ವೇಣೂರು ಮಹಾಮಸ್ತಕಾಭಿಷೇಕ: ಬಾಹುಬಲಿ ಸ್ವಾಮಿಯ ಸಚಿತ್ರ ಅಂಚೆ ಕಾರ್ಡ್‌ ಬಿಡುಗಡೆ

| Published : Feb 27 2024, 01:33 AM IST

ವೇಣೂರು ಮಹಾಮಸ್ತಕಾಭಿಷೇಕ: ಬಾಹುಬಲಿ ಸ್ವಾಮಿಯ ಸಚಿತ್ರ ಅಂಚೆ ಕಾರ್ಡ್‌ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ವೇಣೂರಿನಲ್ಲಿ ನಡೆಯುತ್ತಿರುವ ಶ್ರೀ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕದಲ್ಲಿ ಸೋಮವಾರ ಕರ್ನಾಟಕದ ಮುಖ್ಯ ಅಂಚೆ ಮಹಾಪ್ರಬಂಧಕ ಶಿರ್ತಾಡಿ ರಾಜೇಂದ್ರ ಕುಮಾರ್, ಅಂಚೆ ಇಲಾಖೆ ಮೂಲಕ ರೂಪಿಸಿದ ಬಾಹುಬಲಿ ಸ್ವಾಮಿಯ ಸಚಿತ್ರ ಅಂಚೆ ಕಾರ್ಡನ್ನು ಮೈಸೂರು ಮಹಾರಾಜರು ಬಿಡುಗಡೆಗೊಳಿಸಿದರು. ಮೌಲ್ಯ ಅವರ ಬಾಹುಬಲಿ ಗೀತಾಮೃತ ಗಾನಲಹರಿ ಬಿಡುಗಡೆಗೊಳಸಿ ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ವ್ಯಕ್ತಿಯ ಸುಖ-ಭೋಗ, ವೈಭವ, ಆಡಂಬರ ನೋಡಿ ಗೌರವಿಸುವುದಲ್ಲ. ಆತನ ಅಂತರಂಗದ ಸೌಂದರ್ಯ ಗೌರವಿಸಬೇಕು. ಆದರೆ, ಕಾಲದೋಷದಿಂದ ನಾವು ಹೈಟ್ ಮಾತ್ರ ಗಮನಿಸುತ್ತೇವೆ. ಅಂತರಂಗದ ಸೌಂದರ್ಯ ಲೈಟ್‌ನ್ನು ಗುರುತಿಸುವುದಿಲ್ಲ ಎಂದು ಶ್ರೀ ಅಮೋಘ ಕೀರ್ತಿ ಮುನಿಮಹಾರಾಜರು ಹೇಳಿದ್ದಾರೆ.ಸೋಮವಾರ ವೇಣೂರಿನಲ್ಲಿ ಭಗವಾನ್ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು.

ಭಕ್ತಿಯಿಂದ ಮುಕ್ತಿ: ಶ್ರೀ ಅಮರಕೀರ್ತಿ ಮುನಿಮಹಾರಾಜರು ಆಶೀರ್ವದಿಸಿ, ಭಕ್ತಿಯಿಂದ ಶಕ್ತಿ ಮತ್ತು ಎಲ್ಲಾ ಬಂಧನಗಳಿಂದ ಮುಕ್ತಿ ಸಿಗುತ್ತದೆ. ಸೇವೆ ಎಂಬುದು ಅಮೂಲ್ಯ ಮಾನವೀಯ ಮೌಲ್ಯವಾಗಿದ್ದು ಯಾರ ಸೇವೆ ಮಾಡಬೇಕು, ಯಾರ ಸೇವೆ ಮಾಡಬಾರದು ಎಂದು ನಮಗೆ ತಿಳಿದಿರಬೇಕು. ಪರಿಶುದ್ಧವಾದ ಅಚಲ ಭಕ್ತಿಯಿಂದ ಮಾನವನೇ ಮಾಧವನಾಗಬಲ್ಲ ಎಂದರು.ಕರ್ನಾಟಕದ ಮುಖ್ಯ ಅಂಚೆ ಮಹಾಪ್ರಬಂಧಕ ಶಿರ್ತಾಡಿ ರಾಜೇಂದ್ರ ಕುಮಾರ್, ಅಂಚೆ ಇಲಾಖೆ ಮೂಲಕ ರೂಪಿಸಿದ ಬಾಹುಬಲಿ ಸ್ವಾಮಿಯ ಸಚಿತ್ರ ಅಂಚೆ ಕಾರ್ಡನ್ನು ಮೈಸೂರು ಮಹಾರಾಜರು ಬಿಡುಗಡೆಗೊಳಿಸಿದರು.ಮೌಲ್ಯ ಅವರ ಬಾಹುಬಲಿ ಗೀತಾಮೃತ ಗಾನಲಹರಿ ಬಿಡುಗಡೆಗೊಳಸಿ ಅವರನ್ನು ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಜೈನರು ಕನ್ನಡ ನಾಡು-ನುಡಿ- ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಜೈನ ಸಾಹಿತ್ಯ ಇಲ್ಲದಿದ್ದರೆ ಕನ್ನಡ ಸಾಹಿತ್ಯವೆ ಇಲ್ಲ. ಅನೇಕ ಶ್ರೇಷ್ಠಕೃತಿಗಳನ್ನು ಜೈನ ಕವಿಗಳು ವಿದ್ವಾಂಸರು ಮತ್ತು ಸಾಹಿತಿಗಳು ರಚಿಸಿದ್ದಾರೆ. ಜೈನರ ಶ್ರೇಷ್ಠ ತತ್ವವಾದ ಅಹಿಂಸೆಯಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಮೈಸೂರು ಅರಮನೆ ಮತ್ತು ಅರಸರಿಗೆ ಜೈನರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಜಮಖಂಡಿಯ ಹಿರಿಯ ಸಾಹಿತಿ ಬಿ.ಪಿ.ನ್ಯಾಮಗೌಡ ಜೈನ ಅರಸುಮನೆತನಗಳ ಕೊಡುಗೆ ಬಗ್ಗೆ ವೀಶೇಷ ಉಪನ್ಯಾಸ ನೀಡಿದರು. ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವದಿಸಿದರು.

ಡಾ.ಪದ್ಮಪ್ರಸಾದ ಅಜಿಲ, ಪ್ರವೀಣಕುಮಾರ್ ಇಂದ್ರ, ಜಯರಾಜ ಕಂಬಳಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮತ್ತು ಹುಬ್ಬಳ್ಳಿಯ ಮಹಾವಿರ ಕುಂದೂರು ಇದ್ದರು.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ರಶ್ಮಿತಾ ಜೈನ್ ವಂದಿಸಿದರು. ಆಡಳಿತಾಧಿಕಾರಿ ಬಿ.ಪಿ.ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಸೋಮವಾರ ಸಂಜೆ ಗರ್ಙಾವತರಣ ಕಲ್ಯಾಣದ ದೃಶ್ಯಾವಳಿಗಳ ಪ್ರದರ್ಶನ ನಡೆಯಿತು. ಮಂಗಳವಾರ ಅಪರಾಹ್ನ ಕಲ್ಲು ಬಸದಿಯಲ್ಲಿ ಜನ್ಮಾಭಿಷೇಕ ಕಲ್ಯಾಣ ದೃಶ್ಯಾವಳಿಯ ಪ್ರದರ್ಶನವಿದೆ..