ಶಿವಾನಂದ ಪಿ ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಲೂಕಿನಲ್ಲಿ ನೀರಾವರಿ ಕ್ರಾಂತಿ ಭಾರೀ ಸುದ್ದಿಯಾಗಿ ಶುರುವಾಗಿದ್ದ ವೆಂಕಟೇಶ್ವರ ಏತನೀರಾವರಿ ಯೋಜನೆಯು ₹ 174.42 ಕೋಟಿ ವೆಚ್ಚದಲ್ಲಿ 2017-18ರಲ್ಲಿ ಪ್ರಾರಂಭಗೊಂಡು ಜನೆವರಿ 2024ರಲ್ಲಿ 100ಕ್ಕೆ 100ರಷ್ಟು ಮುಕ್ತಾಯಗೊಂಡು ಬರೋಬ್ಬರಿ ಎರಡುವರೆ ವರ್ಷಗಳಾಗಿದ್ದರೂ, ಇಂದಿಗೂ ಹನಿ ನೀರು ಕಾಲುವೆಗಳಿಗೆ ಹರಿಯದೇ ಸಾವಿರಾರು ರೈತರ ಪಾಲಿಗೆ ಶಾಪವಾಗಿದ್ದು, ನಮ್ಮ ಆಡಳಿತ ವೀರರ ಪ್ರಾಮಾಣಿಕ ಕೆಲಸಗಳಿಗೆ ಹಿಡಿದ ಕೈಗನ್ನಡಿ ಆಗಿದೆ.ಬಾಗಲಕೋಟೆ ಜಿಲ್ಲೆಯ ಮಹತ್ತರ ನೀರಾವರಿ ಯೋಜನೆಯಲ್ಲಿ ಒಂದಾಗಿರುವ ವೆಂಕಟೇಶ್ವರ ಏತನೀರಾವರಿ ನಿಗದಿತ ಕಾಲದಲ್ಲಿ ಕಾಲುವೆಗೆ ನೀರು ಹರಿದು ರೈತರಿಗೆ ವರದಾನ ಆಗಬೇಕಿತ್ತು. ಆದರೂ ಇದೂವರೆಗೆ ಹನಿನೀರು ಕಾಲುವೆಗಳ ಮೂಲಕ ರೈತರ ಜಮೀನುಗಳ ಹಸಿನಿಂದ ನಳನಳಿಸಬೇಕಿತ್ತು. ಆದರೂ ಮೂಲ ಕಾರ್ಯವೇ ಫಲಿಸದ ಕಾರಣಕ್ಕೆ ಇದೀಗ ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಜಗದಾಳ-ನಾವಲಗಿ ಸುತ್ತಲಿನ ಮುಖ್ಯ ಹಾಗೂ ಉಪ ಕಾಲುವೆಗಳನ್ನು ಇಷ್ಟು ವರ್ಷಗಳಾದರೂ ನೀರು ಬಾರದ ಕಾರಣ ಸ್ವಯಂಪ್ರೇರಿತ ರೈತರೇ ತಮ್ಮಲ್ಲಿನ ಅನಗತ್ಯ ವಸ್ತುಗಳನ್ನು ಹಾಕಿ, ಮೇವು ಬೆಳೆ ಬೆಳೆಯುತ್ತ ಮುಚ್ಚಿದ್ದಾರೆ. ಇದರಿಂದಾಗಿ ಸಾರ್ವಜನಿಕರ ತೆರಿಗೆಯ ಹಣ ಅಕ್ಷರಶಃ ಪೋಲಾದಂತಿದೆ.

ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯಕ್ಕೆ ಕುಲಹಳ್ಳಿ ಗ್ರಾಮದ ಕೃಷ್ಣಾ ನದಿಯಿಂದ 0.75 ಟಿಎಂಸಿಯಷ್ಟು ನೀರನ್ನು ಬಳಕೆ ಮಾಡಿಕೊಂಡು ಒಟ್ಟು 17.991 ಎಕರೆ (ಸುಮಾರು 7,200 ಹೆಕ್ಟೇರ್) ಭೂಮಿಗೆ ನೀರುಣಿಸುವ ಗುರಿ ಈ ಯೋಜನೆಯ ಮುಖ್ಯ ಉದ್ದೇಶವೇ ಸಫಲವಾಗದೇ ಯೋಜನೆಯೇ ಸಂಪೂರ್ಣ ನೆಗೆದುಬಿದ್ದಂತಾಗಿದೆ.


ಕಾಲುವೆ ಮೇಲೆ ಬೆಳೆ: ರೈತರ ಜಮೀನುಗಳಿಗೆ ನೀರು ಬಾರದೆ ಮತ್ತು ಪರಿಹಾರ ಧನವೂ ಬಾರದಿರುವದರಿಂದ ಈ ಭಾಗದ ಬಹುತೇಕ ಕಡೆಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಹಾಯ್ದು ಹೋಗಿರುವ ಕಾಲುವೆಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಅದರ ಮೇಲೆ ಬೆಳೆ ಬೆಳೆದಿದ್ದು, ಅಲ್ಲದೇ, ತ್ಯಾಜ್ಯ ತುಂಬಿದ್ದಾರೆ.

ಯೋಜನೆಯ ಮುಖ್ಯ ಕಾಲುವೆಯು 5.05 ಕಿ.ಮೀ. ಉದ್ದವಾಗಿದ್ದು, ಇದರ ಸಿದ್ದಾಪುರ ವಲಯದ ಕಾಲುವೆಯು 18.85 ಕಿ.ಮೀ. ಮತ್ತು ನಾವಲಗಿ ವ್ಯಾಪ್ತಿಯಲ್ಲಿ 15.50 ಕಿ.ಮೀ. ಉದ ಸೇರಿ ಒಟ್ಟು 394 ಕಿ.ಮೀ.ಉದ್ದವಿದ್ದರೂ, ಫಲಾನುಭವಿಗಳಾಗಿದ್ದ ರೈತರು, ಯಾವುದೇ ಪರಿಹಾರ ಮತ್ತು ನೀರು ಇಲ್ಲದೇ ಕ್ಷೀಣಗೊಂಡಿದ್ದರೆ, ಯೋಜನೆ ಹೆಸರಲ್ಲಿ ಪುಢಾರಿಗಳು ಮಾತ್ರ ಹುಲುಸಾದ ಫಸಲು ಪಡೆದ ನೈಜ ಫಲಾನುಭವಿಗಳಾಗಿದ್ದಾರೆ.

ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಬಳಿ ಜಾಕವೆಲ್‌ಗೆ ನೀರು ಪೂರೈಸುವ ಸ್ಥಳವಾಗಿದ್ದು, ರೈತರ ಜಮೀನುಗಳಿಗೆ ಪರಿಹಾರ ಮಾತ್ರ ಇನ್ನೂ ಒದಗಿಸಿಲ್ಲ.

ಒಂದು ಹನಿಯೂ ನೀರಿಲ್ಲ, ಪರಿಹಾರವೂ ಇಲ್ಲ: ಕಲಹಳ್ಳಿ, ಹುಲ್ಯಾಳ, ಮರೆಗುದ್ದಿ, ಬುದ್ನಿ, ಮಾಲಾಪುರ, ಚಿಮ್ಮಡ, ಜಗದಾಳ, ನಾವಲಗಿ ಗ್ರಾಮಗಳ ಭಾಗದ ರೈತರು ಇದುವರೆಗೆ ಪರಿಹಾರ ಧನದಿಂದ ವಂಚಿತರಾಗಿದ್ದಾರೆ. ಅಲ್ಲದೇ, ಕಾಲುವೆಗೆ ಇದುವರೆಗೂ ಹನಿ ನೀರೂ ಬಂದಿಲ್ಲ. ಹೀಗಾಗಿ ನೀರಾವರಿ ವಂಚಿತ ರೈತರ ಜಮೀನುಗಳಿಗೆ ನೀರು ಕಲ್ಪಿಸುವಲ್ಲಿ ಕಾಲುವೆಯ ಅಪ್ರಯೋಜನವೆಂದು ಬೇಸರಗೊಂಡು ಸಂಪೂರ್ಣ ಮುಚ್ಚಿ ನಮ್ಮ ಹೊಲಗಳಲ್ಲಿ ಬೇಸಾಯ ಮಾಡಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ.

ಈ ಭಾಗದ ರೈತರು. ಕೃಷಿ ಕ್ರಾಂತಿಗೆ ಕಾರಣವಾಗಿ ರೈತರ ಬೆಳೆಗಳು ಹುಲುಸಾಗಿ ಬೆಳೆದು ಆರ್ಥಿಕವಾಗಿ ಬಲಿಷ್ಠರಾಗಬೇಕಿದ್ದ ಹಿನ್ನೆಲೆಯಲ್ಲಿ ರೂಪುಗೊಂಡ ವೆಂಕಟೇಶ್ವರ ಏತನೀರಾವರಿ ಯೋಜನೆಗೆ ಒಟ್ಟು 394 ಕಿ.ಮೀ.ವ್ಯಾಪ್ತಿಯ ಕೃಷಿ ಜಮೀನುಗಳಿಗೆ ನೀರುಣಿಸಬೇಕಿದ್ದ ಯೋಜನೆ ಸ್ವತಃ ನೀರುಂಡದ್ದು ಕಹಿ ಸತ್ಯವಾದರೆ, ಜನತೆಯ ತೆರಿಗೆಯಿಂದ ಸಂಗ್ರಹಿತ ಸರ್ಕಾರದ 174.42 ಕೋಟಿ ಮೊತ್ತದ ಅನುದಾನ ಗೋವಿಂದಾ.., ಗೋವಿಂದಾ ಎಂಬಂತಾಗಿದ್ದು ಮತ್ತು ಯೋಜನೆ ಹೆಸರಲ್ಲಿ ಜನಪ್ರತಿನಿಧಿಗಳ, ಅಧಿಕಾರಿಗಳ ಮತ್ತು ಗುತ್ತಿಗೆದಾರರ ಹೊಟ್ಟೆ ತುಂಬಿದ್ದು ಸುಳ್ಳಲ್ಲ. ಜಮೀನುಗಳಲ್ಲಿ ಕಾಲುವೆ ಹಾಯ್ದು ಹೋದರೂ ಹನಿ ನೀರೂ ಬಂದಿಲ್ಲ. ಪರಿಹಾರ ಒದಗಿಸಿ ನೀರು ಬರುವಂತೆ ಮಾಡಬೇಕಾದ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು. ಅಲ್ಲಿಯವರೆಗೂ ಕಾಲುವೆ ಮೇಲೆ ಬೇಸಾಯ ನಡೆಸುವ ಹಕ್ಕು ಎಲ್ಲ ರೈತರದ್ದಾಗಿದೆ.

-ಮಲ್ಲಿಕಾರ್ಜುನ ಜನವಾಡ, ರೈತ, ನಾವಲಗಿ.

----

ಪರಿಹಾರಕ್ಕಾಗಿ ಇಲಾಖೆಗಳಿಗೆ ಅಲೆದು ಸಾಕಾಗಿದೆ. ಎಷ್ಟೇ ವಿನಂತಿಸಿಕೊಂಡರೂ ಪ್ರಯೋಜನವಾಗಿಲ್ಲ. ಕೇಳಿದಾಗೊಮ್ಮೆ ಭರವಸೆಗಳೇ ಬೇಸರವಾಗಿವೆ.

-ಶಿವು ಭದ್ರನ್ನವರ, ರೈತ, ಬನಹಟ್ಟಿ.

-----

ಭೂಸ್ವಾಧೀನವಾಗಿಲ್ಲ. ಕೆಲ ರೈತರು ಸಹಕರಿಸಿದ್ದು, ಇನ್ನಷ್ಟು ರೈತರು ಸಹಕರಿಸಬೇಕಿದೆ. 3-4 ತಿಂಗಳಲ್ಲಿ ಪರಿಹಾರ ಒದಗಿಸುವ ಕಾರ್ಯ ನಡೆಯಲಿದೆ.

-ಪ್ರದೀಪ ಪಾಟೀಲ, ಸಹಾಯಕ ಅಭಿಯಂತರ, ನೀರಾವರಿ ಇಲಾಖೆ, ಜಮಖಂಡಿ.