ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ವೇಣೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಗೊಮ್ಮಟೇಶನಿಗೆ ಮಹಾ ಮಸ್ತಕಾಭಿಷೇಕವು ಭಕ್ತರನ್ನು ಒಂದೆಡೆ ಸೆಳೆಯುತ್ತಿದ್ದರೆ, ಇನ್ನೊಂದೆಡೆ ಮಹೋತ್ಸವದ ನಿಮಿತ್ತ ಏರ್ಪಡಿಲಾದ ವಸ್ತು ಪ್ರದರ್ಶನ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್ ಜನರನ್ನು ಸಮ್ಮೋಹನಗೊಳಿಸುತ್ತಿದೆ.ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಸುಂದರವಾದ ಅರಣ್ಯ ಮತ್ತು ಪ್ರಾಣಿ ಪಕ್ಷಿಗಳ ಮನೋಹರ ವೈವಿಧ್ಯಮಯ ಸುಂದರ ದೃಶ್ಯಗಳನ್ನು ಹಾಗೂ ಕೃತಕಗುಹೆಯೊಂದನ್ನು ಅರಣ್ಯ ಇಲಾಖೆಯವರು ರಚಿಸಿದ್ದಾರೆ. ಪರಿಸರದಲ್ಲಿ ಶಾಲೆ, ಆಸ್ಪತ್ರೆ ಇತ್ಯಾದಿಗಳೊಂದಿಗೆ ಕೃಷಿ ಚಟುವಟಿಕೆಗಳ ಪ್ರತಿಕೃತಿಗಳನ್ನು, ಕೃತಕ ಜಲಪಾತವೊಂದನ್ನು ನಿರ್ಮಿಸಿ ಆಕರ್ಷಣೀಯವಾಗಿಸಿದ್ದಾರೆ. ವಿವಿಧ ಗಿಡಗಳ ಪ್ರದರ್ಶನವನ್ನೂ ಮಾಡಿದ್ದಾರೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಇಲಾಖೆಯವರಿಂದ ರಾಷ್ಟ್ರೀಯ ಆರೋಗ್ಯ ಮತ್ತು ಯೋಜನೆಗಳ ಮಾಹಿತಿಯ ವ್ಯವಸ್ಥೆ ಮಾಡಲಾಗಿದೆ. ದ.ಕ. ಜಿಲ್ಲಾ ಹಾಲು ಒಕ್ಕೂಟದ ಉತ್ಪನ್ನದ ಮಳಿಗೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಪಶು ಪಾಲನೆ ಮತ್ತು ಪಶು ವೈದ್ಯಕೀಯದ ಮಾಹಿತಿ, ಕೌಶಲ್ಯ ಅಭಿವೃದ್ಧಿ, ಉದ್ಯಮ ಶೀಲತೆ, ಜೀವನೋಪಾದ ಕುರಿತು, ಜಲಜೀವನ ಹಾಗೂ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮಳಿಗೆ ಇದ್ದು, ಸರ್ಕಾರದ ಮಾಹಿತಿಗಳನ್ನು ಒದಗಿಸುತ್ತಿವೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ಮಳಿಗೆಯೂ ಇದ್ದು, ಅಲ್ಲಿ ಪುರಾತನ ದೇಗುಲಗಳ ಪುನರುತ್ಥಾನ ಮಾಡಿರುವ ಕಾರ್ಯಸಾಧನೆಗಳನ್ನು ವಿವರಿಸಲಾಗಿದೆ. ಅಂಚೆ ಇಲಾಖೆಯ ಮಳಿಗೆಯಲ್ಲಿ ಜೈನ ಸಂಸ್ಕೃತಿಯನ್ನು ಬಿಂಬಿಸುವ ಅಂಚೆ ಚೀಟಿಗಳ ಹಾಗೂ ಇದುವರೆಗೆ ಬಿಡುಗಡೆಯಾಗಿರುವ ಅಂಚೆ ಚೀಟಿಗಳ ಪ್ರದರ್ಶನ ಹಾಗೂ ಮಾರಾಟವನ್ನು ಆಯೋಜಿಸಿದ್ದಾರೆ. ಔಷಧೀಯ, ಕೃಷಿ ಉಪಕರಣಗಳ ಅಂಗಡಿಗಳು ಜನರನ್ನು ಸೆಳೆಯುತ್ತಿವೆ. ಇಷ್ಟೇ ಅಲ್ಲದೆ ಒಂದೆಡೆ ಸುಮಾರು 100ಕ್ಕೂಅಧಿಕ ವಿವಿಧ ಗೃಹೋಪಯೋಗಿ ವಸ್ತುಗಳು, ಗೃಹಿಣಿಯರ ಅಲಂಕಾರ ವಸ್ತುಗಳು, ಮಕ್ಕಳ ಆಟಿಕೆಯ ವಸ್ತುಗಳು, ಫ್ಯಾನ್ಸಿ, ಸೀರೆಗಳ ಅಂಗಡಿಗಳು, ಉತ್ತರ ಭಾರತ ಶೈಲಿಯ ತಿಂಡಿ ತಿನಸುಗಳು, ಅಲಂಕಾರಿಕ ವಸ್ತುಗಳು, ವಿವಿಧ ಐಸ್ ಕ್ರೀಮ್ ಮಾರಾಟ ಮಳಿಗೆಗಳು ಸದಾ ತೆರೆದಿದ್ದು ಜನರನ್ನು ಆಕರ್ಷಿಸುತ್ತಿವೆ.ಇನ್ನೊಂದೆಡೆ ಸುಮಾರು 3 ಎಕೆರೆ ಜಾಗದಲ್ಲಿ ಬೃಹತ್ ಮಟ್ಟದ ಅಮ್ಯೂಸ್ ಮೆಂಟ್ ಪಾರ್ಕ್ ಇದ್ದು, ಬೃಹತ್ ಜಾಯಿಂಟ್ ವೀಲ್, ಕೊಲಂಬಸ್ ಡ್ರಾಗನ್ ಟ್ರೈನ್, ಬ್ರೇಕ್ ಡ್ಯಾನ್ಸ್ ಟೋಟೋ, ವಾಟರ್ ಬೋಟ್, ಜೋಕರ್ ಟ್ರೈನ್ ಚೌವುಸಿ, ಮೀನು ಪ್ರದರ್ಶನ, ಕಾರು ಬೈಕ್ ರೇಸ್ ಇತ್ಯಾದಿಗಳು ಅಬಾಲವೃದ್ದರನ್ನು ಆಕರ್ಷಿಸುತ್ತಿವೆ. ನೋಡಿದಷ್ಟು ಮತ್ತೂ ನೋಡಬೇಕೆನ್ನುವ ವಸ್ತುಪ್ರದರ್ಶನ ಇದಾಗಿದೆ. ವಸ್ತುಪ್ರದರ್ಶನದ ಮನರಂಜನೆಯೊಂದಿಗೆ ಅಲ್ಲಿಯ ಸಭಾವೇದಿಕೆಯೊಂದರಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ವಸ್ತು ಪ್ರದರ್ಶನಕ್ಕೆ ಮುಕ್ತ ಪ್ರವೇಶವಿದೆ.