ಮಕ್ಕಳು ತಮ್ಮ ಭವಿಷ್ಯವನ್ನು ಸುಂದರವಾಗಿಸಿಕೊಳ್ಳಲು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿರಂತಹ ಮಹಾನ್ ನಾಯಕರ ಜೀವನದ ಆದರ್ಶಗಳನ್ನು ಅರಿತು ಅಳವಡಿಸಿಕೊಳ್ಳಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಮರಡೆಪ್ಪ ಮಾಳಗಿ ಹೇಳಿದರು.
ರಾಣಿಬೆನ್ನೂರು: ಮಕ್ಕಳು ತಮ್ಮ ಭವಿಷ್ಯವನ್ನು ಸುಂದರವಾಗಿಸಿಕೊಳ್ಳಲು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿರಂತಹ ಮಹಾನ್ ನಾಯಕರ ಜೀವನದ ಆದರ್ಶಗಳನ್ನು ಅರಿತು ಅಳವಡಿಸಿಕೊಳ್ಳಬೇಕು ಮತ್ತು ಅವರಂತೆ ಸಮಾಜ ಸುಧಾರಣೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಮರಡೆಪ್ಪ ಮಾಳಗಿ ಹೇಳಿದರು.
ಇಲ್ಲಿನ ಮಾರುತಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ ಜನ್ಮದಿನದ ಸಮಾರಂಭದಲ್ಲಿ ಅವರು ಮಾತನಾಡಿದರು. ಮಕ್ಕಳನ್ನು ಆಧುನಿಕ ತಂತ್ರಜ್ಞಾನದ ವಸ್ತುಗಳು ಮತ್ತು ಮಾಧ್ಯಮಗಳಿಂದ ದೂರ ಇಟ್ಟು ಪುಸ್ತಕಗಳ ಅಧ್ಯಯನದ ಕಡೆಗೆ ಹೆಚ್ಚು ಗಮನ ಹರಿಸುವಂತೆ ನೋಡಿಕೊಳ್ಳುವುದು ಶಿಕ್ಷಕರು ಮತ್ತು ತಂದೆ-ತಾಯಿಗಳ ಮಹತ್ವದ ಜವಾಬ್ದಾರಿಯಾಗಿದೆ ಎಂದರು.ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಸೋಮರೆಡ್ಡಿ ಹಾದಿಮನಿ ಮಾತನಾಡಿ, ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ಹಸಿವು, ನೀರಡಿಕೆ ಮತ್ತು ಬಳಲಿಕೆಯ ಅನುಭವವನ್ನು ತಿಳಿಸಿಕೊಟ್ಟಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ನಾಯಕ ಅಥವಾ ಆಡಳಿತಗಾರನಾಗಲು ಸಾಧ್ಯ. ವಿದ್ಯಾರ್ಥಿಗಳು ದೇಶದ ಸ್ವಾತಂತ್ರ‍್ಯ ಮತ್ತು ಜನರ ಹಿತಕ್ಕಾಗಿ ತಮ್ಮ ಜೀವನವನ್ನೇ ಮೀಸಲಿಟ್ಟ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜೀವನ ಸಾಧನೆಗಳನ್ನು ಅರಿತು ಅನುಸರಿಸುವಂತಾಗಬೇಕು ಎಂದರು.
ಮುಖ್ಯೋಪಾಧ್ಯಾಯ ರಮೇಶ ಕಾಳಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.