ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ ತೀರ್ಪನ್ನು ವಿಶ್ವ ಹಿಂದೂ ಪರಿಷತ್‌ ಸ್ವಾಗತಿಸಿದೆ.ಆರೋಪಿಯು ಇತಿಹಾಸ ಪ್ರಸಿದ್ಧ ಕದ್ರಿ ದೇವಸ್ಥಾನವನ್ನು ಸ್ಪೋಟಿಸಿ ನೂರಾರು ಜನರ ಹತ್ಯೆಗೆ ಸಂಚು ರೂಪಿಸಿದ್ದ, ಆದರೆ ಕಂಕನಾಡಿ ಗರೋಡಿ ಶ್ರೀಬ್ರಹ್ಮಬೈದರ್ಕಳ ಕ್ಷೇತ್ರದ ರಸ್ತೆಯ ಎದುರು ಸಣ್ಣ ಪ್ರಮಾಣದಲ್ಲಿ ಸ್ಫೋಟಗೊಂಡು ಅವನ ಕೃತ್ಯ ವಿಫಲವಾಯಿತು. ಅವನ ಉದ್ದೇಶ ಕದ್ರಿ ದೇವಸ್ಥಾನವನ್ನು ಸ್ಪೋಟಿಸಿ ನೂರಾರು ಭಕ್ತರನು ಹತ್ಯೆ ಮಾಡುವುದಾಗಿತ್ತು. ಇದನ್ನು ಪರಿಗಣಿಸಿ ಶಿಕ್ಷೆಯ ಪ್ರಮಾಣ ಹೆಚ್ಚಾಗಬೇಕಿತ್ತು, ಆದರೆ ಶಿಕ್ಷೆಯ ಪ್ರಮಾಣ ಕಡಿಮೆಯಾಗಿದೆ. ಶಿಕ್ಷೆಯ ಪ್ರಮಾಣ ಹೆಚ್ಚಿಸಲು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕು ಎಂದು ತಕ್ಷಣ ರಾಷ್ಟ್ರೀಯ ತನಿಖಾ ದಳಕ್ಕೆ ಆಗ್ರಹಿಸುತ್ತೇವೆ ಎಂದು ವಿಎಚ್‌ಪಿ ತಿಳಿಸಿದೆ.

ಗರೋಡಿಯಲ್ಲಿ ವಿಶೇಷ ಪೂಜೆ: ಕುಕ್ಕರ್ ಬ್ಲಾಸ್ಟ್ ಆರೋಪಿ ಶಾರೀಕ್ ಗೆ ಶಿಕ್ಷೆಯಾದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಮಂಗಳೂರಿನ ಕಂಕನಾಡಿ ಗರೋಡಿ ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಲಾಯಿತು. ದೊಡ್ಡ ಪ್ರಮಾಣದಲ್ಲಿ ನಡೆಯಬೇಕಿದ್ದ ಅನಾಹುತವನ್ನು ಶ್ರೀ ಕ್ಷೇತ್ರದ ದೈವಿಕ ಶಕ್ತಿಯೇ ತಪ್ಪಿಸಿ ಅಂದು ಮಂಗಳೂರನ್ನು ರಕ್ಷಿಸಿ ತಪಿತಸ್ಥನಿಗೆ ಶಿಕ್ಷೆಯಾಗುವ ಮೂಲಕ ನ್ಯಾಯವನ್ನು ಒದಗಿಸಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು ಜೊತೆಗೆ ತಪಿತಸ್ಥನಿಗೆ ಶಿಕ್ಷೆಯ ಪ್ರಮಾಣ ಹೆಚ್ಚಾಗುವಂತೆ ದೇವರ ಸಾನಿಧ್ಯದಲ್ಲಿ ಪ್ರಾರ್ಥಿಸಲಾಯಿತು.ಮಂಗಳೂರಿನಲ್ಲಿ ಎನ್‌ಐಎ ಕಚೇರಿಗೆ ಬೇಡಿಕೆ: ಕಳೆದ ಹಲವು ವರ್ಷಗಳಿಂದ ಕರಾವಳಿಯನ್ನು ಗುರಿಯಾಗಿಸಿಟ್ಟುಕೊಂಡು, ಪದೇ ಪದೇ ವಿಧ್ವಂಸಕ ಚಟುವಟಿಕೆಗಳ ನಡೆಯುತ್ತಿದ್ದು, ಅಲ್ಲದೆ ದೇಶದ ಯಾವುದೊ ಭಾಗದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆದಾಗ ಮಂಗಳೂರಿಗೆ ನಂಟು ಇರುವುದಲ್ಲದೆ ಹಲವರ ಬಂಧನವೂ ಆಗಿದೆ. ಕುಕ್ಕರ್ ಬಾಂಬ್ ಬ್ಲಾಸ್ಟ್, ಭಯೋತ್ಪಾದನೆಯನ್ನು ಬೆಂಬಲಿಸುವ ಗೋಡೆ ಬರಹ, ಸ್ಯಾಟಲೈಟ್ ಫೋನ್ ಬಳಕೆ, ನಿಷೇಧಿತ ಸಂಘಟನೆಗಳ ಸಕ್ರೀಯತೆ, ನಿರಂತರ ಲವ್ ಜಿಹಾದ್ ನಂತಹ ಪ್ರಕರಣಗಳು ನಡೆಯುತ್ತಿದ್ದು ಇದರಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುತ್ತಿದೆ. ಕರಾವಳಿ ಜನರ ಭದ್ರೆತೆಯ ಹಿತದೃಷ್ಟಿಯಿಂದ ಇನ್ನಾದರೂ ಮಂಗಳೂರಿನಲ್ಲಿ ಎನ್‌ಐಎ ಶಾಶ್ವತ ಕಚೇರಿ ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಆಗ್ರಹಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಪ್ರಕಟಣೆಯಲ್ಲಿ ತಿಳಿಸಿದರು.