ಶೇ.100ರಷ್ಟು ಮತದಾನಕ್ಕೆ ವಿಎಚ್‍ಪಿ ಅಭಿಯಾನ

| Published : Apr 07 2024, 01:48 AM IST

ಸಾರಾಂಶ

ಕೇಂದ್ರದಲ್ಲಿ ಹಿಂದೂ ಪರ ಸರಕಾರ ಅಧಿಕಾರಕ್ಕೆ ತರಲು ಶೇ.100ರಷ್ಟು ಮತದಾನ ನಡೆಯುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯನಿರ್ವಹಿಸುತ್ತಿದೆ ಎಂದು ವಿಎಚ್‍ಪಿ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೇಂದ್ರದಲ್ಲಿ ಹಿಂದೂ ಪರ ಸರಕಾರ ಅಧಿಕಾರಕ್ಕೆ ತರಲು ಶೇ.100ರಷ್ಟು ಮತದಾನ ನಡೆಯುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯನಿರ್ವಹಿಸುತ್ತಿದೆ ಎಂದು ವಿಎಚ್‍ಪಿ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಜಗತ್ತಿನಲ್ಲಿ ಭಾರತ ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ಶಕ್ತಿಶಾಲಿ ರಾಷ್ಟ್ರ ಎಂದು ಗುರುತಿಸಿಕೊಂಡಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಪೂರಕ ವಾತಾವರಣ ನಿರ್ಮಿಸುವ ದಿಶೆಯಲ್ಲಿ ಕೇಂದ್ರದಲ್ಲಿ ಹಿಂದೂ ಪರ ಸರಕಾರ ರಚನೆಯಾಗುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ವಿಶ್ವ ಹಿಂದೂ ಪರಿಷತ್ತಿಗೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ 153 ತಾಲೂಕುಗಳಲ್ಲಿ ಪರಿಷತ್ತಿನ ಕಾರ್ಯವ್ಯಾಪ್ತಿ ವಿಸ್ತರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಅದರಲ್ಲೂ ಮುಖ್ಯವಾಗಿ ಅವಿಭಕ್ತ ಕುಟುಂಬಗಳನ್ನು ರಕ್ಷಿಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಸಮಾಜದಲ್ಲಿ ಬೇರು ಬಿಟ್ಟಿರುವ ಅಸ್ಪೃಶ್ಯತೆ ಆಚರಣೆ, ಜಾತೀಯತೆಯನ್ನು ಬೇರು ಮಟ್ಟದಿಂದ ಕಿತ್ತೊಗೆಯುವ ಕೆಲಸವನ್ನು ವಿಶ್ವ ಹಿಂದು ಪರಿಷತ್ತು ಮಾಡುತ್ತಿದೆ ಎಂದರು.

ದೇಶ, ಭಾಷೆ, ಸಂಪ್ರದಾಯ ಮತ್ತು ಸಂಸ್ಕೃತಿಯ ರಕ್ಷಣೆಗೆ ಆದ್ಯತೆ ನೀಡುವುದರೊಂದಿಗೆ ಸ್ವದೇಶಿ ಜೀವನಶೈಲಿ ಅನುಸರಿಸುವಂತೆ ಯುವಕರು ಸೇರಿದಂತೆ ದೇಶದ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಲಿಂಗರಾಜಪ್ಪ ಅಪ್ಪ ನುಡಿದರು.

ತೆರಿಗೆಯಿಂದ ತಪ್ಪಿಸಿಕೊಳ್ಳಲು ವ್ಯಾಪಾರಿಗಳಿಂದ ಬಿಲ್ ಕೇಳದಿರುವ ದುರಭ್ಯಾಸ ಕೊನೆಗಾಣಿಸಲು ಪೌರತ್ವ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಭಾರತವನ್ನು ವಿಶ್ವಗುರು ಮಾಡುವ ಪ್ರಾಮಾಣಿಕ ಯತ್ನ ಮಾಡಲಾಗುತ್ತಿದೆ ಎಂದು ನುಡಿದರು.

ವಿಎಚ್‍ಪಿ ಕರ್ನಾಟಕ ಉತ್ತರ ಪ್ರಾಂತದ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ವಿಎಚ್‍ಪಿ ಜಿಲ್ಲಾಧ್ಯಕ್ಷ ರಾಜು ನವಲದಿ, ಅಶ್ವಿನ್‍ಕುಮಾರ್ ಇದ್ದರು.