ರಸಗೊಬ್ಬರ, ಬಿತ್ತನೆ ಬೀಜದ ದಾಸ್ತಾನುಗಳ ಪರಿಶೀಲನೆ

| Published : Jun 06 2024, 12:30 AM IST

ಸಾರಾಂಶ

ಕಲಬುರಗಿ ನಗರದ ವಿವಿಧ ಕೃಷಿ ಪರಿಕರಗಳ ಮಾರಾಟ ಮಳಿಗೆಗಳಿಗೆ ಅನೀರಿಕ್ಷಿತ ಭೇಟಿ ನೀಡಿ ರಸಗೊಬ್ಬರ ಬಿತ್ತನೆ ಬೀಜದ ದಾಸ್ತಾನುಗಳನ್ನು ಪರಿಶೀಲಿಸಿ ಹಾಗೂ ಮಾರಾಟದ ಬಿಲ್ ಪುಸ್ತಕಗಳನ್ನು ಪರಿಶೀಲಿಸಿದ ಕೃಷಿ ಇಲಾಖೆ ಅಧಿಕಾರಿಗಳು.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯಲ್ಲಿ 2024ರ ಮುಂಗಾರು ಹಂಗಾಮು ಬಿತ್ತನೆ ಪ್ರಾರಂಭವಾಗಿದ್ದು, ರೈತರು ಕೃಷಿ ಪರಿಕರಗಳ ಮಾರಾಟ ಮಳಿಗೆಗಳಿಂದ ಕೃಷಿ ಪರಿಕರಗಳನ್ನು ಖರೀದಿಸುತ್ತಿರುವ ಹಿನ್ನಲೆಯಲ್ಲಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಸಮದ್ ಪಟೇಲ್ ಮತ್ತು ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ) ಸತೀಶ ಕುಮಾರ ಮತ್ತು ಚಂದ್ರಕಾಂತ ಜೀವಣಗಿ ಅವರು ಬುಧವಾರ ಕಲಬುರಗಿ ನಗರದ ವಿವಿಧ ಕೃಷಿ ಪರಿಕರಗಳ ಮಾರಾಟ ಮಳಿಗೆಗಳಿಗೆ ಅನೀರಿಕ್ಷಿತ ಭೇಟಿ ನೀಡಿ ರಸಗೊಬ್ಬರ ಬಿತ್ತನೆ ಬೀಜದ ದಾಸ್ತಾನುಗಳನ್ನು ಪರಿಶೀಲಿಸಿ ಹಾಗೂ ಮಾರಾಟದ ಬಿಲ್ ಪುಸ್ತಕಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕಲಬುರಗಿಯ ಲಕ್ಷ್ಮೀ ಆಗ್ರೋ ಸಪ್ಲಾಯರ್ಸ್ ಮಾರಾಟ ಮಳಿಗೆಯಲ್ಲಿ ಯುಎಸ್ ಅಗ್ರಿ ಸೀಡ್ಸ್ ಹತ್ತಿ ಬೀಜವಾದ, ಯುಸ್-4708 ಮತ್ತು ಯುಎಸ್-7067 ಬೀಜಗಳನ್ನು ಎಮ್.ಆರ್.ಪಿ. ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಸದರಿ ಕಂಪನಿಯ ಬೀಜ ಮಾರಾಟ ಸ್ಥಗಿತಗೊಳಿಸಲು ಆದೇಶಿಸಿರುತ್ತಾರೆ. ಮಾರಾಟ ಮಳಿಗೆಯ ಮಾಲೀಕರಿಗೆ ದರಕ್ಕಿಂತ ಹೆಚ್ಚಿನ ದರದಲ್ಲಿ ಕೃಷಿ ಪರಿಕರಗಳನ್ನು ಮಾರಾಟ ಮಾಡದಿರಲು ಕಟ್ಟು ನಿಟ್ಟಾಗಿ ನಿರ್ದೇಶನ ನೀಡಿದರು.

ಹೆಚ್ಚನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತವರ ಪರವಾನಿಗೆ ಪತ್ರ ರದ್ದುಗೊಳಿಸಲಾಗುತ್ತದೆ ಮತ್ತು ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ. ಅಲ್ಲದೆ ರಸಗೊಬ್ಬರ ಮಾರಾಟವನ್ನು ಮುಖಾಂತರವೇ ಮಾರಾಟ ಮಾಡಲು ಎಚ್ಚರಿಕೆ ನೀಡಲಾಗಿದೆ.

ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಕೃಷಿ ಪರಿಕರಗಳನ್ನು ಮಾರಾಟ ಕಂಡು ಬಂದಲ್ಲಿ ರೈತ ಬಾಂಧವರು ಜಂಟಿ ಕೃಷಿ ನಿರ್ದೇಶಕರ ಕಚೇರಿ/ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಮಾಹಿತಿ ನೀಡಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.