಕೇವಲ ಕಾರುಗಳಷ್ಟೇ ಅಲ್ಲದೇ ಬಸ್ಗಳಂತಹ ದೊಡ್ಡ ವಾಹನಗಳೂ ಆಗಮಿಸುತ್ತವೆ. ಆದರೆ ಹೀಗೆ ಆಗಮಿಸುವ ವಾಹನ ಸವಾರರಿಗೆ ಎಲ್ಲಿ ಪಾರ್ಕಿಂಗ್ ಮಾಡಬೇಕು, ಎಲ್ಲಿ ಮಾಡಬಾರದು ಎನ್ನುವ ಸೂಚನಾ ಫಲಕ ಇಲ್ಲದಿರುವುದರಿಂದ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಇನ್ನು ಕೆಲವು ಪ್ರವಾಸಿಗರು ಕಡಲತೀರಕ್ಕೆ ವಾಹನವನ್ನು ಕೊಂಡೊಯ್ಯುವ ಹುಚ್ಚು ಸಾಹಸವನ್ನೂ ಮಾಡುವ ಘಟನೆಗಳು ನಡೆದಿದ್ದು, ಸಂಬಂಧಪಟ್ಟ ಇಲಾಖೆ ಸೂಕ್ತ, ಸುರಕ್ಷಿತ ಪಾರ್ಕಿಂಗ್ ಸ್ಥಳವನ್ನು ನಿಗದಿಗೊಳಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.