ಸಾರಾಂಶ
ರಾಮಮೂರ್ತಿ ನವಲಿ
ಗಂಗಾವತಿ:ತಾಲೂಕಿನ ವೆಂಕಟಗಿರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕೆಂಬ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ
ಪ್ರಸ್ತಾವನೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಬ್ರೇಕ್ ಹಾಕಿದ್ದಾರೆ.ವೆಂಕಟಗಿರಿ ಗ್ರಾಮವು ಪ್ರಮುಖ ಹೋಬಳಿಯಾಗಿದ್ದು ಇದರ ವ್ಯಾಪ್ತಿಗೆ 22 ಗ್ರಾಮಗಳು ಬರುತ್ತಿದ್ದು 43,101 ಜನ ಸಂಖ್ಯೆ ಹೊಂದಿದ್ದರಿಂದ ಮೇಲ್ದರ್ಜೆಗೇರಿಸಲು ಜನಾರ್ದನ ರೆಡ್ಡಿ ಪ್ರಸ್ತಾವನೆ ಸಲ್ಲಿಸಿದ್ದರು.
ತಂಗಡಗಿ ಬ್ರೇಕ್:ಕಳೆದ ವರ್ಷ ವೆಂಕಟಗಿರಿ ಗ್ರಾಮವು ದೊಡ್ಡ ಹೋಬಳಿಯಾಗಿದ್ದು, ಈ ಭಾಗದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಈಗಿರುವ 6 ಹಾಸಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಪರಿವರ್ತಿಸಿ ಮೇಲ್ದರ್ಜೆಗೇರಿಸಬೇಕೆಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅಲ್ಲದೇ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದರು. ಆದರೆ, ತಾವು ಶಾಸಕತ್ವದಿಂದ ಅನುರ್ಜಿತ ಸಂದರ್ಭದಲ್ಲಿ ಸಚಿವ ಶಿವರಾಜ ತಂಗಡಗಿ ವೆಂಕಟಗಿರಿ 30 ಹಾಸಿಗೆ ಆಸ್ಪತ್ರೆಗೆ ಬ್ರೇಕ್ ಹಾಕಿದ್ದಾರೆಂದು ಸ್ವತಃ ಶಾಸಕರೇ ಕೆಡಿಪಿ ಸಭೆಯಲ್ಲಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಯಾಳುಗಳಿಗೆ ಸಿಗದ ಸೌಲಭ್ಯ:ವೆಂಕಟಗಿರಿ ಗ್ರಾಮದ ಸುತ್ತಲು ಗುಡ್ಡಗಾಡು ಪ್ರದೇಶವಿದ್ದು ಈ ಭಾಗದಲ್ಲಿ ಚಿರತೆ ಮತ್ತು ಕರಡಿಗಳು ಅಧಿಕವಾಗಿವೆ. ಹೊಲ ಗದ್ದೆಗಳಿಗೆ ತೆರಳಿದ ರೈತರು ಅವುಗಳ ದಾಳಿಗೆ ಸಿಲುಕಿ ಗಾಯಗೊಳಿಸಿರುವ ಉದಾಹರಣೆಗಳಿವೆ. ಈ ಗಾಯಾಳುಗಳು ಆಸ್ಪತ್ರೆಗೆ ಬರಲು 20 ಕಿಮೀ ದೂರದ ಗಂಗಾವತಿಗೆ ಬರಬೇಕು. ಆದರೆ ವೆಂಕಟಗಿರಿ ಗ್ರಾಮದಲ್ಲಿ 30 ಹಾಸಿಗೆ ಆಸ್ಪತ್ರೆ ಸೇರಿದಂತೆ ಸೌಲಭ್ಯ ಒದಗಿಸಿದರೆ ಗಾಯಾಳುಗಳು ಸೇರಿದಂತೆ ಗರ್ಭಿಣಿಯರು, ವೃದ್ದರಿಗೆ ಅನುಕೂಲವಾಗುತ್ತಿತ್ತು. ಈಗ 30 ಹಾಸಿಗೆ ಆಸ್ಪತ್ರೆ ಮಂಜೂರಿಗೆ ಬ್ರೇಕ್ ಹಾಕಿದ್ದರಿಂದ ಈ ಭಾಗದ ಜನರಿಗೆ ಚಿಕಿತ್ಸೆ ಮರೀಚಿಕೆಯಾಗಿ ಉಳಿದಿದೆ.ವೆಂಕಟಗಿರಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವಂತೆ ಪ್ರಸ್ತಾವನೆ ಕಳಿಸಿಕೊಡಲಾಗಿತ್ತು. ಆದರೆ, ತಾವು ಶಾಸಕತ್ವ ರದ್ದಾದ ಸಮಯದಲ್ಲಿ ತಾಲೂಕು ಪಂಚಾಯಿತಿ ಕೆಡಿಪಿ ಸಭೆ ನಡೆಸಿ ಗಂಗಾವತಿಯನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದ್ದ ಸಚಿವ ಶಿವರಾಜ ತಂಗಡಗಿ ಅವರು ವೆಂಕಟಗಿರಿ ಗ್ರಾಮಕ್ಕೆ ಆಗಬೇಕಾಗಿದ್ದ ಆಸ್ಪತ್ರೆಯನ್ನು ರದ್ದುಪಡಿಸಿದ್ದಾರೆ.
ಗಾಲಿ ಜನಾರ್ದನ ರೆಡ್ಡಿ ಶಾಸಕಗಂಗಾವತಿ ತಾಲೂಕಿನ ಶ್ರೀರಾಮನಗರ, ಕಾರಟಗಿ ಮತ್ತು ಕನಕಗಿರಿ ತಾಲೂಕಿನಲ್ಲಿ ಮೂರು ಸಮುದಾಯ ಆರೋಗ್ಯ ಕೇಂದ್ರಗಳಿವೆ. ಹೀಗಾಗಿ ಇನ್ನೊಂದು ಸಮುದಾಯ ಆರೋಗ್ಯ ಕೇಂದ್ರ ಪರಿವರ್ತನೆ ಮಾಡಲು ಬರುವುದಿಲ್ಲ. ಹೀಗಾಗಿ ವೆಂಕಟಗಿರಿಯಲ್ಲಿ 30 ಹಾಸಿಗೆ ಆಸ್ಪತ್ರೆ ಕೈತಪ್ಪಿದೆ.ಡಾ. ಗೌರಿಶಂಕರ ತಾಲೂಕು ವೈದ್ಯಾಧಿಕಾರಿ, ಗಂಗಾವತಿ