ಸಾರಾಂಶ
ಉಪಮುಖ್ಯಮಂತ್ರಿ ಆಯ್ಕೆ ಕುರಿತಾಗಿ ಗೊಂದಲ ಸೃಷ್ಟಿಸಬೇಡಿ ಎಂದು ಮಂತ್ರಿಗಳಿಗೆ ವೇಣುಗೋಪಾಲ್ ಕರೆ ನೀಡಿದ್ದಾರೆ ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೂರು ಡಿಸಿಎಂ ಹುದ್ದೆ ಸೃಷ್ಟಿಗಾಗಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಮೇಲೆ ಒತ್ತಡ ಹಾಕಿದ ಸಚಿವರಿಗೆ ಮಂಗಳವಾರ ಹೈಕಮಾಂಡ್‌ನಿಂದ ಕರೆ ಬಂದಿದ್ದು, ಚುನಾವಣೆ ಸಾಮೀಪ್ಯವಿರುವಾಗ ಗೊಂದಲ ಹುಟ್ಟುಹಾಕದಂತೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ್ದ ಏಳು ಸಚಿವರ ಪೈಕಿ ಮೂರ್ನಾಲ್ಕು ಸಚಿವರು ಡಿಸಿಎಂ ಹುದ್ದೆ ಬೇಡಿಕೆ ಬಗ್ಗೆ ಮಂಗಳವಾರ ಬಹಿರಂಗ ಹೇಳಿಕೆ ನೀಡಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸಚಿವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸದರಿ ಸಚಿವರಿಗೆ ದೂರವಾಣಿ ಕರೆ ಮಾಡಿ ಇಂತಹ ಗೊಂದಲ ಹುಟ್ಟುಹಾಕದಂತೆ ಸೂಚಿಸಿದರು ಎನ್ನಲಾಗಿದೆ.ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಡಿಸಿಎಂ ಹುದ್ದೆ ಸೃಷ್ಟಿಗಾಗಿ ಬೇಡಿಕೆ ಮಂಡಿಸಿದ್ದ ಸಚಿವರ ಪೈಕಿ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಹಾಗೂ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರು ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಡಿಸಿಎಂ ಹುದ್ದೆ ಬೇಡಿಕೆಯಿಟ್ಟಿರುವುದಾಗಿ ಸ್ಪಷ್ಟಪಡಿಸಿದ್ದರು.