ಸಾರಾಂಶ
-ಹಲ್ಸಿ ತೂಗಾಂವದಲ್ಲಿ ನೂತನವಾಗಿ ನಿರ್ಮಾಣಗೊಂಡ ಪಶು ಆಸ್ಪತ್ರೆ ಉದ್ಘಾಟಿಸಿದ ಸಂಸದ ಸಾಗರ ಖಂಡ್ರೆ
-----ಕನ್ನಡಪ್ರಭ ವಾರ್ತೆ ಭಾಲ್ಕಿ
ಜಿಲ್ಲೆಯ ಸಮಗ್ರ ಪ್ರಗತಿಗೆ ಅವಿರತವಾಗಿ ಶ್ರಮಿಸುವುದಾಗಿ ಸಂಸದ ಸಾಗರ ಖಂಡ್ರೆ ಭರವಸೆ ನೀಡಿದರು.ತಾಲೂಕಿನ ಗಡಿ ಭಾಗದ ಹಲ್ಸಿ ತೂಗಾಂವ ಗ್ರಾಮದಲ್ಲಿ 38 ಲಕ್ಷ ರು.ವೆಚ್ಚದ ಪಶು ಚಿಕಿತ್ಸಾಲಯ ಕಟ್ಟಡ ಉದ್ಘಾಟನೆ ಮತ್ತು 67 ಲಕ್ಷ ರು.ವೆಚ್ಚದಲ್ಲಿ ಶಾಲಾ ಕೋಣೆ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ ಜನರ ಆಶೀರ್ವಾದದಿಂದ ಸಂಸದನಾಗಿ ಆಯ್ಕೆಯಾಗಿದ್ದೇನೆ. ಜನರ ಸಮಸ್ಯೆ ಬಗೆ ಹರಿಸಲು ಸಂಸತ್‌ನ ಒಳಗೆ ಮತ್ತು ಹೊರಗೆ ಜನರ ಧ್ವನಿಯಾಗಿ ಹೋರಾಟ ಮಾಡುವುದಾಗಿ ತಿಳಿಸಿದರು.ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಇದೆ. ಸಚಿವರಾಗಿ ಅವರಿಗೆ ಜವಾಬ್ದಾರಿ ಹೆಚ್ಚಿದ್ದರೂ ಕ್ಷೇತ್ರವನ್ನು ಎಂದಿಗೂ ಕಡೆಗಣಿಸಿಲ್ಲ. ಅಭಿವೃದ್ಧಿಗೆ ಭರಪೂರ ಅನುದಾನ ನೀಡುತ್ತಿದ್ದಾರೆ. ಹೀಗಾಗಿ ತಾಲೂಕಿನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದಾರೆ.
ಶಾಲಾ-ಕಾಲೇಜು, ಆಸ್ಪತ್ರೆ, ವಿವಿಧ ಕಚೇರಿ ಕಟ್ಟಡಗಳು ಮಾದರಿಯಾಗಿ ನಿರ್ಮಾಣಗೊಂಡಿವೆ. ರಸ್ತೆ, ಚರಂಡಿ ವೇಗವಾಗಿ ಪ್ರಗತಿ ಕಾಣುತ್ತಿವೆ. ಕುಡಿವ ನೀರು, ನೀರಾವರಿ ಕ್ಷೇತ್ರಕ್ಕೂ ಆದ್ಯತೆ ನೀಡುತ್ತಿದ್ದಾರೆ ಎಂದರು.ಗಡಿ ಭಾಗದ ಹಲ್ಸಿ ತೂಗಾಂವ ಗ್ರಾಮದಲ್ಲಿ 38 ಲಕ್ಷ ರು. ವೆಚ್ಚದಲ್ಲಿ ಹೊಸದಾಗಿ ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಾಣಗೊಂಡಿದೆ. ಜತೆಗೆ ಶಾಲಾ ಕೋಣೆ ನಿರ್ಮಾಣಕ್ಕೂ 67 ಲಕ್ಷ ರು.ಅನುದಾನ ಒದಗಿಸಲಾಗಿದೆ. ಪಶು ವೈದ್ಯರು ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗಿ ರೈತರ ಜಾನುವಾರುಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಪ್ರಮುಖರು, ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.--
ಚಿತ್ರ 20ಬಿಡಿಆರ್60ಭಾಲ್ಕಿ ತಾಲೂಕಿನ ಹಲ್ಸಿ ತೂಗಾಂವ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಪಶು ಆಸ್ಪತ್ರೆ ಕಟ್ಟಡ ಸಂಸದ ಸಾಗರ ಖಂಡ್ರೆ ಉದ್ಘಾಟಿಸಿದರು.
--