68 ಲಕ್ಷ ಮನೆಗಳಿಗೆ ಮಂದಿರ ಮಂತ್ರಾಕ್ಷತೆ

| Published : Jan 20 2024, 02:03 AM IST

ಸಾರಾಂಶ

ದ.ಕರ್ನಾಟಕದಲ್ಲಿ 38 ಲಕ್ಷ, ಉ.ಕರ್ನಾಟಕದಲ್ಲಿ 30 ಲಕ್ಷ ಮನೆಗಳಿಗೆ ಈವರೆಗೆ ರಾಮಮಂದಿರ ಉದ್ಘಾಟನೆ ಅಂಗವಾಗಿ ಮಂತ್ರಾಕ್ಷತೆ ವಿತರಣೆ ಮಾಡಲಾಗಿದೆ. ಅಲ್ಲದೆ 15 ಸಾವಿರ ಮುಸ್ಲಿಮರ ಮನೆಗೂ ಮಂತ್ರಾಕ್ಷತೆ ವಿತರಿಸಲಾಗಿದೆ. ವಿಎಚ್‌ಪಿ, ಬಿಜೆಪಿ ವಿವಿಧ ಸಂಘಟನೆಗಳಿಂದ ಸ್ವಯಂಸೇವಕರು ಮನೆಮನೆಗೆ ಮಂತ್ರಾಕ್ಷತೆ ವಿತರಿಸುವ ಸೇವೆ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಜ್ಯದಲ್ಲಿ ಈವರೆಗೆ 68 ಲಕ್ಷ ಮನೆಗಳಿಗೆ ಅಯೋಧ್ಯೆಯ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಕಳುಹಿಸಿರುವ ಮಂತ್ರಾಕ್ಷತೆಯನ್ನು ವಿತರಿಸಲಾಗಿದೆ. ಈ ಪೈಕಿ, ದಕ್ಷಿಣ ಕರ್ನಾಟಕ ಭಾಗದಲ್ಲಿ 38 ಲಕ್ಷ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ 30 ಲಕ್ಷಕ್ಕೂ ಅಧಿಕ ಮನೆಗಳಿಗೆ ಮಂತ್ರಾಕ್ಷತೆ ವಿತರಿಸಲಾಗಿದೆ.

ಕರ್ನಾಟಕದಲ್ಲಿ ಮಂತ್ರಾಕ್ಷತೆ ನೀಡುವ ಕಾರ್ಯಕ್ಕೆ ಜ.1ರಂದು ಚಾಲನೆ ನೀಡಲಾಗಿತ್ತು. ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್‌, ಬಿಜೆಪಿ, ಹಲವು ಸಂಘ-ಸಂಸ್ಥೆಗಳು, ಪುರುಷ, ಮಹಿಳಾ ಮಂಡಳಗಳು ಸೇರಿದಂತೆ ಸಾವಿರಾರು ಸ್ವಯಂಸೇವಾ ಸಂಸ್ಥೆಗಳು ಈ ಕೈಂಕರ್ಯ ಕೈಗೊಂಡಿವೆ.

ಇದೇ ವೇಳೆ, ರಾಜ್ಯದ 15 ಸಾವಿರಕ್ಕೂ ಹೆಚ್ಚು ಮುಸ್ಲಿಮರ ಮನೆಗಳಿಗೂ ಮಂತ್ರಾಕ್ಷತೆ ವಿತರಿಸಲಾಗಿದೆ. ಶ್ರೀರಾಮನ ಬಗ್ಗೆ ಭಕ್ತಿ, ಶ್ರದ್ಧೆ ಹೊಂದಿರುವ ಮುಸ್ಲಿಂರು ಅಷ್ಟೇ ಗೌರವದಿಂದ ಮಂತ್ರಾಕ್ಷತೆ ಸ್ವೀಕರಿಸಿ, ರಾಮ ಮಂದಿರ ಉದ್ಘಾಟನೆ ನಿರ್ವಿಘ್ನವಾಗಿ ನೆರವೇರಲಿ ಎಂದು ಹಾರೈಸಿದ್ದಾರೆ. ಜತೆಗೆ ತಮ್ಮ ಶಕ್ತ್ಯಾನುಸಾರ ಭಕ್ತಿ ಕಾಣಿಕೆಯನ್ನೂ ಸಮರ್ಪಿಸಿದ್ದಾರೆ.

ಮುಸ್ಲಿಮರಿಗೆ ಮಂತ್ರಾಕ್ಷತೆ ವಿತರಿಸಿರುವುದು ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚು. ಈ ಮಧ್ಯೆ, ಕಾರ್ಯಕರ್ತರು ಮನೆಮನೆಗೆ ತೆರಳಿ ಮಂತ್ರಾಕ್ಷತೆ ವಿತರಿಸುವ ವೇಳೆ ಮುಸ್ಲಿಂ ಮನೆಗಳಿಗೆ ವಿತರಿಸದೆ ಹಾಗೆ ಹೋಗುತ್ತಿದ್ದ ವೇಳೆ ಅಲ್ಲಿನ ಮುಸ್ಲಿಮರು ಸ್ವ ಇಚ್ಛೆಯಿಂದಲೇ ಹಿಂದೂ ಕಾರ್ಯಕರ್ತರನ್ನು ಕರೆದು ಮಂತ್ರಾಕ್ಷತೆ ಪಡೆದುಕೊಂಡ ಉದಾಹರಣೆಗಳು ಇವೆ. ಇನ್ನು ಕೆಲವು ಮುಸ್ಲಿಮರು ತಾವು ಪಡೆದ ಮಂತ್ರಾಕ್ಷತೆಯನ್ನು ಜ.22ರಂದು ಹತ್ತಿರದ ಮಂದಿರಗಳಿಗೆ ತೆರಳಿ ತಲುಪಿಸುವ ಸಂಕಲ್ಪ ಮಾಡಿದ್ದಾರೆ.

ಮಂತ್ರಾಕ್ಷತೆಯನ್ನು ಏನು ಮಾಡಬೇಕು?:

ಈ ಬಗ್ಗೆ ‘ಕನ್ನಡಪ್ರಭ’ ಜೊತೆ ಮಾತನಾಡಿದ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಮಂತ್ರಾಕ್ಷತೆ ವಿತರಣೆ ವೇಳೆಯೇ ಮಂತ್ರಾಕ್ಷತೆ ಬಳಕೆ ಹಾಗೂ ಪೂಜಾ ವಿಧಿವಿಧಾನದ ಕುರಿತು ಮಾಹಿತಿ ನೀಡಲಾಗಿದೆ. ಮಂತ್ರಾಕ್ಷತೆ ತಲುಪಿದ ದಿನದಿಂದ ವಿಸರ್ಜನೆ ಮಾಡುವವರೆಗೂ ನಿತ್ಯವೂ ಇದನ್ನು ಪೂಜಿಸಬೇಕು. ಜ.22ರಂದು ಪ್ರತಿಷ್ಠಾಪನೆಯ ದಿನದಂದು ಶ್ರೀರಾಮಮಂದಿರ ಇಲ್ಲವೇ ಹತ್ತಿರದ ಮಂದಿರಗಳಿಗೆ ತೆರಳಿ ಈ ಮಂತ್ರಾಕ್ಷತೆ ತಲುಪಿಸಿ ಸಂಜೆ ತಮ್ಮ ಮನೆಯಲ್ಲಿ ಕುಟುಂಬಸ್ಥರೆಲ್ಲರೂ ಸೇರಿ ದೀಪ ಬೆಳಗಿಸಿ ಈ ಪ್ರತಿಷ್ಠಾಪನಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಕೆಲವರು ಈ ಮಂತ್ರಾಕ್ಷತೆಯನ್ನು ಅಯೋಧ್ಯೆಗೆ ತೆರಳಿಯೇ ವಿಸರ್ಜನೆ ಮಾಡುವ ಸಂಕಲ್ಪ ಹೊಂದಿದ್ದು, ಅಂತಹ ಮನೆಗಳಲ್ಲಿ ನಿತ್ಯವೂ ಮಂತ್ರಾಕ್ಷತೆಯ ಪೂಜೆ ನಡೆಯಲಿದೆ ಎಂದು ತಿಳಿಸಿದರು.