ವಿಜೃಂಭಣೆಯ ಶ್ರೀ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ

| Published : Jan 24 2025, 12:47 AM IST

ಸಾರಾಂಶ

ಜಯ ವಿಜಯರು, ಕುದುರೆಗಳು ಹಾಗೂ ಸಾರಥಿಯನ್ನು ಒಳಗೊಂಡ 4 ಚಕ್ರದ ಪುಷ್ಪಪಲ್ಲಕ್ಕಿ ರಥದಲ್ಲಿ ಹುಲಿಕುರ ಶ್ರೀ ವೇಣುಗೋಪಾಲಸ್ವಾಮಿ ಮಹಾ ರಥೋತ್ಸವ ಬಾರಿ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಸರಗೂರು ಸಮೀಪದ ಹೆಬ್ಬಲಗುಪ್ಪೆ ಗ್ರಾಪಂ ವ್ಯಾಪ್ತಿಯ ಹುಲಿಕುರ ಗ್ರಾಮದಲ್ಲಿ ಇತ್ತೀಚೆಗೆ ಇತಿಹಾಸ ಪ್ರಸಿದ್ಧ ಶ್ರೀ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ ಬಾರಿ ವಿಜೃಂಭಣೆಯಿಂದ ನೆರವೇರಿತು.ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ಬಣ್ಣ ಬಳಿದು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಇಡೀ ಗ್ರಾಮವೇ ವಿದ್ಯುತ್ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು.ಶ್ರೀ ವೇಣುಗೋಪಾಲಸ್ವಾಮಿ ಉತ್ಸವ ಮೂರ್ತಿಯನ್ನು ಕಪಿಲಾ ನದಿಯವರೆಗೆ ಉತ್ಸವದಲ್ಲಿ ಕರೆದೊಯ್ದು ಅಲ್ಲಿ ಗಂಗೆ ಪೂಜೆ ಸಲ್ಲಿಸಿ ನಂತರ ದೇವಸ್ಥಾನಕ್ಕೆ ಮರಳಿತು. ಜಯ ವಿಜಯರು, ಕುದುರೆಗಳು ಹಾಗೂ ಸಾರಥಿಯನ್ನು ಒಳಗೊಂಡ 4 ಚಕ್ರದ ಪುಷ್ಪಪಲ್ಲಕ್ಕಿ ರಥದಲ್ಲಿ ಹುಲಿಕುರ ಶ್ರೀ ವೇಣುಗೋಪಾಲಸ್ವಾಮಿ ಮಹಾ ರಥೋತ್ಸವ ಬಾರಿ ವಿಜೃಂಭಣೆಯಿಂದ ನಡೆಯಿತು.ಭಕ್ತಾದಿಗಳು ರಥೋತ್ಸವಕ್ಕೆ ಹಣ್ಣು ಜವನ ಎಸೆದು ಭಕ್ತಿ ಸಮರ್ಪಿಸಿದರು, ಭಕ್ತಾದಿಗಳೆಲ್ಲರೂ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಗೋವಿಂದ, ಗೋವಿಂದ ಇನ್ನಿತರ ನಾಮಗಳನ್ನು ಪಠಿಸುತ್ತ ದಾಸರು, ಗುಡ್ಡರು ದೊಣ್ಣೆ ವರಸೆ ಪ್ರದರ್ಶಿಸಿದರು. ರಾತ್ರಿ ವಾದ್ಯಗೋಷ್ಠಿ ಮೂಲಕ ವಿದ್ಯುತ್ ದೀಪಾಲಾಂಕೃತ ಹೂವಿನ ಪಲ್ಲಕ್ಕಿಯಲ್ಲಿ ಶ್ರೀ ವೇಣುಗೋಪಾಲ ಸ್ವಾಮಿಯನ್ನು ಮೆರವಣಿಗೆ ಮೂಲಕ ಕಪಿಲಾ ನದಿಯ ದಡಕ್ಕೆ ತಂದು,ನದಿಯ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹೂವಿನ ಅಲಂಕಾರಗಳಿಂದ ಶೃಂಗಾರಗೊಂಡಿದ್ದ ತೆಪ್ಪದಲ್ಲಿ ಪ್ರತಿಷ್ಠಾಪಿಸಲಾಯಿತು.ಅನಂತರ ತೆಪ್ಪದಲ್ಲಿ ದೇವರ ಉತ್ಸವ ಮೂರ್ತಿಯನ್ನು ನದಿಯ ಮಧ್ಯ ಭಾಗಕ್ಕೆ ತೆಗೆದುಕೊಂಡು ಹೋಗಿ ಮೂರು ಬಾರಿ ತಿರುಗಿಸುತ್ತಿದಂತೆಯೆ ನೆರೆದಿದ್ದ ನೂರಾರು ಭಕ್ತರು ಶ್ರೀ ವೇಣುಗೋಪಾಲಸ್ವಾಮಿಗೆ ಜೈಕಾರ ಘೋಷಣೆಗಳನ್ನು ಮೊಳಗಿಸಿದರು. ನಂತರ ಮೆರವಣಿಗೆ ಮೂಲಕ ದೇವರನ್ನು ದೇವಸ್ಥಾನಕ್ಕೆ ತರಲಾಯಿತು. ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಸಮಿತಿ ಅಧ್ಯಕ್ಷ ಕೆ.ಜಿ. ಸ್ವಾಮಿ, ಉಪಾಧ್ಯಕ್ಷ ಸಣ್ಣನಾಯಕ, ಕಾರ್ಯದರ್ಶಿ ಎಚ್.ಬಿ. ಬಾಲಕೃಷ್ಣ, ಗೌರವಾಧ್ಯಕ್ಷ ಕೆ. ಚಿಕ್ಕವೀರನಾಯಕ, ಪದ್ಮರಾಜ್, ಖಜಾಂಚಿ ಮೋಹನ್ ರಾಜ್, ನಿರ್ದೇಶಕರಾದ ಸ್.ವಿ. ವೇಣುಗೋಪಾಲ್, ಬಿ.ಸಿ. ಬಸಪ್ಪ, ನಂಜೇಗೌಡ, ಪಟೇಲ್, ನಂಜೇಗೌಡ, ಕೆ. ಗೋಪಾಲ್, ಎನ್. ರಮೇಶ್ ಇದ್ದರು.-------------