ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜೀವನದಲ್ಲಿ ಬರುವ ಭೋಗ, ಭಾಗ್ಯಗಳು ಕ್ಷಣಿಕ ಸುಖದವು ಎಂದರಿತ ವೇಮನ ಅವರು ಮನಪರಿವರ್ತನೆಗೊಂಡು ಮಹಾಯೋಗಿಯಾದರು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.ನವನಗರದ ಡಾ.ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ಮಹಾಯೋಗಿ ವೇಮನರ 613ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೇಮನರು ನಾಲ್ಕು ಸಾಲುಗಳ್ಳುಳ ಚೌಪದಿ ವಚನಕಾರರಾಗಿದ್ದಾರೆ. ಲೋಕದಲ್ಲಿ ಜನಿಸಿದ ಪ್ರತಿಯೊಬ್ಬರು ಜಾತಿ-ಮತ ಪಂಥ ಬದಿಗಿರಿಸಿ ಸ್ನೇಹ ಸೌಹಾರ್ದತೆಯಿಂದ ಬದುಕಬೇಕೆಂದು ಸಾರಿ ಸಾರಿ ಹೇಳಿದ್ದಾರೆ.
ಪ್ರತಿಯೊಬ್ಬರು ಜವಾಬ್ದಾರಿ ಬದುಕು ಕಟ್ಟಿಕೊಳ್ಳಬೇಕೆಂಬ ಸಂದೇಶ ನೀಡಿ, ತಂದೆ-ತಾಯಿಯರಲ್ಲಿ ದಯೆ ತೋರದ ಪುತ್ರ ಹುಟ್ಟಿದರೇನು, ಸತ್ತರೇನು. ಹುತ್ತದಲ್ಲಿ ಗೆದ್ದಲು ಹುಟ್ಟವೇ? ಸಾಯವೇ? ಎಂದು ವಚನ ರಚಿಸಿದ್ದು, ಮಾತಾ-ಪಿತೃರ ಮೇಲಿರುವ ಭಕ್ತಿ ಎಂತಹದು ಎಂದು ತೋರುತ್ತದೆ. ಇಂತಹ ಮಹಾನ ಯೋಗಿ ತತ್ವ ಮೈಗೂಡಿಸಿಕೊಂಡಾಗ ಜಯಂತಿ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದರು. ನವನಗರದಲ್ಲಿ ನಿರ್ಮಿಸಲಾಗುತ್ತಿರುವ ಹೇಮರಡ್ಡಿ ಮಲ್ಲಮ್ಮದೇವಸ್ಥಾನಕ್ಕೆ ತಮ್ಮ ಅನುದಾನದಲ್ಲಿ ₹5 ಲಕ್ಷ ನೀಡುವುದಾಗಿ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಮಾತನಾಡಿ, ಮಹಾಯೋಗಿ ವೇಮನ ಮತ್ತು ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಇಬ್ಬರು ಒಂದೇ ಕುಟುಂಬದವರಾಗಿದ್ದು, ಸಾಮಾಜಿಕ, ಧಾರ್ಮಿಕ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಇವರು ಲೋಕಾರೂಡಿಯಂತೆ ಒಂದು ಕುಲದಲ್ಲಿ ಜನಿಸಿದ್ದರೂ ಜಾತಿರಹಿತವಾದ ಜೀವನ ಸಾಗಿಸಿ ಮಾನವರೆಲ್ಲ ಒಂದೇ ಎಂಬ ಸಂದೇಶ ಸಾರಿದ್ದಾರೆ.ನಾನು ಚಿಕ್ಕವನಿದ್ದಾಗ ನಮ್ಮ ಊರಲ್ಲಿ ಪ್ರದರ್ಶನಗೊಂಡ ಹೇಮರಡ್ಡಿ ಮಲ್ಲಮ್ಮ ನಾಟಕ ನನ್ನ ಜೀವನದಲ್ಲಿ ಪರಿಣಾಮ ಬೀರಿತು. ಮಲ್ಲಮ್ಮ ಹಾಗೂ ವೇಮನರಂತಹವರ ತತ್ವ ಆದರ್ಶಗಳು ಮುಂದಿನ ಜನಾಂಗಕ್ಕೆ ತಿಳಿಯಲೆಂದು ಇದನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ನವನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಹೇಮರಡ್ಡಿ ದೇವಸ್ಥಾನಕ್ಕೆ ₹10 ಲಕ್ಷ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನೀಡುವುದಾಗಿ ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ ಮಾತನಾಡಿ, ವೇಮನ ರವರು ಹೆತ್ತವರು, ಒಡಹುಟ್ಟಿದವರು, ಸಂಬಂಧಿಕರಿಂದ ಅನಾದರಕ್ಕೆ ಗುರಿಯಾಗಿ ದುಶ್ಚಟಗಳ ದಾಸನಾಗಿದ್ದ ಸಂದರ್ಭದಲ್ಲಿ ಪರಸ್ತ್ರೀ ಸಂಗದಲ್ಲಿ ತೊಡಗಿ ಸಂಪತ್ತನ್ನೆಲ್ಲ ಹಾಳು ಮಾಡುತ್ತಿರುವ ಸಮಯದಲ್ಲಿ ಇವರನ್ನು ಹೇಮರಡ್ಡಿ ಮಲ್ಲಮ್ಮ ಪರಿವರ್ತನೆ ಮಾಡುವಲ್ಲಿ ಸಫಲಳಾಗಿದ್ದಾಳೆ. ವೇಮನರ ಹಲವಾರು ವಚನಗಳು ಲೌಕಿಕದ ಅಂಕು-ಡೊಂಕುಗಳನ್ನು ತಿದ್ದುವ ದಾರಿದೀಪಗಳಾಗಿದ್ದು ನಾವೆಲ್ಲರೂ ಅವರ ತತ್ವಗಳನ್ನು ಅಳವಡಿಸಿಕೊಳ್ಳೋಣ ಎಂದರು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಬಾಗಲಕೋಟೆ ಆಧ್ಯಾತ್ಮಿಕಚಿಂತಕ ಪ್ರದೀಪ ಗುರೂಜಿ ವೇಮನರ ಸಮಗ್ರಜೀವನದ ಬಗ್ಗೆ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಹೇಮ-ವೇಮ ಸಂಸ್ಥೆ ಅಧ್ಯಕ್ಷ ಆರ್.ಎಲ್.ಕಟಗೇರಿ, ನಾರಾಯಣ ಹಾದಿಮನಿ, ಎಚ್.ಎಸ್.ನಾಲತ್ವಾಡ, ಎಸ್.ಬಿ. ಮಾಚಾ, ಈಶ್ವರಕೋನಪ್ಪನವರ ಇದ್ದರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಸ್ವಾಗತಿಸಿ, ರೆಡ್ಡಿ ಸಮಾಜದ ಅಧ್ಯಕ್ಷ ಮಹೇಶ ಕಕರೆಡ್ಡಿ ವಂದಿಸಿ, ಶಂಕರ ಲಿಂಗದೇಸಾಯಿ, ಉಮಾ ಕೆಳಗಿನಮನಿ ನಿರೂಪಿಸಿದರು.
ಕಾರ್ಯಕ್ರಮದ ಆರಂಭದ ಮುನ್ನ ಜಿಲ್ಲಾಡಳಿತ ಭವನದ ಎದುರು ಬೀಳಗಿ ಶಾಸಕ ಜೆ.ಟಿ.ಪಾಟೀಲ, ವಿಪ ಸದಸ್ಯ ಪಿ.ಎಚ್.ಪೂಜಾರ ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಕುಂಭಹೊತ್ತ ಮುತ್ತೈದೆಯರು ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಡಾ.ಅಂಬೇಡ್ಕರ್ ಭವನಕ್ಕೆ ಮುಕ್ತಾಯಗೊಂಡಿತು. ಅಪರ್ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಅಲ್ಪಸಂಖ್ಯಾತ ಇಲಾಖೆ ಜಿಲ್ಲಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.