ಮಹಾತ್ಮನ ಕೊಂದವಗೆ ಪೂಜೆ ಅತ್ಯಂತ ಹೇಯ: ತಾಜ್‍ಪೀರ್

| Published : Jan 31 2024, 02:17 AM IST

ಸಾರಾಂಶ

ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಹತ್ಯೆಗೈದ ವ್ಯಕ್ತಿಯ ಪ್ರತಿಮೆ ಸ್ಥಾಪಿಸಲು ಮುಂದಾಗಿರುವ ಶಕ್ತಿಗಳನ್ನು ಎಲ್ಲರೂ ಬಲವಾಗಿ ವಿರೋಧಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಸತ್ಯ ಮತ್ತು ಅಹಿಂಸೆಯ ಮೂಲಕ ಬ್ರಿಟೀಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಕೊಂದ ವ್ಯಕ್ತಿಯನ್ನು ಕೋಮುವಾದಿ ಬಿಜೆಪಿಯವರು ಪೂಜಿಸಲು ಹೊರಟಿರುವುದು ಅತ್ಯಂತ ಹೇಯಕೃತ್ಯ. ಪ್ರಜ್ಞಾವಂತರೆಲ್ಲಾ ಈ ಬಗ್ಗೆ ಆಲೋಚಿಸಬೇಕಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಹೇಳಿದರು.

ಮಹಾತ್ಮಗಾಂಧಿ ಹುತಾತ್ಮರಾದ ದಿನಾಚರಣೆ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಗಾಂಧಿ ಹತ್ಯೆಯಾದ ದಿನದಿಂದ ಇಂದಿನವರೆಗೂ ಕಾಂಗ್ರೆಸ್ ಗಾಂಧೀಜಿ ವಿಚಾರಗಳನ್ನು ಪಾಲಿಸಿಕೊಂಡು ಬರುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ನಾಯಕರುಗಳ ತ್ಯಾಗ ಬಲಿದಾನವಿದೆ. ಬ್ರಿಟೀಷರ ಪರವಾಗಿದ್ದ ಶಕ್ತಿಗಳು ಸ್ವಾತಂತ್ರ್ಯ ಪೂರ್ವದಿಂದಲೂ ಗಾಂಧಿ ವಿಚಾರಗಳನ್ನು ವಿರೋಧಿಸಿಕೊಂಡು ಬರುತ್ತಿವೆಯಲ್ಲದೆ ಗಾಂಧಿಯನ್ನು ಗುಂಡಿಕ್ಕಿ ಹತ್ಯೆಗೈದ ವ್ಯಕ್ತಿಯ ಪ್ರತಿಮೆ ಸ್ಥಾಪಿಸಲು ಮುಂದಾಗಿರುವುದನ್ನು ಎಲ್ಲರೂ ಬಲವಾಗಿ ವಿರೋಧಿಸಬೇಕು ಎಂದರು.

ನೆಹರು ಮನೆತನದ ಕುಡಿ ರಾಹುಲ್‍ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ದೇಶದ ಬಡಜನರ, ರೈತರ, ಕಾರ್ಮಿಕರ, ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿದ್ದಾರೆ. ಈಗ ನ್ಯಾಯಯಾತ್ರೆ ಮೂಲಕ ಐಕ್ಯತೆ, ಶಾಂತಿ, ಸೌಹಾರ್ದತೆ, ಸಹಬಾಳ್ವೆಯನ್ನು ಬೆಸೆಯಲು ಹೊರಟಿರುವುದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಕಿಸಾನ್‍ಸೆಲ್ ವಿಭಾಗದ ಉಪಾಧ್ಯಕ್ಷ ಶಿವಲಿಂಗಪ್ಪ, ಪದವೀಧರ ವಿಭಾಗದ ಅಧ್ಯಕ್ಷ ಮುದಸಿರ್ ನವಾಜ್ ಇನ್ನು ಮೊದಲಾದವರು ಈ ಸಂದರ್ಭದಲ್ಲಿದ್ದರು.