ಸಾರಾಂಶ
ಚಿತ್ರದುರ್ಗ: ಚಿತ್ರದುರ್ಗದ ಪ್ರತಿಷ್ಠಿತ ಸಿಟಿ ಇನ್ ಸ್ಟಿಟ್ಯೂಟ್ ಗೆ ಶನಿವಾರ ನಡೆದ ಚುನಾವಣೆಯಲ್ಲಿ ಎಲ್.ಎಲ್.ವೆಂಕಟೇಶ ರೆಡ್ಡಿ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಟಿ.ಎಸ್.ಎನ್.ಜಯಣ್ಣ ಹಾಗೂ ಖಜಾಂಚಿಯಾಗಿ ಅಜಿತ್ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ. ಚಿತ್ರದುರ್ಗ ಸಿಟಿ ಇನ್ ಸ್ಟಿಟ್ಯೂಟ್ ನ ಇತಿಹಾಸದಲ್ಲಿ ಎಂದಿಗೂ ಚುನಾವಣೆ ಇಷ್ಟೊಂದು ಜಿದ್ದಾ ಜಿದ್ದಾಗಿ ಪರಿಣಮಿಸಿರಲಿಲ್ಲ. ನ್ಯಾಯಾಲಯದಿಂದ ಮತ ಚಲಾಯಿಸುವ ಹಕ್ಕು ಪಡೆದು ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮತದಾನ ಆರಂಭವಾಗುವ ಎರಡು ತಾಸು ಮುನ್ನ ಸದಸ್ಯರ ಪಟ್ಟಿ ನ್ಯಾಯಾಲಯದಿಂದ ಬಂದಿದ್ದು, ಚುನಾವಣೆ ತಿರುವು ಪಡೆಯಲು ಕಾರಣವಾಯಿತು ಎನ್ನಲಾಗಿದೆ. ಚುನಾವಣೆ ಘೋಷಣೆಯಾದಾಗ ಕೇವಲ 456 ಮಂದಿ ಮಾತ್ರ ಮತದಾನದ ಹಕ್ಕು ಪಡೆದಿದ್ದರು. ನಂತರ 98 ಜನರ ಪಟ್ಟಿಯೊಂದಕ್ಕೆ ಹೈಕೋರ್ಟ್ ಒಪ್ಪಿಗೆ ನೀಡಿ ಮತದಾನದ ಅವಕಾಶ ಕಲ್ಪಿಸಿತು. ಬಳಿಕ 32, ತರುವಾಯ 38 ಹಾಗೂ ಅಂತಿಮವಾಗಿ ಮತ್ತೆ 42 ಜನರಿಗೆ ಹೈಕೋರ್ಟ್ ಮತದಾನದ ಅವಕಾಶ ಮಾಡಿಕೊಟ್ಟಿತು. ಇದರಿಂದಾಗಿ ಒಟ್ಟು 666 ಮಂದಿ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಒಟ್ಟು ಹತ್ತು ಪದಾಧಿಕಾರಿ ಹುದ್ದೆಗೆ ಚುನಾವಣೆ ನಡೆದಿದ್ದು, 22 ಮಂದಿ ಸ್ಪರ್ಧಿಸಿದ್ದರು. ಕಾರ್ಯದರ್ಶಿ, ಉಪಾಧ್ಯಕ್ಷರ ಸ್ಥಾನಕ್ಕೆ ತಲಾ ಇಬ್ಬರು ಹಾಗೂ ಖಜಾಂಚಿಗೆ ಮೂವರು ಸ್ಪರ್ಧಿಸಿದ್ದು, ಉಳಿದ ಏಳು ನಿರ್ದೇಶಕರ ಸ್ಥಾನಕ್ಕೆ ಹದಿನೈದು ಮಂದಿ ಕಣದಲ್ಲಿದ್ದರು. ಶನಿವಾರ ಬೆಳಿಗ್ಗೆ 9 ಗಂಟೆಗೆ ಆರಂಭವಾದ ಮತದಾನದಲ್ಲಿ ಚಿತ್ರದುರ್ಗ ಜಿಲ್ಲೆಯಷ್ಟೇ ಅಲ್ಲದೆ ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸದಸ್ಯರು ಗುಂಪುಗಳಾಗಿ ಆಗಮಿಸಿ ಮತ ಚಲಾಯಿಸಿದರು. ಮತ ಗಟ್ಟೆಗೆ ಹೋಗುವ ಕಡೇ ಗಳಿಗೆಯವರೆಗೆ ಮತದಾರರ ಮನವೊಲಿಸುವ ದೃಶ್ಯಗಳು ಸಾಮಾನ್ಯವಾಗಿದ್ದವು. ಚುನಾವಣೆ ಹಿನ್ನಲೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಮತದಾನ 4 ಗಂಟೆಗೆ ಪೂರ್ಣಗೊಂಡ ನಂತರ 4.15 ರ ಸುಮಾರಿಗೆ ಮತ ಎಣಿಕೆ ಕೈಗೆತ್ತಿಕೊಳ್ಳಲಾಯಿತು. ಆರಂಭದಲ್ಲಿ ಕಾರ್ಯದರ್ಶಿ, ಉಪಾಧ್ಯಕ್ಷ ಹಾಗೂ ಖಜಾಂಚಿ ಮತ ಪತ್ರಗಳ ಎಣಿಕೆಗೆ ಹಾಕಲಾಯಿತು. ಅಂತಿಮವಾಗಿ ಕಾರ್ಯದರ್ಶಿ ಸ್ಥಾನಕ್ಕೆ ಎನ್.ಎಲ್.ವೆಂಕಟೇಶರೆಡ್ಡಿ, ಉಪಾಧ್ಯಕ್ಷರಾಗಿ ಟಿ.ಎಸ್.ಎನ್.ಜಯಣ್ಣ, ಖಜಾಂಚಿಯಾಗಿ ಅಜಿತ್ ಕುಮಾರ್ ಜೈನ್ ಆಯ್ಕೆಯ ಚುನಾವಣಾ ಅಧಿಕಾರಿ ಘೋಷಿಸಿದರು. ಸಿಟಿ ಇನ್ ಸ್ಟಿಟ್ಯೂಟ್ ಗೆ ಜಿಲ್ಲಾಧಿಕಾರಿ ಗೌರವಾಧ್ಯಕ್ಷರಾಗಿದ್ದರೆ, ಕಾರ್ಯದರ್ಶಿ ಹುದ್ದೆ ಪ್ರಮುಖವಾದುದು. ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ವೆಂಕಟೇಶರೆಡ್ಡಿ 296 ಮತ ಪಡೆದರೆ, ಎದುರಾಳಿ ಮಾಜಿ ಕಾರ್ಯದರ್ಶಿ ಬಿ.ಚಿತ್ರಲಿಂಗಪ್ಪ 270 ಮತಗಳ ಪಡೆದರು. ಅಂತಿಮವಾಗಿ ವೆಂಕಟೇಶ ರೆಡ್ಡಿ 26 ಮತಗಳ ಅಂತರದಿಂದ ಜಯಸಾಧಿಸಿದರು.ಒಂದುವರೆ ವರ್ಷ ಆಡಳಿತಾಧಿಕಾರಿ ಇದ್ರು:
ಚಿತ್ರದುರ್ಗ ಸಿಟಿ ಇನ್ ಸ್ಟಿಟ್ಯೂಟ್ ಗೆ ಪ್ರತಿ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಯಲಿದ್ದು, ಅವಧಿಯೊಳಗೆ ಜನರಲ್ ಬಾಡಿ ಸಭೆ ನಡೆಸಿ ಚುನಾವಣೆಗೆ ಹೋಗದ ಕಾರಣ ಸರ್ಕಾರ ಆಡಳಿತಾಧಿಕಾರಿ ನೇಮಿಸಿತ್ತು. ಬರೋಬ್ಬರಿ ಒಂದುವರೆ ವರ್ಷಗಳ ಕಾಲ ಸಿಟಿ ಇನ್ ಸ್ಟಿಟ್ಯೂಟ್ ಅಡಳಿತಾಧಿಕಾರಿಗಳ ವಶದಲ್ಲಿತ್ತು. ಸುದೀರ್ಘ ಅವಧಿ ನಂತರ ಚುನಾವಣೆ ನಡೆದಿತ್ತು.