ಬಪ್ಪನಾಡು ಜಾತ್ರೆ ವ್ಯಾಪಾರದಲ್ಲಿ ಹಿಂದೂಯೇತರರಿಗೆ ಅವಕಾಶ ನೀಡದಂತೆ ಮನವಿ

| Published : Mar 24 2024, 01:37 AM IST

ಬಪ್ಪನಾಡು ಜಾತ್ರೆ ವ್ಯಾಪಾರದಲ್ಲಿ ಹಿಂದೂಯೇತರರಿಗೆ ಅವಕಾಶ ನೀಡದಂತೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಹಿಂದೂ ಪರಿಷತ್ , ಬಜರಂಗದಳ ಮೂಲ್ಕಿ ಪ್ರಖಂಡದ ವತಿಯಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಚುನಾವಣೆ ಹೊತ್ತಲ್ಲಿ ದ.ಕ ಜಿಲ್ಲೆಯ ಪ್ರಸಿದ್ಧ ದೇವಸ್ಥಾನದಲ್ಲಿ ಮತ್ತೆ ವ್ಯಾಪಾರ ಬಗ್ಗೆ ಧರ್ಮ ದಂಗಲ್ ಶುರುವಾಗಿದೆ. ಅನ್ಯಮತೀಯರಿಗೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದಂತೆ ಆಗ್ರಹಿಸಲಾಗಿದೆ.

ಬಪ್ಪನಾಡು ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಹಿಂದೂಯೇತರರಿಗೆ ಯಾವುದೇ ಕಾರಣಕ್ಕೂ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ , ಬಜರಂಗದಳ ಮೂಲ್ಕಿ ಪ್ರಖಂಡದ ವತಿಯಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಯಿತು.

ದೇವಸ್ಥಾನದ ಆಡಳಿತ ಮಂಡಳಿಯ ಅನುವಂಶಿಕ ಮೊಕ್ತೇಸರ ಮೂಲ್ಕಿ ಸೀಮೆಯ ದುಗ್ಗಣ್ಣ ಸಾವಂತರು, ಆಡಳಿತ ಮೊಕ್ತೇಸರ ಎನ್‌.ಎಸ್‌. ಮನೋಹರ ಶೆಟ್ಟಿ ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೂಲ್ಕಿ ಪ್ರಖಂಡ ಕಾರ್ಯದರ್ಶಿ ಶ್ಯಾಮ್ ಸುಂದರ್ ಶೆಟ್ಟಿ, ಗೋರಕ್ಷಾ ಪ್ರಮುಖ್ ರಾಜೇಶ್ ಎಸ್. ಕೋಡಿ, ಪವನ್ ಕುಮಾರ್ ಪಕ್ಷಿಕೆರೆ, ಕೀರ್ತನ್ ಕೆರೆಕಾಡು, ತನುಷ್ ಕಾರ್ನಾಡು, ಪ್ರಶಾಂತ್, ಶಶಿ ಲಿಂಗಪ್ಪಯ್ಯಕಾಡು ಮತ್ತಿತರರು ಉಪಸ್ಥಿತರಿದ್ದರು.

ಬಪ್ಪನಾಡು ದೇವಳದಲ್ಲಿ ವರ್ಷಾವದಿ ಜಾತ್ರಾ ಮಹೋತ್ಸವವು ಮಾರ್ಚ್‌ 24ರಿಂದ ಆರಂಭಗೊಂಡು ಮಾರ್ಚ್‌ 31ರ ವರೆಗೆ ನಡೆಯಲಿದ್ದು ಲಕ್ಷಾಂತರ ಮಂದಿ ಭಕ್ತರು ಭಾಗವಹಿಸುತ್ತಾರೆ. ದೇವಸ್ಥಾನದ 150 ಮೀ ವ್ಯಾಪ್ತಿಯೊಳಗೆ ಅನ್ಯಮತೀಯ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು. ದೇವಸ್ಥಾನದ ವಠಾರದಲ್ಲಿ ಹಿಂದುಗಳೇ ವ್ಯಾಪಾರ ಮಾಡಬೇಕು. ದೇವಸ್ಥಾನದ ಹೊರಗೆ ಸರ್ಕಾರಿ ಜಾಗದಲ್ಲಿ ವ್ಯಾಪಾರ ಮಾಡೋದಕ್ಕೆ ನಮ್ಮ ತಕರಾರಿಲ್ಲ. ಹಿಂದೂ ದೇವಸ್ಥಾನದಲ್ಲಿ ಹಿಂದೂಗಳ ಹಕ್ಕು ಕೇಳುತ್ತಿದ್ದೇವೆ. ಸರ್ಕಾರ ಬದಲಾಗಿದ್ದರೂ ಪರವಾಗಿಲ್ಲ ಕಾನೂನಿನ ಅನ್ವಯ ದೇವಸ್ಥಾನದಲ್ಲಿ ವಠಾರದಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲವೆಂದು ಮನವಿಯಲ್ಲಿ ತಿಳಿಸಲಾಗಿದೆ.