ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಹತ್ತು ದಿನಗಳಿಂದ ಮುಷ್ಕರ ನಡೆಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದ ಹಿನ್ನೆಲೆ ಅವರು ಹೋರಾಟ ಮುಂದುವರಿಸಿದ್ದು ಇದರಿಂದ ರೈತರು ಮತ್ತು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಬ್ಯಾಂಕಿನಲ್ಲಿ ಸಾಲ ಮತ್ತು ಇತರ ಸರ್ಕಾರದ ಸವಲತ್ತುಗಳನ್ನು ಪಡೆಯಲು ರೈತರಿಗೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಹಲವು ಧೃಢೀಕರಣ ಪತ್ರಗಳ ಅಗತ್ಯವಿದ್ದು ಮುಷ್ಕರದ ಹಿನ್ನೆಲೆ ಅವರ ಸೇವೆ ಲಭ್ಯವಿಲ್ಲದಿರುವುದರಿಂದ ಅವರ ಸಂಕಷ್ಟ ಹೇಳತೀರದಾಗಿದೆ. ಇದರೊಂದಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ರಿಯಾಯಿತಿ ದರದ ಕೃಷಿ ಸಲಕರಣೆ ಮತ್ತು ಬಿತ್ತನೆ ಬೀಜಗಳನ್ನು ಪಡೆಯಲು ರೈತರು ಪರದಾಡುವಂತಾಗಿದ್ದು, ನಿತ್ಯ ಅವರು ಗ್ರಾಮ ಆಡಳಿತಾಧಿಕಾರಿಗಳ ಕಚೇರಿಗೆ ಅಲೆಯುತ್ತಿರುವ ಅವರನ್ನು ಕೇಳುವವರು ಮತ್ತು ಹೇಳುವವರು ಯಾರು ಇಲ್ಲದಂತಾಗಿದೆ. ಶಾಲಾ ವಿದ್ಯಾರ್ಥಿಗಳು ಸಿಇಟಿ ಮತ್ತು ಇತರ ಸರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಜಾತಿ ಮತ್ತು ಆದಾಯ ಪತ್ರ ಸೇರಿದಂತೆ ಹಲವು ದಾಖಲಾತಿಗಳ ಅಗತ್ಯವಿದ್ದು, ಅದಕ್ಕಾಗಿ ಅವರುಗಳು ಸಂಕಷ್ಟಕ್ಕೀಡಾಗಿದ್ದು ಇದರಿಂದ ಭವಿಷ್ಯದಲ್ಲಿ ಅವರಿಗೆ ತೊಂದರೆಯಾಗಲಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲಕಳೆದ 10 ದಿನಗಳಿಂದ ನಾವು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುವಂತೆ ಮುಷ್ಕರ ನಡೆಸುತ್ತಿದ್ದರೂ ಇದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷೆ ಕೆ.ಎಸ್. ಐಶ್ವರ್ಯ ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಮುಷ್ಕರವನ್ನು ಗಂಭೀರವಾಗಿ ಪರಿಗಣಿಸಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದೆ ಜಿಲ್ಲಾ ಮಟ್ಟದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ, ನಮಗೆ ಸರ್ವರೂ ಸಹಕಾರ ನೀಡಬೇಕು ಎಂದು ಕೋರಿದರು. ಗ್ರಾಮ ಆಡಳಿತಾಧಿಕಾರಿಗಳು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಮುಷ್ಕರಕ್ಕೆ ಚುನಾಯಿತ ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳಿಂದ ವ್ಯಾಪಕ ಬೆಂಬಲ ಸೂಚಿಸಿದೆ.