ಸಾರಾಂಶ
ಅಟ್ಟಳಿಗೆ ನಿರ್ಮಾಣ ಕಾರ್ಯ ಇನ್ನೆರಡು ದಿನದಲ್ಲಿ ಪೂರ್ಣಗೊಳ್ಳಲಿದ್ದು, ಬಳಿಕ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಯೋಚನೆ ಇದೆ.ಈ ಬಗ್ಗೆ ಬಳಿಕ ಮಾಹಿತಿ ನೀಡಲಾಗುವುದು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೈಸೂರು ಮಹಾರಾಜರು ಸಭಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು ಕೊನೆಯ ದಿನ ರಾಜ್ಯದ ರಾಜ್ಯಪಾಲರು ಭಾಗವಹಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
‘ಜಗತ್ತಿನಲ್ಲಿ ನಿಶಸ್ತ್ರೀಕರಣದ ಮೂಲಕ ಮೋಹ ಮತ್ತು ಲೋಭವನ್ನು ತೊರೆದು, ತ್ಯಾಗದಿಂದ ಪ್ರೀತಿ ಮತ್ತು ಸಮೃದ್ಧಿ ಹೆಚ್ಚುತ್ತದೆ’ ಎಂಬ ಸಂದೇಶದೊಂದಿಗೆ ಫಲ್ಗುಣಿ ನದಿಯ ಪವಿತ್ರ ಭೂಮಿಯಲ್ಲಿ ಶ್ರೀ ಬಾಹುಬಲಿ ಸ್ವಾಮಿಗೆ ಫೆ.22ರಿಂದ ಮಾ.1ರ ತನಕ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.ಅವರು ಗುರುವಾರ ಮಹಾಮಸ್ತಕಾಭಿಷೇಕ ಭೋಜನಾಲಯದ ಚಪ್ಪರ ಮುಹೂರ್ತವನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಅಭಯದಾನ, ಔಷಧದಾನ, ವಿದ್ಯಾದಾನ, ಅನ್ನದಾನದ ಮೂಲಕ ಆಧ್ಯಾತ್ಮಿಕ ಕ್ಷೇತ್ರವಾದ ಇಲ್ಲಿಗೆ ಬರುವ ಭಕ್ತರಿಗೆ ಅಗತ್ಯ ಸೌಕರ್ಯಗಳನ್ನು ನೀಡಲಾಗುವುದು. ಕಲಿಯುಗದಲ್ಲಿ ಅನ್ನದಾನವೇ ಶ್ರೇಷ್ಠದಾನವಾಗಿದ್ದು, ಮಹಾಮಜ್ಜನದ ಸಂದರ್ಭ ಸಾತ್ವಿಕವಾದ ಭೋಜನ ವ್ಯವಸ್ಥೆ ನಿರಂತರ ನಡೆಯಲಿದೆ. ಉತ್ತರ ಮತ್ತು ದಕ್ಷಿಣ ಭಾರತದ ಹೆಚ್ಚಿನ ಭಕ್ತರು ಆಗಮಿಸಲಿದ್ದಾರೆ. ಹಿಂದಿನ ಕಾಲದಲ್ಲಿ ಆಹಾರ ತಯಾರಿ ಎಂಬುದು ಸವಾಲಾಗಿತ್ತು. ಆದರೆ ಇಂದು ನುರಿತ ಬಾಣಸಿಗರು ಮತ್ತು ಸೌಲಭ್ಯಗಳು ಹೆಚ್ಚಿರುವುದರಿಂದ ಇದು ಸವಾಲಾಗಿ ಉಳಿದಿಲ್ಲ ಎಂದರು.ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲ ಮಾತನಾಡಿ, 9 ದಿನಗಳ ಕಾಲ ನಡೆಯುವ ಮಹಾಮಜ್ಜನ ಬೇರೆ ಬೇರೆ ಭಕ್ತರ ವತಿಯಿಂದ ನೆರವೇರಲಿದೆ. ಕೊನೆಯ ದಿನದ ಮಜ್ಜನವನ್ನು ಸಮಿತಿ ವತಿಯಿಂದ ನಡೆಸಲಾಗುವುದು. ಪ್ರಥಮ ದಿನ 108, ದ್ವಿತೀಯ ದಿನ 216, ಬಳಿಕ 504 ಕಲಶಗಳೊಂದಿಗೆ ಸಾಗುವ ಮಹಾಮಜ್ಜನ ಕೊನೆಯ ದಿನ 1008 ಕಲಶಗಳೊಂದಿಗೆ ಪೂರ್ಣಗೊಳ್ಳಲಿದೆ. ಸರ್ಕಾರದ ವತಿಯಿಂದ ನೀಡಲಾಗಿರುವ 1 ಕೋಟಿ ರುಪಾಯಿ ಅನುದಾನದಲ್ಲಿ ಶಿಲೆಕಲ್ಲು ಅಳವಡಿಕೆ, ಬಸದಿಗಳ ಜೀರ್ಣೋದ್ಧಾರ ಹಾಗೂ ಇನ್ನಿತರ ಕಾಮಗಾರಿಗಳು ನಡೆದಿವೆ. ದೇಶದ ನಾನಾ ಮೂಲೆಗಳಿಂದ ಕಲಶಗಳಿಗೆ ಈಗಾಗಲೇ ಸಾಕಷ್ಟು ಬೇಡಿಕೆ ಇದೆ. ಅನ್ನದಾಸೋಹ, ವಸ್ತು ಪ್ರದರ್ಶನ, ಕಲಶಮಂಟಪ, ಯಜ್ಞ ಶಾಲೆ ಚಪ್ಪರಗಳು ಪ್ರಾಮುಖ್ಯವಾಗಿದ್ದು ಈಗಾಗಲೇ ಇರುವ ಮುಖ್ಯ ಚಪ್ಪರದಲ್ಲಿ ಸಭಾ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಮಹಾ ಮಸ್ತಕಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿ ಜಯರಾಜ್ ಕಂಬಳಿ, ಪ್ರಮುಖರಾದ ಪ್ರವೀಣ್ ಅಜ್ರಿ, ಮಹಾವೀರ್ ಮೂಡುಕೋಡಿ, ಚಂದ್ರಪ್ರಭ ಜೈನ್, ನವೀನ್ ಚಂದ್ ಬಳ್ಳಾಲ್, ಹಂಡೇಲು ಧನಕೀರ್ತಿ ಬಲಿಪ, ಭರತ್ ರಾಜ್ ಅಜ್ರಿ, ಶಂಭಾಶಿನಿ, ಅಶ್ವಿನಿ ಪ್ರವೀಣ್ ಕುಮಾರ್, ನಿತಿನ್ ಬೊಳ್ಜಾಲು, ವೃಷಭರಾಜ ಅಜ್ರಿ, ಹರ್ಷೇಂದ್ರ ಕುಮಾರ್, ಶರ್ಮಿತ್ ಕುಮಾರ್, ವೈ. ಜಯರಾಜ್, ಶಶಿಧರ ಕತ್ತೋಡಿ, ಬ್ರಾಹ್ಮಿ ಮಹಿಳಾ ಸಂಘದ ಸದಸ್ಯರು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ರಾಮಕೃಷ್ಣ ಭಟ್ ನೇತೃತ್ವದಲ್ಲಿ ಪೆಂಡಲ್ ನಿರ್ಮಾಣ ಕೆಲಸ ನಡೆಯುತ್ತಿದೆ.ಪಾಕ ವ್ಯವಸ್ಥೆಗೆ ರಾಜೇಂದ್ರ ಜೈನ್ ಶಿರ್ತಾಡಿ ವ್ಯವಸ್ಥೆ ಕಲ್ಪಿಸಲಿದ್ದಾರೆ. ಬೆಟ್ಟದ ಪುರೋಹಿತ ಚಂದ್ರನಾಥ ಇಂದ್ರ ಪೌರೋಹಿತ್ಯದಲ್ಲಿ ಚಪ್ಪರ ಮುಹೂರ್ತ ನಡೆಯಿತು.ಕೊನೆ ದಿನ ಗವರ್ನರ್ ಭಾಗಿ: ಅಟ್ಟಳಿಗೆ ನಿರ್ಮಾಣ ಕಾರ್ಯ ಇನ್ನೆರಡು ದಿನದಲ್ಲಿ ಪೂರ್ಣಗೊಳ್ಳಲಿದ್ದು, ಬಳಿಕ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಯೋಚನೆ ಇದೆ.ಈ ಬಗ್ಗೆ ಬಳಿಕ ಮಾಹಿತಿ ನೀಡಲಾಗುವುದು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೈಸೂರು ಮಹಾರಾಜರು ಸಭಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು ಕೊನೆಯ ದಿನ ರಾಜ್ಯದ ರಾಜ್ಯಪಾಲರು ಭಾಗವಹಿಸಲಿದ್ದಾರೆ ಎಂದು ಡಾ.ಪದ್ಮ ಪ್ರಸಾದ ಅಜಿಲ ಹೇಳಿದರು.