ಸಾರಾಂಶ
ಹುಬ್ಬಳ್ಳಿ: ಜಾತಿಗಣತಿ ವಿವಾದ, ಆಡಳಿತ ವೈಫಲ್ಯ ಮರೆಮಾಚಲು ಕಾಂಗ್ರೆಸ್ ಸರ್ಕಾರ ಏನಾದರೊಂದು ವಿಷಯಾಂತರ ಮಾಡುತ್ತಲೇ ಇರುತ್ತದೆ, ವೇಮುಲ ಕಾಯ್ದೆ ಸಹ ಅದೇ ತರಹದ್ದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ರೋಹಿತ್ ವೇಮುಲಾ ಕಾಯ್ದೆ ಜಾರಿ ಕುರಿತು ಪ್ರತಿಕ್ರಿಯಿಸಿ ಕಾಂಗ್ರೆಸ್ ವಿವಾದ ಮೈಮೇಲೆ ಎಳೆದುಕೊಂಡಾಗ ಹೀಗೆ ಜನರ ಗಮನ ಬೇರೆಡೆ ಸೆಳೆಯುವುದು ಹೊಸದೇನಲ್ಲ ಎಂದು ಹೇಳಿದರು.ರಾಹುಲ್ ಗಾಂಧಿ ದೇಶದೊಳಿತಿಗೆ ರಾಜಕೀಯ ಮಾಡುತ್ತಿಲ್ಲ. ವೋಟ್ ಬ್ಯಾಂಕ್ ರಾಜಕೀಯದ ಮೇಲೆ ಮಾತ್ರ ಗಮನಹರಿಸಿದ್ದಾರೆ. ರಾಜ್ಯದಲ್ಲಿ ''''''''ರೋಹಿತ್ ವೇಮುಲ ಕಾಯ್ದೆ ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದೂ ಇದರ ಒಂದು ಭಾಗ ಎಂದು ಟೀಕಿಸಿದರು.
ರಾಹುಲ್ ಗಾಂಧಿ ಹೇಳಿದಂತೆ ನಡೆದರೆ ಜನ ನಗುವಂತಾಗುತ್ತದೆ. ಸಿದ್ಧರಾಮಯ್ಯ ಅವರಿಗೆ ರಾಜಕೀಯ ಅನುಭವ ಇದೆ. ರಾಹುಲ್ ಹೇಳಿದಂತೆ ಅಲ್ಲ, ತಮ್ಮ ಅನುಭವದಿಂದ ಆಡಳಿತ ನಡೆಸಬೇಕು ಎಂದರು.ಎಷ್ಟು ಮನೆಗೆ ಭೇಟಿ ನೀಡಿದ್ದಾರೆ?.
ಜಾತಿ ಜನಗಣತಿ ಹೆಸರಲ್ಲಿ ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಸಿದ್ದರಾಮಯ್ಯ ಅವರೇ ಜಾತಿ ಗಣತಿ ಅಲ್ಲ ಅಂದಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಅಂತ ಹೇಳಿದ್ದಾರೆ. ಸರ್ಕಾರದ ವಿರುದ್ಧ ಜನಕ್ರೋಶ ವ್ಯಕ್ತವಾದಾಗ ಈ ರೀತಿಯ ಸುಳ್ಳುಗಳನ್ನು ಹೇಳುತ್ತಾರೆ.ಜಾತಿ ಗಣತಿ ಎಂದು ಯಾರ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿದ್ದಾರೆ? ರಾಜ್ಯದಲ್ಲಿ ಒಬ್ಬರೇ ಒಬ್ಬರ ಮನೆಗೂ ತೆರಳಿಲ್ಲ. ವಿವಾದ, ವಿರೋಧ ವ್ಯಕ್ತವಾಗುತ್ತಲೇ ''''''''ಇದು ಜಾತಿ ಗಣತಿಯಲ್ಲ ಆರ್ಥಿಕ ಸಮೀಕ್ಷೆ'''''''' ಎಂದರು. ಇದೆಂಥ ಹುಡುಗಾಟ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಧರ್ಮಾಧಾರಿತ ಮೀಸಲಾತಿ ಕೊಡಲು ಬರಲ್ಲ ಅಂತ ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಮುಸ್ಲಿಮರ ಓಲೈಕೆಗಾಗಿ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಕೊಡುತ್ತಿದೆ. ಈ ವಿಚಾರದಲ್ಲಿ ಮೋದಿ ಅವರನ್ನೇ ಬಾಯಿಗೆ ಬಂದಂತೆ ಬೈಯಲಾಗುತ್ತಿದೆ. ಜೆಡಿಎಸ್‌ನ್ನು ಅಧೋಗತಿಗೆ ಇಳಿಸಿ ಸಿದ್ದರಾಮಯ್ಯ ಈಗ ಕಾಂಗ್ರೆಸ್ ನಲ್ಲಿದ್ದಾರೆ. ನಿಮ್ಮ ಹಾಗೆ ನಾವು ತಂತಿ ಹಿಡಿಕೊಂಡು ಹೋಗಿಲ್ಲ. ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಸೋತಿರಬಹುದು. ಆದರೆ, ಬೇರೆ ರಾಜ್ಯಗಳಲ್ಲಿ ಗೆದ್ದಿದ್ದೇವೆ. ಬೇರೆ ರಾಜ್ಯಗಳಲ್ಲಿ ನಿಮ್ಮ ಪಕ್ಷದ ಅಡ್ರೆಸ್ ಇಲ್ಲ ಎಂದು ಟೀಕಿಸಿದರು.ಪ್ರಿಯಾಂಕ ಖರ್ಗೆ ಬೆಂಬಲಿಗರು ನಮ್ಮ ಅಧ್ಯಕ್ಷರ ಮೇಲೆ ದಬ್ಬಾಳಿಕೆ ಮಾಡಲು ಹೋಗಿದ್ದಾರೆ. ಇದು ಸರಿಯಲ್ಲ. ಅವರು ರಿಪಬ್ಲಿಕ್ ಆಫ್ ಕಲಬುರಗಿ ಮಾಡುತ್ತಿದ್ದಾರೆ.
ನಿಪ್ಪಾಣಿಗೆ ಅಂಬೇಡ್ಕರ್ ಭೇಟಿ: ಸರ್ಕಾರದಿಂದ ಶತಮಾನೋತ್ಸವ ಆಚರಿಸಿ: ಜೋಶಿಹುಬ್ಬಳ್ಳಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ನಿಪ್ಪಾಣಿಗೆ ಬಂದು ಬರೋಬ್ಬರಿ 100 ವರ್ಷಗಳಾಗಿವೆ. ಆದಕಾರಣ ಅವರ ಭೇಟಿಯ ಶತಮಾನೋತ್ಸವವನ್ನು ರಾಜ್ಯ ಸರ್ಕಾರ ಆಚರಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು 1925ರ ಏ. 10, 11ರಂದು ನಿಪ್ಪಾಣಿಗೆ ಬಂದಿದ್ದರು. ಆಗ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಶಿಕ್ಷಣ ಮತ್ತು ವಸತಿ ಶಾಲೆಗಳ ಮಹತ್ವದ ಕುರಿತು ಮಾತನಾಡಿದ್ದರು. ಇದು ಐತಿಹಾಸಿಕ ದಿನವಾಗಿದ್ದು, ಏ. 11ಕ್ಕೆ ಈ ಕಾರ್ಯಕ್ರಮ ಜರುಗಿ ನೂರು ವರ್ಷಗಳಾಗಿವೆ. ಈ ಐತಿಹಾಸಿಕ ಭೇಟಿಯ ಶತಮಾನೋತ್ಸವವನ್ನು ಆಚರಿಸುವಂತೆ ಕೇಂದ್ರ ಸಚಿವರು ಒತ್ತಾಯಿಸಿದ್ದಾರೆ.ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು 1924ರಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಲು ಬೆಳಗಾವಿಗೆ ಆಗಮಿಸಿದ ಐತಿಹಾಸಿಕ ಭೇಟಿಯ ಶತಮಾನೋತ್ಸವವನ್ನು ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ತಮ್ಮ ನೇತೃತ್ವದ ಸರ್ಕಾರ ಆಚರಿಸಿತ್ತು. ಆದರೆ, ಇದೊಂದು ಸರ್ಕಾರಿ ಕಾರ್ಯಕ್ರಮವಾಗಿದ್ದರಿಂದ ಇದಕ್ಕೊಂದು ಸಮಿತಿಯನ್ನು ರಚಿಸದೆ, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾರ್ಯಕ್ರಮ ನಡೆಸಿದ್ದು ಸರ್ಕಾರದ ಸರ್ವಾಧಿಕಾರಿ ಧೋರಣೆ ತೋರಿತ್ತು. ಆದರೆ ಇದೀಗ ಅಂಬೇಡ್ಕರ್ ಕರ್ನಾಟಕಕ್ಕೆ ಆಗಮಿಸಿ ಬರೋಬ್ಬರಿ 100 ವರ್ಷವಾಗಿದೆ. ಈಗ ಅದರ ಬಗ್ಗೆ ನಿರ್ಲಕ್ಷ್ಯ ತೋರಿದಂತಾಗಿದೆ ಎಂದು ಟೀಕಿಸಿದ್ದಾರೆಅಂದು ಸ್ವಾತಂತ್ರ‍್ಯ ಹೋರಾಟಕ್ಕಾಗಿ ಭಾರತೀಯರು ಒಗ್ಗೂಡಿ ರಾಷ್ಟ್ರಕ್ಕೋಸ್ಕರ ಸಮರ್ಪಿತವಾಗಿರಿಸಿದ್ದ ಕಾಂಗ್ರೆಸ್ ಇಂದು ಕೇವಲ ಅಧಿಕಾರಕ್ಕಾಗಿ ಮುಂದುವರೆದ ರಾಜಕೀಯ ಪಕ್ಷವಾಗಿದೆ. 1956ರಲ್ಲಿ ದೇಹ ತ್ಯಾಗ ಮಾಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸುವ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ಮಾಡಲಿಲ್ಲ. ತಮ್ಮನ್ನು ತಾವು ವೈಭವೀಕರಿಸಿಕೊಳ್ಳುವವರಿಗೆ ಅಂಬೇಡ್ಕರ್‌ರರಂತಹ ಮೇದಾವಿ ಮತ್ತು ಸಾಧಕ ಪುರುಷನನ್ನು ಗುರುತಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿರುವ ಸಚಿವ ಜೋಶಿ, ಅರ್ಹರನ್ನು ಬೈಪಾಸ್ ಮಾಡುವ ಹೊಸ ಪದ್ಧತಿ ಪ್ರಾರಂಭಿಸಲಾಗಿದೆ. ಆಡಳಿತ ಪಕ್ಷವೇ ತಮ್ಮ ನಾಯಕರನ್ನು ಭಾರತ ರತ್ನದಂತಹ ಅತ್ಯುನ್ನತ ಗೌರವ ನೀಡುವಲ್ಲಿ ತೋರಿದ ತಾರತಮ್ಯ ಅಸಮರ್ಥನೀಯ ಎಂದು ಕಿಡಿಕಾರಿದ್ದಾರೆ.ಪ್ರತಿಯೊಬ್ಬ ಭಾರತೀಯರ ಮನದಿಚ್ಚೆಯಂತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಡಾ. ಬಾಬಾ ಸಾಹೇಬರ ಪರಂಪರೆಯನ್ನು ಗೌರವಿಸಲು ಅವರ ಜೀವನದ ಪ್ರಮುಖ ಘಟ್ಟಗಳ ಸ್ಥಳಗಳನ್ನು ಪಂಚತೀರ್ಥ ಕ್ಷೇತ್ರಗಳಾಗಿ ಅಭಿವೃದ್ಧಿ ಪಡಿಸಲಾಗಿದೆ. ಅಂಬೇಡ್ಕರ್ ಅವರ ವಿಚಾರಧಾರೆ, ವ್ಯಕ್ತಿತ್ವ ಮತ್ತು ಜೀವನವನ್ನು ಪ್ರತಿಯೊಬ್ಬರಿಗೂ ಮನಮುಟ್ಟಿಸುವ ಕಾರ್ಯವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪೂರೈಸಿದೆ. ಡಾ. ಅಂಬೇಡ್ಕರ್ ಅವರಿಗೆ ಪ್ರಾರಂಭದಿಂದಲೂ ಕಾಂಗ್ರೆಸ್ ಪಕ್ಷವು ಅವಮಾನ ಮಾಡುತ್ತಲೇ ಬಂದಿರುವುದನ್ನು ಇಡೀ ದೇಶವೇ ಕಂಡಿದೆ. ಈಗ ನಿಮ್ಮ ಸರ್ಕಾರವು ಕೂಡ ಅದನ್ನೇ ಪುನರಾವರ್ತನೆಗೊಳಿಸುತ್ತಿರುವುದು ಕನ್ನಡ ನಾಡಿನ ಜನತೆಗೆ ಅತ್ಯಂತ ನೋವು ತಂದಿದೆ ಎಂದು ಜೋಶಿ ಪತ್ರದಲ್ಲಿ ಬರೆದಿದ್ದಾರೆ.
ಇನ್ನೂ ಕಾಲ ಮಿಂಚಿಲ್ಲ ಈಗಲಾದರೂ ಇತಿಹಾಸ ನೆನಪಿಡುವಂತೆ ಮತ್ತೆ ಪ್ರಮಾದ ಎಸಗದೆ ತಾವು ಈ ಬಗ್ಗೆ ಒಂದು ವಿಶೇಷ ಸಮಿತಿ (ಸರ್ವಪಕ್ಷಗಳನ್ನು ಒಳಗೊಂಡಂತೆ) ರಚಿಸಿ ನಿಗದಿತ ಒಂದು ಕಾಲಮಿತಿಯಲ್ಲಿ ಅಂಬೇಡ್ಕರ್ ಅವರ ಕರ್ನಾಟಕ ಭೇಟಿಯ ಶತಮಾನೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜನೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದು ಜೋಶಿ ಪತ್ರದಲ್ಲಿ ಬರೆದಿದ್ದಾರೆ.